

ನವದೆಹಲಿ: ಇಂದಿರಾ ಗಾಂಧಿ ಅವರ ಕುಟುಂಬವೇ ರಾಜಕೀಯದಲ್ಲಿ ಮಿಂದೆದ್ದಿರುವ ಕುಟುಂಬವೆಂದರೆ ತಪ್ಪಾಗಲಾರದು. ಮೂರು ತಲೆಮಾರಿನವರು ಕಾಂಗ್ರೆಸ್ನಲ್ಲಿ ಪ್ರಮುಖ ಸ್ಥಾನಗಳನ್ನು ವಹಿಸಿಕೊಂಡು ಅಧಿಕಾರ ನಿರ್ವಹಿಸಿದ್ದಾರೆ. ಇದೀಗ ಅದೇ ಕುಟುಂಬದ ಮತ್ತೊಬ್ಬ ವ್ಯಕ್ತಿ ರಾಜಕೀಯ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಬೇನಾಮಿ ಆಸ್ತಿ ಪ್ರಕರಣದಲ್ಲಿ ಪ್ರಿಯಾಂಕಾ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾರನ್ನು ಜಾರಿ ನಿರ್ದೇಶನಾಲಯ ತನಿಖೆಗೆ ಒಳಪಡಿಸಿದೆ. ಪ್ರಕರಣದಲ್ಲಿ ಸಿಲುಕಿಕೊಂಡು, ವಿಚಾರಣೆಗಳಿಂದ ಬೇಸತ್ತಿರುವ ರಾಬರ್ಟ್ ವಾದ್ರಾ ತಮ್ಮ ಮನದ ಮಾತನ್ನು ಹೊರ ಹಾಕಿದ್ದಾರೆ. ಸಾಕಷ್ಟು ವರ್ಷ ಜನರ ಸೇವೆಯಲ್ಲಿ ತೊಡಗಿಸಿಕೊಂಡು, ಸೇವೆಗಾಗಿಯೇ ಪ್ರಾಣ ತ್ಯಾಗ ಮಾಡಿದ ಕುಟುಂಬಕ್ಕೆ ನಾನು ಸೇರಿದ್ದೇನೆ ಎನ್ನುವ ಕಾರಣಕ್ಕೆ ನನ್ನ ಮೇಲೆ ಇಂತಹ ಪ್ರಕರಣಗಳು ದಾಖಲಾಗಿವೆ. ಈ ಸಮಯದಲ್ಲಿ ನಾನು ಸಂಸತ್ತಿನಲ್ಲಿರಬೇಕಿತ್ತು. ಇಂತಹ ಸಮಸ್ಯೆಗಳ ವಿರುದ್ಧ ಅಲ್ಲಿಂದಲೇ ಹೋರಾಡಬೇಕಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
ನ್ಯಾಷನಲ್ ಕ್ಯಾಪಿಟಲ್ ರೀಜನ್ (ಎನ್ಸಿಆರ್), ಲಂಡನ್ ಮತ್ತು ಇತರ ನಗರಗಳಲ್ಲಿನ ಬೆನಾಮಿ ಆಸ್ತಿಗಳ ಬಗ್ಗೆ ಈ ವಾರದ ಆರಂಭದಲ್ಲಿ ರಾಬರ್ಟ್ ವಾದ್ರಾ ಅವರನ್ನು ಇಡಿ ತನಿಖೆ ನಡೆಸಿದೆ. ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿರುವುದಾಗಿ ಅವರು ತಿಳಿಸಿದ್ದಾರೆ. (ಏಜೆನ್ಸೀಸ್)