

ತಮಿಳುನಾಡು: ಬೆಲೆಬಾಳುವ ಬಂಗಾರವನ್ನು ಆಭರಣವಾಗಿ ಬಳಸುತ್ತಾರೆ, ಅಗತ್ಯಕ್ಕಿಂತ ಹೆಚ್ಚು ತೊಟ್ಟವರು ನಾಲ್ಕು ಜನ ನೋಡಲಿ ಎಂದು ಶೋಕಿಗಾಗಿಯೂ ಧರಿಸಿರಬಹುದು. ಆದರೆ ಇವರು ಕೆ.ಜಿ.ಗಟ್ಟಲೆ ಚಿನ್ನವನ್ನು ಯಾರೂ ನೋಡದ ಜಾಗದಲ್ಲಿ ಇರಿಸಿಕೊಂಡಿದ್ದರು. ಒಂದು ವೇಳೆ ಈ ಚಿನ್ನವನ್ನು ಹಾಗೇ ಯಾರದ್ದಾದರೂ ಕೈಗಿಟ್ಟು ಎಲ್ಲಿಂದ ಸಿಕ್ಕಿತು ಎಂದರೆ ಮುಟ್ಟಲಿಕ್ಕೂ ಅಸಹ್ಯ ಅನಿಸಬಹುದು!
ಹೌದು.. ಇದು ಚಿನ್ನ ಕಳ್ಳಸಾಗಣೆಯ ವಿಷಯ. ಇದರಲ್ಲಿ ಇಬ್ಬರು ಪ್ರತ್ಯೇಕವಾಗಿ ತೊಡಗಿಸಿಕೊಂಡಿದ್ದು, ಇಬ್ಬರೂ ಕೊನೆಗೂ ಸಿಕ್ಕಿಬಿದ್ದಿದ್ದಾರೆ. ಚೆನ್ನೈನ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 1.97 ಕೋಟಿ ರೂಪಾಯಿ ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿದೆ. ದುಬೈ/ಶಾರ್ಜಾ ವಿಮಾನದಿಂದ ಬಂದಿದ್ದ ಇವರು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದರು. ಆ ಪೈಕಿ ಒಬ್ಬಳು ಮಹಿಳೆ 600 ಗ್ರಾಮ್ ಚಿನ್ನವನ್ನು ಚಾಕಲೇಟ್ ಪ್ಯಾಕೆಟ್ ಒಳಗಿರಿಸಿ ಕಳ್ಳಸಾಗಣೆ ಮಾಡುತ್ತಿದ್ದಳು. ಮತ್ತೊಬ್ಬ ಪ್ರಯಾಣಿಕ 3.18 ಕೆ.ಜಿ. ತೂಕದ ಚಿನ್ನವನ್ನು ಗುದದ್ವಾರದಲ್ಲಿ ಇಟ್ಟುಕೊಂಡು ಕಳ್ಳಸಾಗಣೆ ಮಾಡುತ್ತಿದ್ದ. ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿರುವ ಕಸ್ಟಮ್ಸ್ ಅಧಿಕಾರಿಗಳು ಆ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. (ಏಜೆನ್ಸೀಸ್)