ಲೋಕಸಭೆ ಚುನಾವಣೆ: ಅಮೇಥಿಯಿಂದ ರಾಬರ್ಟ್ ವಾದ್ರಾ ಸ್ಪರ್ಧೆ ಬಹುತೇಕ ಖಚಿತ!

rg
Published on

ಅಮೇಥಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಬರ್ಟ್ ವಾದ್ರಾ ಅವರು ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಸ್ವತಃ ರಾಬರ್ಟ್ ವಾದ್ರಾ ಅವರೇ ತಾನು ಅಮೇಥಿಯಿಂದ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.

ಎಎನ್‌ಐ ಜೊತೆ ಮಾತನಾಡಿದ ವಾದ್ರಾ, ಅಮೇಥಿ ಕ್ಷೇತ್ರದ ಜನರು ಹಾಲಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ವಿರೋಧಿ ಅಲೆ ಶುರುವಾಗಿದೆ. ಅಮೇಥಿ ಜನರಿಗೆ ಗಾಂಧಿ ಪರಿವಾರದವರು ಬೇಕಾಗಿದ್ದಾರೆ. ತಾನು ರಾಜಕೀಯಕ್ಕೆ ಬರುವುದಾದರೆ ಅಮೇಥಿ ಕ್ಷೇತ್ರವೇ ನನ್ನ ಆಯ್ಕೆ ಆಗಿರುತ್ತದೆ ಎನ್ನುವ ಮೂಲಕ ರಾಜಕೀಯಕ್ಕೆ ಬರುವ ಸುಳಿವನ್ನು ನೀಡಿದ್ದಾರೆ.

ಅಮೇಥಿ, ರಾಯ್ ಬರೇಲಿ, ಸುಲ್ತಾನ್‌ಪುರ ಮತ್ತು ಜಗದೀಶ್‌ಪುರದ ಕ್ಷೇತ್ರದ ಅಭಿವೃದ್ಧಿಗೆ ಗಾಂಧಿ ಕುಟುಂಬವು ಹಲವು ವರ್ಷಗಳಿಂದ ಶ್ರಮಿಸಿದೆ. ಹಾಲಿ ಅಮೇಥಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ವಾಗ್ದಾಳಿ ರಾಬರ್ಟ್​ ವಾದ್ರಾ, ಈಗಿನ ಸಂಸದರಿಂದ ಅಮೇಥಿ ಜನರು ರೋಸಿ ಹೋಗಿದ್ದಾರೆ. ಆಕೆಯನ್ನು ಆಯ್ಕೆ ಮಾಡಿ ತಪ್ಪು ಮಾಡಿದ್ದೇವೆ ಎಂದು ಜನರಿಗೆ ಮನದಟ್ಟಾಗಿದೆ ಎಂದರು.

ನಾನು ಸಂಸದನಾಗುವುದಾದರೆ ಅಮೇಥಿ ಕ್ಷೇತ್ರವನ್ನು ಪ್ರತಿನಿಧಿಸಲಿ ಎಂದು ಕ್ಷೇತ್ರದ ಜನರು ನಿರೀಕ್ಷಿಸುತ್ತಿದ್ದಾರೆ. ವರ್ಷಗಳಿಂದ ಗಾಂಧಿ ಕುಟುಂಬದವರು ರಾಯ್ ಬರೇಲಿ, ಅಮೇಥಿ, ಸುಲ್ತಾನ್​ಪುರ್​ನಲ್ಲಿ ಪರಿಶ್ರಮ ಹಾಕಿದ್ದಾರೆ ಎಂದು ವಾದ್ರಾ ತಿಳಿಸಿದ್ದಾರೆ. ಜನರು ಬಯಸಿದರೆ ಸಕ್ರಿಯ ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ಯೋಚಿಸುವುದಾಗಿ ಈ ಹಿಂದೆಯೇ ವಾದ್ರಾ ಹೇಳಿದ್ದರು.

ಸ್ಮೃತಿ ಇರಾನಿ ರಾಹುಲ್ ವಿರುದ್ಧ ನಿಕಟ ಪೈಪೋಟಿ ನೀಡಿದ್ದರು: ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವ ನಶಿಸಿದರೂ ಅಮೇಥಿ, ರಾಯ್​ಬರೇಲಿ ಕ್ಷೇತ್ರಗಳು ಕಾಂಗ್ರೆಸ್​ನ ಭದ್ರಕೋಟೆಯಾಗಿವೆ. ಆದರೆ, 2019ರಲ್ಲಿ ಸ್ಮೃತಿ ಇರಾನಿ ಅಮೇಥಿಯಲ್ಲಿ ಕಾಂಗ್ರೆಸ್ ಕೋಟೆ ಉರುಳಿಸಿ ಬಿಜೆಪಿಗೆ ಗೆಲುವು ತಂದಿದ್ದರು. ಅಪ್ಪಟ ಭದ್ರಕೋಟೆ ಎನಿಸಿದ್ದ ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋತಿದ್ದರು. 2014ರ ಚುನಾವಣೆಯಲ್ಲೇ ಸ್ಮೃತಿ ಇರಾನಿ ರಾಹುಲ್ ವಿರುದ್ಧ ನಿಕಟ ಪೈಪೋಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ 2019ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅಮೇಥಿ ಜೊತೆಗೆ ಕೇರಳದ ವಯನಾಡು ಕ್ಷೇತ್ರದಿಂದಲೂ ಸ್ಪರ್ಧಿಸಿದ್ದರು. ಅಮೇಥಿಯಲ್ಲಿ ಅವರು ಸೋತರೂ ವಯನಾಡಿನ ಜನರು ಕೈ ಹಿಡಿದಿದ್ದರು.

ರಾಯ್‌ಬರೇಲಿ ಲೋಕಸಭೆ ಕ್ಷೇತ್ರವು ತೆರವಾಗಿದೆ: ಅಮೇಥಿ ಲೋಕಸಭೆ ಕ್ಷೇತ್ರದಿಂದ ರಾಹುಲ್‌ ಗಾಂಧಿ ಹಾಗೂ ರಾಯ್‌ಬರೇಲಿ ಕ್ಷೇತ್ರದಿಂದ ಪ್ರಿಯಾಂಕಾ ವಾದ್ರಾ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿತ್ತು.ರಾಯ್‌ಬರೇಲಿ ಸಂಸದೆಯಾಗಿದ್ದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ರಾಜಸ್ಥಾನದಿಂದ ರಾಜ್ಯಸಭೆಗೆ ಸ್ಪರ್ಧಿಸಿ, ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಾಗಾಗಿ, ಸೋನಿಯಾ ಗಾಂಧಿ ಅವರು 2004ರಿಂದಲೂ ಸ್ಪರ್ಧಿಸುತ್ತಿದ್ದ ರಾಯ್‌ಬರೇಲಿ ಲೋಕಸಭೆ ಕ್ಷೇತ್ರವು ತೆರವಾಗಿದೆ. ಇದೇ ಕ್ಷೇತ್ರದಲ್ಲಿ ಈಗ ಪ್ರಿಯಾಂಕಾ ವಾದ್ರಾ ಅವರು ಮೊದಲ ಬಾರಿಗೆ ಲೋಕಸಭೆ ಚುನಾವಣೆ ಕಣಕ್ಕೆ ಇಳಿಯಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ಮಗಳಿಗೆ ರಾಯ್‌ಬರೇಲಿ ಕ್ಷೇತ್ರವನ್ನು ಬಿಟ್ಟುಕೊಡಲೆಂದೇ ಸೋನಿಯಾ ಗಾಂಧಿ ಅವರು ರಾಜ್ಯಸಭೆಗೆ ಪ್ರವೇಶಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಉತ್ತರಪ್ರದೇಶದ ಅಮೇಥಿ, ರಾಯ್​ಬರೇಲಿ ಕ್ಷೇತ್ರಗಳು ಕಾಂಗ್ರೆಸ್​ನ ಭದ್ರಕೋಟೆಯಾಗಿವೆ. ಆದರೆ ಇದುವರೆಗೂ ಮುಂಬರುವ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಘೋಷಣೆ ಮಾಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net