ಶೇ.60ರಷ್ಟು ರಸ್ತೆ ಅಪಘಾತದ ದುರ್ದೈವಿಗಳು ಈ ವಯಸ್ಸಿನವರೇ! ಶಾಕಿಂಗ್ ಮಾಹಿತಿ ಹಂಚಿಕೊಂಡ ಸಚಿವ ನಿತಿನ್ ಗಡ್ಕರಿ

ವಿಜಯವಾಣಿ - 2024-12-12T194505.395
Published on

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ, ಇಂದು (ಡಿ.12) ಸಂಸತ್ತಿನ ಅಧಿವೇಶನದಲ್ಲಿ ರಸ್ತೆ ಅಪಘಾತಗಳ ಕುರಿತು ಆತಂಕಕಾರಿ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಭಾರತೀಯ ರಸ್ತೆಗಳಲ್ಲಿ ಸುರಕ್ಷತೆಯನ್ನು ಸುಧಾರಿಸಲು ಮಾನವ ನಡವಳಿಕೆಯಲ್ಲಿ ಮೂಲಭೂತ ಬದಲಾವಣೆಯ ಅಗತ್ಯತೆ ಹೆಚ್ಚಿದೆ ಎಂದು ಒತ್ತಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಮಾತನಾಡಿದ ಗಡ್ಕರಿ, “ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುವ ಬಗ್ಗೆ ಮರೆತುಬಿಡಿ. ಹೆಚ್ಚಿದೆ ಎಂಬುದನ್ನು ಒಪ್ಪಿಕೊಳ್ಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ದೇಶದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳಿಗೆ ಸರಿಸುಮಾರು 1,78,000 ಜೀವಗಳು ಬಲಿಯಾಗುತ್ತಿವೆ. ಶೇ.60ರಷ್ಟು ಮೃತರು 18ರಿಂದ 34 ವರ್ಷ ವಯಸ್ಸಿನವರಾಗಿದ್ದಾರೆ. ರಸ್ತೆ ಅಪಘಾತ ಸಾವುಗಳಲ್ಲಿ ಉತ್ತರ ಪ್ರದೇಶವು 23,000ಕ್ಕೂ ಅಧಿಕ ಸಾವುಗಳೊಂದಿಗೆ ದೇಶದಲ್ಲಿ ಮುಂಚೂಣಿಯಲ್ಲಿದೆ" ಎಂದರು.

"ತಮಿಳುನಾಡು 18,000 ಮತ್ತು ಮಹಾರಾಷ್ಟ್ರದಲ್ಲಿ 15,000ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಉತ್ತರ ಪ್ರದೇಶ ರಾಜ್ಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ನಗರಗಳ ಪಟ್ಟಿಯಲ್ಲಿ ದೆಹಲಿ ಮೊದಲಿಗಿದೆ. ಮಹಾರಾಷ್ಟ್ರದಲ್ಲಿ, ಈ ಅಂಕಿ ಅಂಶವು 15,000 (ಅಥವಾ ಒಟ್ಟು ಸಾವುಗಳಲ್ಲಿ ಒಂಬತ್ತು ಪ್ರತಿಶತ), ಮಧ್ಯಪ್ರದೇಶದಲ್ಲಿ 13,000 (ಶೇಕಡಾ ಎಂಟು)ಕ್ಕೂ ಅಧಿಕ ಸಾವಿನ ಸಂಖ್ಯೆಯಿದೆ. 1,400 ಮೃತರ ಸಂಖ್ಯೆಯಲ್ಲಿ ದೆಹಲಿ ಸಿಟಿ ಪಟ್ಟಿಯಲ್ಲಿ ಮೊದಲಿದ್ದರೆ, 915 ಸಾವುಗಳೊಂದಿಗೆ ಬೆಂಗಳೂರು ನಂತರದ ಸ್ಥಾನದಲ್ಲಿದೆ. ರಸ್ತೆಯ ಬದಿಯಲ್ಲಿ ಸೂಚನೆ ಇಲ್ಲದಂತೆ ಟ್ರಕ್‌ಗಳನ್ನು ನಿಲ್ಲಿಸುವುದೇ ಇಂತಹ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಹಲವು ಟ್ರಕ್‌ಗಳು ಲೇನ್ ಶಿಸ್ತನ್ನು ಅನುಸರಿಸುವುದಿಲ್ಲ" ಎಂದು ಹೇಳಿದ್ದಾರೆ.

ಅಸಮರ್ಪಕ ಟ್ರಕ್ ಪಾರ್ಕಿಂಗ್ ಮತ್ತು ಲೇನ್ ಶಿಸ್ತಿನ ಕೊರತೆಯು ಅಪಘಾತಗಳಿಗೆ ಗಮನಾರ್ಹ ಕೊಡುಗೆಯಾಗಿದೆ. ಸುರಕ್ಷತೆಯನ್ನು ಹೆಚ್ಚಿಸಲು, ತುರ್ತು ಪರಿಸ್ಥಿತಿಗಳಿಗಾಗಿ ಬಸ್ ಕಿಟಕಿಗಳ ಬಳಿ ಸುತ್ತಿಗೆಗಳನ್ನು ಅಳವಡಿಸುವುದು ಸೇರಿದಂತೆ ಬಸ್ ಉತ್ಪಾದನೆಗೆ ಅಂತಾರಾಷ್ಟ್ರೀಯ ಮಾನದಂಡಗಳನ್ನು ಜಾರಿಗೊಳಿಸುವ ಯೋಜನೆಗಳನ್ನು ಸಚಿವರು ಘೋಷಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net