ಹಠ ಮಾಡಿದ್ದಕ್ಕೆ 3 ಲಕ್ಷ ರೂ. ಸಾಲ ಮಾಡಿ ಬೈಕ್​ ಖರೀದಿಸಿದ ಪಾಲಕರು: ಆದ್ರೆ ಆಗಿದ್ದು ಮಾತ್ರ ಸಾವಿನ ಸವಾರಿ! Road Accident

Road Accident
Published on

Road Accident : ಕೆಲವು ಮಕ್ಕಳು ತಮ್ಮ ಹೆತ್ತವರ ಕಷ್ಟಗಳನ್ನು ಅರ್ಥಮಾಡಿಕೊಂಡು ಎಲ್ಲವನ್ನು ಸರಿದೂಗಿಸಿಕೊಂಡು ಹೋಗುತ್ತಾರೆ. ಆದರೆ, ಕೆಲವರು ತಮ್ಮ ಹಠಮಾರಿ ಸ್ವಭಾವದಿಂದ ಪಾಲಕರನ್ನು ಇನ್ನಿಲ್ಲದಂತೆ ಕಾಡುತ್ತಾರೆ. ಇನ್ನೊಂದೆಡೆ, ತಮ್ಮ ಮಕ್ಕಳಿಗಾಗಿ ಯಾವುದೇ ಕಷ್ಟವನ್ನು ಸಹಿಸಿಕೊಳ್ಳುವ ಪಾಲಕರಿದ್ದಾರೆ. ಮಕ್ಕಳಿಗೆ ಉತ್ತಮ ಜೀವನವನ್ನು ಒದಗಿಸಲು ಬಯಸುತ್ತಾರೆ. ಅವರಿಗಾಗಿ ತಾವು ಸರಳ ಜೀವನವನ್ನು ನಡೆಸುತ್ತಾರೆ. ನಾವು ಅನುಭವಿಸಿದ ನೋವನ್ನು ನಮ್ಮ ಮಕ್ಕಳು ಅನುಭವಿಸಬಾರದು ಎಂದು ಭಾವಿಸುತ್ತಾರೆ.

ತಮ್ಮ ಪಾಲಕರ ಕಷ್ಟ-ಸುಖವನ್ನು ಅರಿಯದ ಕೆಲವು ಮಕ್ಕಳು ಬೇರೆಯವರಿಂದ ಪ್ರಭಾವಿತರಾಗಿ ದುಬಾರಿ ವಾಚ್​, ಮೊಬೈಲ್​ ಹಾಗೂ ಬೈಕ್​ಗಾಗಿ ಒತ್ತಾಯ ಮಾಡುತ್ತಾರೆ.​ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಅದರ ಬಗ್ಗೆ ಯೋಚನೆ ಮಾಡುವುದಿಲ್ಲ. ಆದರೆ, ಪಾಲಕರು ತಮ್ಮ ಮಕ್ಕಳ ಖುಷಿಗಾಗಿ ಸಾಲ ಮಾಡಿಯಾದರೂ ಅವರು ಕೇಳಿದ್ದನ್ನು ಕೊಡಿಸುತ್ತಾರೆ. ಅದೇ ರೀತಿ ಯುವಕನೊಬ್ಬ ಹಠ ಮಾಡಿ ತನ್ನಿಷ್ಟದ ಬೈಕ್​ ತೆಗೆಸಿಕೊಂಡನು. ಮಗ ಚೆನ್ನಾಗಿರಲಿ ಅಂತಾ ಪಾಲಕರು ಕೂಡ ತೆಗೆದುಕೊಟ್ಟರು. ಆದರೆ, ವಿಧಿಯಾಟ ಮಾತ್ರ ಬೇರೆಯೇ ಇತ್ತು. ಏಕೆಂದರೆ, ಮಗ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾನೆ.

ಅಂದಹಾಗೆ, ಈ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಮಹಾರಾಣಿಪೇಟೆಯಲ್ಲಿ ವಾಸಿಸುವ ಆಟೋ ಚಾಲಕ ಶ್ರೀನಿವಾಸ ರಾವ್ ದಂಪತಿಗೆ ಹರೀಶ್ (19) ಎಂಬ ಮಗನಿದ್ದ. ಪಿಯುಸಿವರೆಗೆ ಓದಿದ್ದ ಹರೀಶ್ ನಿರುದ್ಯೋಗಿಯಾಗಿದ್ದ. ಇತ್ತೀಚೆಗೆ ಮನೆಯಲ್ಲಿ ಬೈಕ್ ಕೊಡಿಸುವಂತೆ ಕೇಳಿದ್ದ.

ತಂದೆ ಶ್ರೀನಿವಾಸ ರಾವ್ ತನ್ನ ಬಳಿ ಹಣವಿಲ್ಲ ಎಂದು ಮಗನಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಆದರೆ, ಮಗ ಮಾತ್ರ ಅಪ್ಪನ ಮಾತನ್ನು ಕೇಳಲೇ ಇಲ್ಲ. ಹರೀಶ್​ ಹಠಮಾರಿ ಸ್ವಭಾವದವ. ಬೇಕೆ ಬೇಕು ಅಂತ ಪಟ್ಟು ಹಿಡಿದ. ಕೊನೆಗೆ ಬೇರೆ ದಾರಿಯಿಲ್ಲದೇ 3 ಲಕ್ಷ ರೂ. ಸಾಲ ಮಾಡಿ ದಸರಾ ದಿನದಂದೇ ಪಾಲಕರು ಬೈಕ್ ಖರೀದಿಸಿದರು.

ಇತ್ತೀಚೆಗೆ ಹರೀಶ್ ತನ್ನ ಸ್ನೇಹಿತ ವಿನಯ್ ಜೊತೆ ಟಿಫಿನ್ ಮಾಡಲು ಹೊಸ ಬೈಕ್‌ನಲ್ಲಿ ದ್ವಾರಕಾನಗರ ಆರ್‌ಟಿಸಿ ಕಾಂಪ್ಲೆಕ್ಸ್‌ಗೆ ಹೋದನು. ಟಿಫಿನ್ ಮಾಡಿದ ನಂತರ, ವಿನಯ್​ನನ್ನು ಮನೆಗೆ ಡ್ರಾಪ್ ಮಾಡಲು ಹೋದನು. ಅದು ಹೊಸ ಬೈಕ್ ಆಗಿದ್ದರಿಂದ ಇಬ್ಬರು ಸ್ನೇಹಿತರು ಅತಿ ವೇಗದಲ್ಲಿ ಬೈಕ್ ಚಲಾಯಿಸಿದರು. ಆರ್‌ಟಿಸಿ ಕಾಂಪ್ಲೆಕ್ಸ್‌ನಿಂದ ಅತಿಯಾದ ವೇಗದಲ್ಲಿ ಹೋಗುವಾಗ, ಸಿರಿಪುರಂ ದತ್ ದ್ವೀಪದ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಬೈಕ್​ ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ಹರೀಶ್ ಗಂಭೀರವಾಗಿ ಗಾಯಗೊಂಡನು. ಆತನ ಸ್ನೇಹಿತ ವಿನಯ್ ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡಸದೃಶ ರೀತಿಯಲ್ಲಿ ಪಾರಾದನು. ಹರೀಶ್​ನನ್ನು ತಕ್ಷಣವೇ 108 ಆಂಬ್ಯುಲೆನ್ಸ್‌ನಲ್ಲಿ ಕೆಜಿಎಚ್‌ಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಪಡೆಯುತ್ತಿದ್ದಾಗ ಹರೀಶ್ ಮೃತಪಟ್ಟಿದ್ದಾನೆ. ಇದನ್ನು ಕೇಳಿ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಈ ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net