

| ಮಂಜುನಾಥ ಕೆ. ಬೆಂಗಳೂರು
ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ರಸ್ತೆ ಅಪಘಾತ ಪ್ರಕರಣ ಹೆಚ್ಚಾಗುತ್ತಿವೆ. 2022ನೇ ಸಾಲಿನಲ್ಲಿ 36,100 ರಸ್ತೆ ಅಪಘಾತಗಳು ನಡೆದಿದ್ದು, 9,857 ಮಂದಿ ಮೃತಪಟ್ಟಿದ್ದಾರೆ. 2019ರಲ್ಲಿ 40,658 ಅಪಘಾತಗಳಲ್ಲಿ 10,958 ಮಂದಿ, 2020ರಲ್ಲಿ 34,178 ಅಪಘಾತಗಳಲ್ಲಿ 9,760 ಮಂದಿ ಹಾಗೂ 2021ರಲ್ಲಿ 34,647 ಅಪಘಾತಗಳಲ್ಲಿ 10,038 ಮಂದಿ ಸಾವಿಗೀಡಾಗಿದ್ದರು. ಈ ಅಂಕಿ-ಅಂಶಗಳನ್ನು ಗಮನಿಸಿದ್ದಾಗ ವರ್ಷದಿಂದ ವರ್ಷಕ್ಕೆ ಅಪಘಾತ ಮತ್ತು ಅಪಘಾತದಿಂದ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಬೆಂಗಳೂರಿನಲ್ಲಿ ಹೆಚ್ಚು: ರಾಜಧಾನಿ ಬೆಂಗಳೂರಿನಲ್ಲಿ ಅತೀ ಹೆಚ್ಚು ಅಪಘಾತ ಪ್ರಕರಣಗಳು ನಡೆದಿದೆ. 2019ರಲ್ಲಿ 4684 ಅಪಘಾತಗಳಲ್ಲಿ 768 ಮಂದಿ, 2020ರಲ್ಲಿ 3233 ಅಪಘಾತಗಳಲ್ಲಿ 646 ಮಂದಿ, 2021ರಲ್ಲಿ 3213 ಅಪಘಾತಗಳಲ್ಲಿ 654 ಮಂದಿ ಮೃತಪಟ್ಟಿದ್ದಾರೆ. ಇನ್ನು 2022ರಲ್ಲಿ (ನವೆಂಬರ್ವರೆಗೂ) ಒಟ್ಟು 3,479 ಅಪಘಾತ ಪ್ರಕರಣಗಳು ನಡೆದಿದ್ದು, 670 ಮಂದಿ ಮೃತಪಟ್ಟಿದ್ದಾರೆ. ಗದಗ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ 294 ಅಪಘಾತಗಳಲ್ಲಿ 141 ಮಂದಿ ಮೃತಪಟ್ಟಿರುವುದಾಗಿ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ವರದಿ ದೃಢಪಡಿಸಿದೆ.
1.55 ಲಕ್ಷ ಮಂದಿ ಬಲಿ!: ಪ್ರಪಂಚದಲ್ಲಿ ಪ್ರತಿವರ್ಷ ಸುಮಾರು 1.3 ದಶಲಕ್ಷ ಜನರು ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದು, ಭಾರತದಲ್ಲಿ ಈ ಪ್ರಮಾಣ 1.55 ಲಕ್ಷದಷ್ಟಿದೆ. ಬೆಂಗಳೂರಿನಲ್ಲಿ ಪ್ರತಿ ವರ್ಷ ಸರಾಸರಿ 750 ಮಂದಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗುತ್ತಿದ್ದು, ಅಂದಾಜು 5 ಸಾವಿರ ಮಂದಿ ಗಾಯಾಳುಗಳಾಗುತ್ತಿದ್ದಾರೆ.
ಕಡಿಮೆಯಾಗದ ಪ್ರಮಾಣ: ಅಪಘಾತಗಳನ್ನು ನಿಯಂತ್ರಿಸಲು ಪೊಲೀಸ್ ಮತ್ತು ಸಾರಿಗೆ ಇಲಾಖೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದರೂ, ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಮದ್ಯಪಾನ ಮಾಡಿ ವಾಹನ ಚಾಲನೆ ವಿರುದ್ಧ ಆಂದೋಲನ, ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಆಂದೋಲನ, ಪಥ ಶಿಸ್ತು ಆಂದೋಲನ, ಮೊಬೈಲ್ ಬಳಕೆಯ ವಿರುದ್ಧ ಆಂದೋಲನ ಸೇರಿ ಇತರೆ ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆ ಹಮ್ಮಿಕೊಂಡು ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುತ್ತಿದೆ.
ಪ್ರತಿಯೊಬ್ಬ ಸವಾರನೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಾಹನ ಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಮತ್ತು ಚಾಲನಾ ಕೌಶಲವನ್ನು (ಡ್ರೖೆವಿಂಗ್ ಸ್ಕಿಲ್) ಅರಿತಿರಬೇಕು. ಆಗ ಮಾತ್ರ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯ. | ಡಾ. ಎಂ.ಎ.ಸಲೀಂ ಬೆಂಗಳೂರು ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ
ಅಪಘಾತ ಹೆಚ್ಚಲು ಕಾರಣ?: ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮದ್ಯ ಸೇವಿಸಿ ವಾಹನ ಚಲಾಯಿಸುವುದು, ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಸವಾರಿ, ವಾಹನ ಚಾಲನೆ ವೇಳೆ ಸೀಟ್ ಬೆಲ್ಟ್ ಧರಿಸದಿರುವುದು, ಮೊಬೈಲ್ ಬಳಕೆ ಮಾಡುವುದು ಮತ್ತಿತರ ಕಾರಣಗಳಿಂದ ಅಪಘಾತ ಘಟಿಸುತ್ತಿವೆ. 2022ರಲ್ಲಿ ಬೆಂಗಳೂರು ನಗರವೊಂದರಲ್ಲಿಯೇ 1 ಕೋಟಿಗೂ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ.