

ಹೈದರಾಬಾದ್: ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾದ ಕಾರಣಕ್ಕೆ ಯುವಕನೊಬ್ಬ ಆಕೆಯ ಸಹೋದರರಿಂದಲೇ ಹತ್ಯೆಯಾಗಿದ್ದಾನೆ. ಯುವತಿಯ ಸಹೋದರರು ಆತನನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ಮಾಡಿ ಕೊಲೆಗೈದಿದ್ದಾರೆ.
ಹೈದರಾಬಾದ್ನ ಗೊಲ್ಕೊಂಡದ ಲಂಗರ್ ಹೌಸ್ ಬಳಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. 25 ವರ್ಷದ ಯುವಕನನ್ನು ಆತನ ಪತ್ನಿಯ ಸಹೋದರರೇ ಬೆನ್ನಟ್ಟಿಕೊಂಡು ಬಂದು ಕೊಂದಿದ್ದಾರೆ. ರಸ್ತೆಯಲ್ಲಿ ವಾಹನಗಳು ಓಡಾಡುವ ಸಮಯದಲ್ಲೇ ಇವರು ಬೆನ್ನಟ್ಟಿದ್ದು, ಹರಿತವಾದ ಆಯುಧಗಳಿಂದ ಹಲ್ಲೆ ಮಾಡಿದ್ದಾರೆ.
ಗಂಭೀರವಾಗಿ ಗಾಯಗೊಂಡ ಯುವಕ ಸಾವಿಗೀಡಾಗಿದ್ದಾನೆ. ಸಾರ್ವಜನಿಕರು ಈ ಹಲ್ಲೆಯ ವಿಡಿಯೋ ಮಾಡಿದ್ದು, ಆ ತುಣುಕು ವೈರಲ್ ಆಗಿದೆ. ಯುವತಿಗೆ ಕಳೆದ ವರ್ಷ ಬೇರೆ ಒಬ್ಬನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆದರೆ ಈಕೆ ಮನೆ ಬಿಟ್ಟು ಹೋಗಿ ತಾನು ಪ್ರೀತಿಸಿದ್ದವನ ಜೊತೆ ಮದುವೆಯಾಗಿದ್ದಳು. ಈ ಕಾರಣಕ್ಕೆ ಸಿಟ್ಟಾಗಿದ್ದ ಸಹೋದರರು ಒಂದು ವರ್ಷದ ಬಳಿಕ ಸಹೋದರಿಯ ಪತಿಯನ್ನು ಕೊಂದು ಸೇಡು ತೀರಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸ್ ತನಿಖೆ ನಡೆಯುತ್ತಿದೆ.