

ಸರಸ್ವತೀನದಿಯು ಯಾವ ಕಾರಣಕ್ಕೆ ಅದರ್ಶನವನ್ನು ಹೊಂದಿತೋ, ಮುಂದಂತೂ ಗಂಗೆಯೇ ಮುಖ್ಯನದಿಯಾಯಿತು. ನಿತ್ಯವೂ ಸ್ನಾನ ಮಾಡುವಾಗ ‘ಗಂಗೇ ಚ ಯಮುನೇ ಚೈವ’ ಎಂದು, ಸರಸ್ವತಿಯನ್ನೂ ಮರೆಯದೆ, ಸಪ್ತನದಿಗಳನ್ನು ಸ್ಮರಿಸಿ ಕೊಳ್ಳುತ್ತೇವಲ್ಲವೇ? ಆದರೆ ಅಮೆರಿಕದಲ್ಲೇನೂ ‘ಮಿಸ್ಸಿಸ್ಸಿಪ್ಪೀ ಚ ಮಸ್ಸೂರೀ ಟೆನ್ನೆಸ್ಸೀ ಕೊಲೊರಾಡೊ ಚ’ ಎಂದು ನದೀಸ್ಮರಣ ಮಾಡುವುದಿಲ್ಲ! ಬ್ರಿಟಿಷರು ‘ಥೇಮ್ಸ್ ನದೀ ಟ್ರೆಂಟ್ನದೀ ಚೈವ’ ಎಂದು ಹೇಳಿಕೊಳ್ಳುವುದಿಲ್ಲ. ವೋಲ್ಗಾ ಅಮೆಜಾನ್ ನದಿಗಳನ್ನು ರಷ್ಯನ್ನರೋ ದಕ್ಷಿಣ ಅಮೆರಿಕದವರೋ ಭಕ್ತಿಪೂರ್ವಕವಾಗಿ ಸ್ಮರಿಸುವುದಿಲ್ಲ. ಅವರ ಪಾಲಿಗೆ ಅದೊಂದು ಭೌತಿಕ ಪದಾರ್ಥವಷ್ಟೇ.
ವೈದಿಕ ದೇವತೆಗಳನ್ನು ಕುರಿತು ಪಾಶ್ಚಾತ್ಯರು ಮಾಡುವ ಅವಹೇಳನ ಗೊತ್ತಿರುವಂತಹುದೇ: ‘ಮಾನವ-ನಾಗರಿಕತೆಯ ಆರಂಭಾವಸ್ಥೆಯಲ್ಲಿ ಪ್ರಕೃತಿಯ ಶಕ್ತಿಗಳನ್ನು ಕಂಡರೆ ಭಯವೇ ಭಯ; ಎಂದೇ ನೀರಿ ಗೊಂದು ದೇವತೆ, ಬೆಂಕಿಗೊಂದು ದೇವತೆ, ಗಾಳಿಗೊಂದು ದೇವತೆ, ಮಳೆಗೊಂದು ದೇವತೆಯಾಗಿರುವುದು. ಪ್ರಕೃತಿಯ ಶಕ್ತಿಗಳಿಗೆ ಹೆದರಿಕೊಂಡು ಅವಕ್ಕೆಲ್ಲಾ ಒಂದೊಂದು ದೇವತೆಗಳನ್ನು ಕಲ್ಪಿಸಿಬಿಟ್ಟಿರುವರು, ಭಾರತೀಯರು’ ಎಂದು. ಹಾಗಿದ್ದರೆ, ‘ಏಕಂ ಸತ್, ಏಕೋ ದೇವಃ’ ಎಂದು ಏಕ ತತ್ತ್ವದ ವಿಸ್ತಾರವಾಗಿಯೇ ನಾನಾ ದೇವತೆಗಳನ್ನು ಕಂಡುಕೊಂಡಿರುವುದರ ಅರ್ಥವೇನು? ಸರ್ವಶಕ್ತವಾದ ಮೂಲಶಕ್ತಿಯ ನಾನಾಂಶಗಳೇ ಈ ದೇವತೆಗಳೆಲ್ಲಾ - ಎಂಬುದನ್ನು ಮನಗಂಡಿಲ್ಲವೇ? ಅಪವ್ಯಾಖ್ಯಾನಕ್ಕೆ ಎಡೆ(ಲ್ಲೆ)ಯೆಲ್ಲಿ?
ಭಾರತದ ಸರ್ವನದಿಗಳ ವಿಷಯದಲ್ಲೂ ನಮ್ಮವರಿಗೆ ಪೂಜ್ಯಭಾವನೆಯೇ. ಇದಾದರೂ, ಬರೀ ಹೊಟ್ಟೆಪಾಡಿನ ಬೆಳೆ, ಅಡಿಗೆಗಳಿಗೆ ಅಡಿಗಡಿಗೆ ಬೇಕಾದ ನೀರಿದು ಎಂಬ ಭಾವನೆಯಿಂದಲ್ಲ, ಬಂದಿರುವುದು. ಪಾಶ್ಚಾತ್ಯ ಲೆಕ್ಕಾಚಾರ ಅಷ್ಟಕ್ಕೆ ಸೀಮಿತವಾಗಬಹುದು. ಅದನ್ನು ಮೀರಿದ ಲೆಕ್ಕಾಚಾರವುಂಟು. ಅದು ದೈವಿಕವಾದ ಲೆಕ್ಕಾಚಾರ. ಅದಿರುವುದರಿಂದಲೇ ನದಿಗಳ ದಿವ್ಯ ಸಾನ್ನಿಧ್ಯವನ್ನು ಸ್ನಾನಸಮಯದಲ್ಲಿ ನಿತ್ಯವೂ ಬಯಸುವುದು. ನದಿಗಳೆಲ್ಲ ದೇವಿಯರು. ದೇವಸಾನ್ನಿಧ್ಯವನ್ನು ಪೂಜಾ ಘಟ್ಟದಲ್ಲಿ ಬೇಡುವಂತೆ, ದೇವೀ ಸಾನ್ನಿಧ್ಯವನ್ನು ಮೊದಲೇ, ಸ್ನಾನಘಟ್ಟದಲ್ಲೇ, ಬಯಸುವುದಾಗಿದೆ. ನದಿಗಳು ಜನಿಸುವುದು ಪರ್ವತ ಗಳಲ್ಲಿ. ಪರ್ವತಗಳು ಭೂದೇವಿಯ ಕುಚಗಳಂತೆ. ಭೂಮಾತೆಯ ಸ್ತನಗಳಿಂದ ಸ್ರವಿಸುವ ಅಮೃತವೇ ಈ ನದಿಗಳು. ಜೀವಪೋಷಣೆಯೆಂಬುದು ಇವಿಂದಲೇ ಸಾಧ್ಯ. ಕೆಲವು ನದಿಗಳು ಸಣ್ಣನದಿಗಳು. ಇಂತಹವು ಅಲ್ಲಿಲ್ಲಿ ಹರಿದು ಕೊನೆಗೆ ದೊಡ್ಡನದಿಗೆ ಸೇರಿಕೊಳ್ಳುತ್ತವೆ. ಉಪ ನದಿಗಳು ಮಹಾನದಿಗೆ ಸೇರಿಕೊಳ್ಳುವ ಬಗೆಯಿದು.
ಮಹಾನದಿಯು ಮಾತ್ರ ಸಮುದ್ರವನ್ನೇ ಸೇರುವುದು. ನಮ್ಮ ಕವಿಗಳು ರೂಪಕ ಪ್ರಿಯರು. ರಾಮಾಯಣವನ್ನೇ ಒಂದು ಮಹಾನದಿಯಾಗಿ ಕಂಡಿದ್ದಾರೆ. ಹಾಗಾದರೆ ಈ ನದಿಯು ಜನಿಸುವುದೆಲ್ಲಿ? ಕೊನೆಗದು ಸೇರುವ ಸಾಗರವಾವುದು? ಎಂಬ ಈ ಎರಡು ಪ್ರಶ್ನೆಗಳಿಗೂ ಸಿದ್ಧವಾದ ಉತ್ತರಗಳಿವೆ. ವಾಲ್ಮೀಕಿಯೇ ಗಿರಿ. ಅಲ್ಲಿಂದ ಹೊರಟ ರಾಮಾಯಣ ಮಹಾನದಿಯು ಸೇರುವ ಸಾಗರವಾವುದು? ರಾಮನೇ ಆ ಸಾಗರ. ಹಾಗೆ ಸಾಗುತ್ತ ಅದು ಮಾಡುವುದೇನು? ದಾರಿಯುದ್ದಕ್ಕೂ ಜಗತ್ತನ್ನೇ ಪವಿತ್ರವಾಗಿಸುವುದು (ಪುನಾತಿ ಭುವನಂ ಪುಣ್ಯಾ)! ಗಂಗಾ ಮಹಾನದಿಯನ್ನೂ ರಾಮಾಯಣ ಮಹಾನದಿಯನ್ನೂ ಹೋಲಿಸಿ ಶ್ರೀರಂಗಮಹಾಗುರುಗಳು ಹೇಳಿರುವ ಮಾತು ಅತ್ಯಂತ ಸ್ಮರಣೀಯವಾಗಿದೆ. ಉತ್ತುಂಗ ಶಿಖರದಿಂದ ಹರಿದ ಗಂಗೆಯು ಧಿಮಿಧಿಮಿ ತಾಳದಿಂದ ನಲಿದು ಸಪ್ತ ಶಾಖೆಯಾಗಿ ಹರಿದು, ಲೋಕಕ್ಕೆ ತಂಪುಂಟುಮಾಡುತ್ತಾ, ದಾರಿಯುದ್ದಕ್ಕೂ ಬೆಳವಣಿಗೆಗೆ ಬೇಕಾದ ಕೃಷಿಗೆ ನೀರೊದಗಿಸುತ್ತಾ, ಸಮುದ್ರವನ್ನು ಸೇರುವುದಲ್ಲವೇ? ಹಾಗೆಯೇ ವಾಲ್ಮೀಕಿಗಿರಿಯಿಂದ ಜೀವಲೋಕಕ್ಕೆ ಜ್ಞಾನಧಾರೆಯನ್ನು ಹರಿಸಿ ಋಷಿಗಳನ್ನಾಗಿ ಮಾಡಲು ರಾಮಾಯಣ ಮಹಾನದಿ ಹರಿದುಬಂದಿತು.
ಹೀಗಾಗಿ, ಗಂಗೆಯೂ ರಾಮಾಯಣವೂ ತಂಪನ್ನೊದಗಿ ಸುವುವು ಮಾತ್ರವಲ್ಲ. ಎರಡೂ ಪಾಪಹರವೇ. ಸಪ್ತ-ಶಾಖೆಗಳುಳ್ಳ ಗಂಗೆಯಿಂದ ಕೃಷಿಕಾರ್ಯಕ್ಕೆ ಪೋಷಣೆಯೆಂದುಕೊಂಡರೆ, ಸಪ್ತಕಾಂಡಗಳುಳ್ಳ ರಾಮಾಯಣದಿಂದ ಋಷಿಕಾರ್ಯಕ್ಕೆ ಪೋಷಣೆ! ವಾಸ್ತವವಾಗಿ ಗಂಗೆಯಿಂದಲೂ ಉಭಯಪೋಷಣೆಯೂ ಉಂಟು. ಋಷಿಗಳು ಶ್ರಮಿಸಿದುದು ಧರ್ಮರಕ್ಷಣೆಗಾಗಿ ತಾನೆ? ಪರಮಶಾಂತವಾದ ವಾಲ್ಮೀಕಿಋಷಿ ಹೃದಯದಿಂದ ಹೊಮ್ಮಿದ, ಧರ್ಮವೇ ಮೈತಾಳಿಬಂದ ಶ್ರೀರಾಮನನ್ನೇ ಸೇರುವ, ಜೊತೆಗೆ ರಾಮನಲ್ಲಿಗೆ ಎಲ್ಲರನ್ನೂ ಒಯ್ಯಬಲ್ಲ, ವಾಹಕವಾದ ಮಹಾವಾಹಿನಿಯೇ ರಾಮಾಯಣ! ಹೀಗಿರುವಲ್ಲಿ, ರಾಮಾಯಣ ಮಹಾನದಿಯು ಲೋಕಪಾವನಿಯೆಂಬುದರಲ್ಲಿ ಆಶ್ಚರ್ಯವೇನು?