

ಲಂಡನ್: ಬ್ರಿಟನ್ ಪ್ರಧಾನಿಯಾಗಿ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರ ಅಳಿಯ, ಭಾರತ ಮೂಲದ ರಿಷಿ ಸುನಕ್ ಅವರು ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಪೆನ್ನಿ ಮೊರ್ಡಾಂಟ್ ಅವರು ಚುನಾವಣಾ ಕಣದಿಂದ ಹಿಂದೆ ಸರಿದ ಹಿನ್ನೆಲೆ, ಎದುರಾಳಿ ಯಾರೂ ಇಲ್ಲದೇ ಇರುವುದರಿಂದ ಸುನಕ್ಗೆ ಪ್ರಧಾನಿ ಪಟ್ಟ ಒಲಿಯಿತು.
ಬಿಟ್ರನ್ ಪ್ರಧಾನಿಯಾಗಿ ಆಯ್ಕೆಯಾಗಲು 100 ಸದಸ್ಯರ ಬೆಂಬಲದ ಅಗತ್ಯವಿತ್ತು. ಆದರೆ, ರಿಷಿ ಸುನಕ್ ಅವರಿಗೆ 193 ಸದಸ್ಯರ ಬೆಂಬಲ ಸಿಕ್ಕಿದೆ. ಮೊದಲ ಪ್ರಯತ್ನದಲ್ಲಿ ಲೀಸ್ ಟ್ರಸ್ ವಿರುದ್ಧ ಅಂತಿಮ ಹಂತದಲ್ಲಿ ಸೋಲು ಅನುಭವಿಸಿದ್ದ ರಿಷಿಗೆ, 2ನೇ ಹಂತದಲ್ಲಿ ಬ್ರಿಟನ್ ಪ್ರಧಾನಿ ಹುದ್ದೆ ಒಲಿದಿದೆ.
ಯಾರು ಈ ರಿಷಿ ಸುನಕ್?: 42 ವರ್ಷದ ರಿಷಿ ಸುನಕ್ ಅವರು 1980ರಲ್ಲಿ ಸೌತಾಂಪ್ಟನ್ನಲ್ಲಿ ಜನಿಸಿದರು. ಪೂರ್ವ ಆಫ್ರಿಕಾದಿಂದ ಇಂಗ್ಲೆಂಡ್ಗೆ ವಲಸೆ ಬಂದ ಭಾರತೀಯ ಮೂಲದ ದಂಪತಿಯ ಪುತ್ರ. ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಹಾಗೂ ಅರ್ಥಶಾಸ್ತ್ರ ಅಧ್ಯಯನ ಕೈಗೊಂಡಿದ್ದಾರೆ. ಅಮೆರಿಕದ ಸ್ಟ್ಯಾನ್ಫರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಗಳಿಸಿದ್ದಾರೆ. ಇನ್ಪೋಸಿಸ್ ಸ್ಥಾಪಕ ಎನ್.ಆರ್. ನಾರಾಯಣಮೂರ್ತಿಯವರ ಪುತ್ರಿ ಅಕ್ಷತಾ ಅವರನ್ನು ರಿಷಿ ಸುನಕ್ ಮದುವೆ ಆಗಿದ್ದಾರೆ.
ಬೋರಿಸ್ ಜಾನ್ಸನ್ ರಾಜೀನಾಮೆ: ಸಮರ್ಪಕ ಆಡಳಿತ ನೀಡುತ್ತಿಲ್ಲ ಎಂದು ಬೋರಿಸ್ ಜಾನ್ಸನ್ ವಿರುದ್ಧ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕದಲ್ಲೇ ಭಾರೀ ಅಸಮಾಧಾನವಿತ್ತು. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಹಲವು ತಿಂಗಳಿಂದ ಒತ್ತಾಯಿಸುತ್ತಿದ್ದರೂ ಬೋರಿಸ್ ಮಾತ್ರ ಮಣಿದಿರಲಿಲ್ಲ. ಇವರ ಸಂಪುಟದಲ್ಲೇ ಸ್ಫೋಟಗೊಂಡ ಅಸಮಾಧಾನದ ಪರಿಣಾಮ 40ಕ್ಕೂ ಹೆಚ್ಚು ಸಚಿವರು ಮತ್ತು ಸಹಾಯಕರು ರಾಜೀನಾಮೆ ನೀಡಿದ್ದರು. ಯುಕೆ ಹಣಕಾಸು ಸಚಿವ ಸ್ಥಾನಕ್ಕೆ ರಿಷಿ ಸುನಕ್ ಕೂಡ ರಾಜೀನಾಮೆ ನೀಡಿದ್ದರು. ಸರಣಿ ರಾಜೀನಾಮೆಯಿಂದ ಇಕ್ಕಟ್ಟಿಗೆ ಸಿಲುಗಿದ್ದ ಬೋರಿಸ್ ಜಾನ್ಸನ್, ಕೊನೆಗೂ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡಲು ಒಪ್ಪಿದ್ದೇನೆ ಎಂದು ಗುರುವಾರ (ಜುಲೈ 7) ಮಧ್ಯಾಹ್ನ ಘೋಷಿಸಿದ್ದರು. ಇದಾದ ಕೆಲವೇ ಗಂಟೆಯಲ್ಲೇ ರಾಜೀನಾಮೆ ನೀಡಿದರು. ನಂತರ ನಡೆದು ಚುನಾವಣೆಯಲ್ಲಿ ಲಿಜ್ ಟ್ರಸ್ ಮುಂದಿನ ಪ್ರಧಾನಿಯಾಗಿ ಆಯ್ಕೆಯಾದರು. ಕೊನೆಯ ಹಂತದವರೆಗೂ ಮುನ್ನಡೆ ಕಾಯ್ದುಕೊಂಡಿದ್ದ ರಿಷಿ ಸುನಕ್ ಎರಡನೇ ಸ್ಥಾನಕ್ಕೆ ಕುಸಿದರು. ಇದೀಗ ರಿಷಿ ಅವರಿಗೇ ಪ್ರಧಾನಿ ಸ್ಥಾನ ಒಲಿದಿದೆ.