2023ಕ್ಕೆ ಒಕ್ಕಲಿಗರಿಗೆ ಮೀಸಲಾತಿ ತರದಿದ್ದರೆ ನಾನು ಮುಖ ತೋರಿಸಲ್ಲ: ಕುಮಾರಸ್ವಾಮಿ ಶಪಥ

Kumaraswamy
Published on

ಬರಗೂರು(ತುಮಕೂರು): ಕೆಂಪೇಗೌಡರಂತೆ ಸರ್ವಜನಾಂಗದವರ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಶ್ರಮಿಸುವೆ. ಒಕ್ಕಲಿಗರಿಗೆ ಒಬಿಸಿ ಮೀಸಲಾತಿ ನೀಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಡೆಡ್​ ಲೈನ್​ ನೀಡಿದ್ದು, 2023ಕ್ಕೆ ಎಲ್ಲ ಒಕ್ಕಲಿಗರಿಗೂ ಮೀಸಲಾತಿ ತರದಿದ್ದರೆ ನಾನು ನಿಮಗೆ ಮುಖತೋರಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಶಪಥ ಮಾಡಿದರು.

ಶಿರಾ ತಾಲೂಕು ಚಿಕ್ಕಹುಲಿಕುಂಟೆಯಲ್ಲಿ ಭಾನುವಾರ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ಥಳಿ ಅನಾವರಣ ಮತ್ತು ಕುಂಚಿಟಿಗ-ಒಕ್ಕಲಿಗರ ಬೃಹತ್​ ಸಮಾವೇಶ ಉದ್ಘಾಟಿಸಿ ಮಾತನಾಡಿದ ಎಚ್​ಡಿಕೆ, ನಿರಂತರವಾಗಿ ಕುಂಚಿಟಿಗ ಒಕ್ಕಲಿಗರಿಗೆ ಮೀಸಲಾತಿಯಲ್ಲಿ ಅನ್ಯಾಯವಾಗುತ್ತಿದೆ. 2023ರಲ್ಲಿ ಒಕ್ಕಲಿಗರಿಗೆ ಮೀಸಲಾತಿ ಹೋರಾಟಕ್ಕೆ ಜಯ ಸಿಗಲಿದೆ. ಕೆಂಪೇಗೌಡ ಪುತ್ಥಳಿ ಉದ್ಘಾಟಿಸುವ ಸಂದರ್ಭದಲ್ಲಿ ಎಚ್​.ಡಿ.ದೇವೇಗೌಡರಿಂದ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿ ಒಕ್ಕಲಿಗರ ಮೀಸಲಾತಿಗೆ ಮನವಿ ಸಲ್ಲಿಸಲಾಗುವುದು ಎಂದರು.

1996ರಲ್ಲಿ ದೇವೇಗೌಡರು ಪ್ರಧಾನಿಯಾಗಿದ್ದರೂ ಒಕ್ಕಲಿಗರಿಗೆ ಸೂಕ್ತ ನ್ಯಾಯ ದೊರಕಿಸಿಕೊಡಲಾಗಲಿಲ್ಲ. ಭೂಮಿಯನ್ನೇ ನಂಬಿ ಬದುಕುವ ಒಕ್ಕಲಿಗರು ಸಾಲಮನ್ನಾದಿಂದ ಹೊರಬಂದಿಲ್ಲ, ಜನರು ಆಶೀರ್ವಾದ ಮಾಡಿದರೆ 2023ಕ್ಕೆ ತಾಯಿ ಹೃದಯದ ಸರ್ಕಾರ ಕೊಡುವೆ ಎಂದರು.

ಸ್ಫಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಂಜಾವಧೂತ ಸ್ವಾಮೀಜಿ ಮಾತನಾಡಿ, ಮೀಸಲಾತಿ ಇರುವುದು ಶೇ.50. ಆದರೆ, ಕೇಳಿದವರಿಗೆಲ್ಲ ಮೀಸಲಾತಿ ಹೆಚ್ಚಿಸುತ್ತಾ ಹೋದರೆ ಅನ್ಯಾಯಕ್ಕೆ ಒಳಗಾಗಿರುವ ಒಕ್ಕಲಿಗರ ಪಾಡೇನು? ನಗರದಲ್ಲಿನ ಒಕ್ಕಲಿಗರನ್ನು ಒಬಿಸಿಗೆ ಸೇರಿಸಬೇಕು, ಶೇ.4ರಿಂದ ಶೇ.10ಕ್ಕೆ ಮೀಸಲಾತಿ ಹೆಚ್ಚಿಸಲೇಬೇಕು ಎಂಬ ಹಕ್ಕೊತ್ತಾಯವಿದೆ. ಒಕ್ಕಲಿಗರಿಗೆ ನ್ಯಾಯ ದೊರಕಿಸಿಕೊಡದಿದ್ದರೆ, ವಿಧಾನಸೌಧದತ್ತ ಒಕ್ಕಲಿಗರ ದಂಡು ಚಲಿಸಲಿದೆ. 30 ವರ್ಷಗಳ ಬೇಡಿಕೆ ಈಡೇರಲೇಬೇಕು ಎಂದು ಆಗ್ರಹಿಸಿದರು.

ವಿಧಾನ ಪರಿಷತ್​ ಸದಸ್ಯ ಚಿದಾನಂದ್​ ಎಂ.ಗೌಡ, ನಗರಸಭಾ ಅಧ್ಯಕ್ಷ ಅಂಜಿನಪ್ಪ, ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ, ಮಾಜಿ ಸಚಿವ ಟಿ.ಬಿ.ಜಯಚಂದ್ರ ಇದ್ದರು.

ಬೆಂಗಳೂರಿನಿಂದ ಬರುವ ಆದಾಯ ಉತ್ತರ ಕರ್ನಾಟಕದ ಅಭಿವೃದ್ಧಿಗೂ ಬಳಕೆಯಾಗುತ್ತಿದೆ ಎಂಬುದನ್ನು ಉತ್ತರ ಕರ್ನಾಟಕದ ಜನತೆ ಅರ್ಥ ಮಾಡಿಕೊಳ್ಳಬೇಕು. ಹಳೇ ಮೈಸೂರಿಗೆ ಸೀಮಿತವಾಗಿದ್ದ ಕೆಂಪೇಗೌಡ ಜಯಂತಿ ಇತ್ತೀಚೆಗೆ ಉತ್ತರ ಕರ್ನಾಟಕದಲ್ಲೂ ಆಚರಣೆಯಾಗುತ್ತಿದ್ದು ಎಲ್ಲೆಡೆಯೂ ಕೆಂಪೇಗೌಡರನ್ನು ಸ್ಮರಿಸಲಾಗುತ್ತಿದೆ.

| ಎಚ್​.ಡಿ.ಕುಮಾರಸ್ವಾಮಿ ಮಾಜಿ ಸಿಎಂ

ಚಿನ್ನಪ್ಪರೆಡ್ಡಿ ವರದಿ, ಹಾವನೂರು ವರದಿಯಲ್ಲಿ ಕುಂಚಿಟಿಗರಿಗೆ ಅನ್ಯಾಯ ಮಾಡಿದ್ದಾರೆ. ಮೀಸಲಾತಿ ಹೋರಾಟಕ್ಕೆ ಕರೆ ಕೊಟ್ಟರೆ, ನಾಲ್ಕು ದಿಕ್ಕುಗಳಿಂದಲೂ ರಾಜಧಾನಿಗೆ ಒಕ್ಕಲಿಗರ ದಂಡು ಹರಿದುಬರಬೇಕು. ಕೆಂಪೇಗೌಡ ಪುತ್ಥಳಿ ಉದ್ಘಾಟನೆಗೆ ಆಗಮಿಸುವ ಪ್ರಧಾನಿಗೂ ಮನವಿ ಮಾಡೋಣ.

| ಶ್ರೀನಂಜಾವಧೂತ ಸ್ವಾಮೀಜಿ ಸ್ಫಟಿಕಪುರಿ ಮಹಾ ಸಂಸ್ಥಾನ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net