

ಲಂಡನ್: ಕನ್ಸರ್ವೆಟಿವ್ ಪಕ್ಷದ ಸಂಸದ, ಭಾರತ ಮೂಲದ ರಿಷಿ ಸುನಕ್ ಮಂಗಳವಾರ ಬ್ರಿಟನ್ನ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಸೋಮವಾರ ಪ್ರಧಾನಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಅವರು ಬ್ರಿಟನ್ ರಾಜ ಮೂರನೇ ಚಾರ್ಲ್ಸ್ರನ್ನು ಭೇಟಿಯಾಗಿ ದೇಶದ 57ನೇ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಇದರೊಂದಿಗೆ ಬ್ರಿಟನ್ ಪ್ರಥಮ ಶ್ವೇತವರ್ಣೀಯೇತರ, ಅತ್ಯಂತ ಕಿರಿಯ ವಯಸ್ಸಿನ ಹಾಗೂ ಪ್ರಥಮ ಹಿಂದು ಪ್ರಧಾನಿಯನ್ನು ಪಡೆದಂತಾಗಿದೆ. ಸುನಕ್ ನಾಲ್ಕು ತಿಂಗಳಲ್ಲಿ ಬ್ರಿಟನ್ನಿನ ಮೂರನೇ ಪ್ರಧಾನಿಯಾಗಿದ್ದಾರೆ.
ಇದಕ್ಕೂ ಮುನ್ನ ಪ್ರಧಾನಿ ಅಧಿಕೃತ ನಿವಾಸ 10, ಡೌನಿಂಗ್ ಸ್ಟ್ರೀಟ್ನಲ್ಲಿ ಅಂತಿಮ ಕ್ಯಾಬಿನೆಟ್ ಸಭೆ ನಡೆಸಿದ ನಿರ್ಗಮಿತ ಪ್ರಧಾನಿ ಲಿಜ್ ಟ್ರಸ್, ಬಕಿಂಗ್ಹ್ಯಾಮ್ ಅರಮನೆಗೆ ತೆರಳಿ ಔಪಚಾರಿಕವಾಗಿ ರಾಜೀನಾಮೆ ಸಲ್ಲಿಸಿದರು. ನಂತರ ಭೇಟಿಯಾದ ಸುನಕ್ಗೆ ಸರ್ಕಾರ ರಚಿಸುವಂತೆ ರಾಜ ಚಾರ್ಲ್ಸ್ ಆಹ್ವಾನಿಸಿದರು. ನೂತನ ರಾಜ ಚಾರ್ಲ್ಸ್ ನೇಮಿಸಿದ ಮೊದಲ ಪ್ರಧಾನಿ ಸುನಕ್ ಆಗಿದ್ದಾರೆ. ಸೆಪ್ಟೆಂಬರ್ 8ರಂದು ನಿಧನರಾಗುವ ಎರಡು ದಿನಗಳ ಮುಂಚೆ ರಾಣಿ 2ನೇ ಎಲಿಜಬೆತ್, ಲಿಜ್ ಟ್ರಸ್ರನ್ನು ಪ್ರಧಾನಿಯಾಗಿ ನೇಮಿಸಿದ್ದರು.
ಡೌನಿಂಗ್ ಸ್ಟ್ರೀಟ್ನಲ್ಲಿರುವ ಪ್ರಧಾನಿ ನಿವಾಸ ಮತ್ತು ಕಾರ್ಯಕಾರಿ ಕಚೇರಿ ಹೊರಗೆ ನಿಂತು ಪ್ರಧಾನಿಯಾಗಿ ಸುನಕ್ ಮೊದಲ ಭಾಷಣ ಮಾಡಿದರು. ಅವರೀಗ ಸಂಪುಟ ರಚನೆಯ ಕಸರತ್ತಿನಲ್ಲಿ ತೊಡಗಿದ್ದು, ಪೂರ್ವಾಧಿಕಾರಿ ಟ್ರಸ್ರ ಅನಾಹುತಕಾರಿ ತೆರಿಗೆ ಕಡಿತದ ಮಿನಿ ಬಜೆಟ್ನಿಂದ ಸಮಸ್ಯೆ ಎದುರಾಗಿದ್ದು, ಅದನ್ನು ಪರಿಹರಿಸುವ ಹೊಣೆಗಾರಿಕೆ ಸುನಕ್ ಹೆಗಲೇರಿದೆ.
ಪ್ರಾರ್ಥನೆಗೆ ಆರ್ಚ್ಬಿಷಪ್ ಕರೆ
ರಿಷಿ ಸುನಕ್ ಪ್ರಥಮ ಬ್ರಿಟಿಷ್ ಭಾರತೀಯ ಪ್ರಧಾನ ಮಂತ್ರಿಯಾಗಿರುವುದು ಐತಿಹಾಸಿಕ ಕ್ಷಣವಾಗಿದೆ. ಒಂದು ಅಥವಾ ಎರಡು ದಶಕಗಳ ಹಿಂದೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಬ್ರಿಟಿಷ್ ಫ್ಯೂಚರ್ ಎಂಬ ಚಿಂತಕರ ಚಾವಡಿಯ ನಿರ್ದೇಶಕ ಸುಂದರ್ ಕಟ್ವಾಲಾ ಹೇಳಿದ್ದಾರೆ. ಪ್ರಕ್ಷುಬ್ಧ ಕಾಲಘಟ್ಟದಲ್ಲಿ ಪ್ರಧಾನಿಯಾಗಿರುವ ಸುನಕ್ಗಾಗಿ ಪ್ರಾರ್ಥಿಸೋಣ ಎಂದು ಕ್ಯಾಂಟ್ಬರಿಯ ಆರ್ಚ್ಬಿಷಪ್ ಬ್ರಿಟನ್ ಜನರಿಗೆ ಕರೆ ನೀಡಿದ್ದಾರೆ.