ರಾಷ್ಟ್ರ ಪ್ರಶಸ್ತಿಯನ್ನು ಅಪ್ಪು ಸರ್​, ದೈವ, ದೈವ ನರ್ತಕರಿಗೆ ಅರ್ಪಿಸುತ್ತೇನೆ: ರಿಷಭ್​ ಶೆಟ್ಟಿ

Rishab-Shetty
Published on

ಬೆಂಗಳೂರು: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇಂದು ಘೋಷಣೆಯಾಗಿದ್ದು, ಕಾಂತಾರ ಮೂಲಕ ವಿಶ್ವವ್ಯಾಪಿ ಖ್ಯಾತಿ ಪಡೆದ ರಿಷಭ್​ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭ್ಯವಾಗಿದೆ. ಇನ್ನೂ ತಮಗೆ ಲಭ್ಯವಾಗಿರುವ ಪ್ರಶಸ್ತಿಯನ್ನು ಪುನೀತ್ ರಾಜ್‌ಕುಮಾರ್, ದೈವಕ್ಕೆ, ದೈವನರ್ತಕರಿಗೆ ಅರ್ಪಣೆ ಮಾಡುವುದಾಗಿ ತಿಳಿಸಿದ್ದಾರೆ.

ನಗರದಲ್ಲಿ ಈ ಕುರಿತು ಸುದ್ದಿಗೋಷ್ಠಿ ಉದ್ಧೇಶಿಸಿ ಮಾತನಾಡಿದ ರಿಷಭ್​ ಶೆಟ್ಟಿ, ಮೊದಲಿನಿಂದ ನಾನು ಹೇಳಿಕೊಂಡು ಬಂದಿದ್ದೆ, ಈ ಪ್ರಶಸ್ತಿಯನ್ನ ಪುನೀತ್ ರಾಜ್‌ಕುಮಾರ್, ಕನ್ನಡದ ಜನರಿಗೆ ಮತ್ತು ದೈವನರ್ತಕರಿಗೆ ಅರ್ಪಣೆ ಮಾಡುತ್ತೇನೆ. ಸಿನಿಮಾದ ಎಲ್ಲಾ ನಟ- ನಟಿಯರಿಗೂ, ತಾಂತ್ರಿಕ ವರ್ಗಕ್ಕೂ ಮತ್ತು ಸಿನಿಮಾ ನಿರ್ಮಾಣ ಮಾಡಿದ ಹೊಂಬಾಳೆ ಸಂಸ್ಥೆಗೆ ಧನ್ಯವಾದ ತಿಳಿಸುತ್ತೇನೆ.

ಬದಲಾವಣೆ ಜಗದ ನಿಯಮ. ಪ್ರಯತ್ನಗಳನ್ನು ನಾವು ಬಿಡಬಾರದು. ಸಿನಿಮಾದವರಿಗೆ ಒಂದು ಶುಕ್ರವಾರ ಸಾಕಷ್ಟು ಬದಲಾವಣೆಗಳನ್ನು ತರಬಹುದು. ಕಷ್ಟಪಟ್ಟು ಕೆಲಸ ಮಾಡಿದರೆ, ದೇವ್ರು ಎಲ್ಲೋ ಒಂದು ಕಡೆ ಜಾಗ ಮಾಡಿಕೊಡ್ತಾನೆ. ನಮಗೆಲ್ಲ ಮೊದಲು ಒಂದು ಗುರಿ ಇಟ್ಟುಕೊಳ್ಳುವಷ್ಟು ಪ್ರಭುದ್ಧತೆ ಇರಲಿಲ್ಲ. ಅದರ ಬಗ್ಗೆ ಯೋಚಿಸುವಷ್ಟೇ ನಮಗೆ ಆಗುತ್ತಿರಲಿಲ್ಲ. ದಾರಿ ಚೆನ್ನಾಗಿದ್ದಾಗ, ಆ ದಾರಿಯಲ್ಲಿ ಒಳ್ಳೆಯವರು ಸಿಗುತ್ತಾ ಹೋದಂತೆ, ಆ ದಾರಿಯೇ ನಮ್ಮ ಗುರಿಯನ್ನು ತಲುಪಿಸುತ್ತದೆ.

ನಾನು ಸಹ ಪ್ರಶಸ್ತಿ ಘೋಷಣೆ ಮಾಡುತ್ತಿದ್ದುದ್ದನ್ನು ಟಿವಿಯಲ್ಲಿ ನೋಡುತ್ತಿದ್ದೆ. ಪ್ರಶಸ್ತಿ ಘೋಷಣೆ ಮಾಡಿದಾಗ ಖುಷಿಯಾಯಿತು. ಕನ್ನಡ ಚಿತ್ರರಂಗವು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿದೆ. ಹಾಗಾಗಿಯೇ ಇಂದು ಈ ಪ್ರಶಸ್ತಿ ಬಂದಿರೋದು. ಇಡೀ ಚಿತ್ರತಂಡದ ಎಲ್ಲ ಸದಸ್ಯರಿಗೆ ನಾನು ಥ್ಯಾಂಕ್ಸ್ ಹೇಳಲು ಬಯಸುತ್ತೇನೆ. ಕ್ಯಾಮರಾಮ್ಯಾನ್​, ಕಾಸ್ಟ್ಯೂಮ್​ ಡಿಸೈನರ್​ ಪ್ರಗತಿ ಶೆಟ್ಟಿ, ಈ ಸಕ್ಸಸ್‌ಗೆ ಅಜಿನೀಶ್ ಲೋಕನಾಥ್ ಸಂಗೀತ ಕೂಡ ಬಹಳ ಮುಖ್ಯವಾಗಿತ್ತು.

ನಾನು ಕಾಂತಾರ ಸಿನಿಮಾ ಮೇಲೆ ಈ ಮಟ್ಟದ ನಿರೀಕ್ಷೆ ಇಟ್ಟುಕೊಂಡಿಲಿಲ್ಲ. ಸೆಕೆಂಡ್‌ ಲಾಕ್‌ಡೌನ್‌ ಸಮಯದಲ್ಲಿ ಹೊಳೆದ ಕಥೆಯಿದು. ದೈವ ನಂಬಿ ಸಿನಿಮಾ ಮಾಡಿದ್ವಿ, ಅದೇ ನಾನು ನಂಬಿರೋ ದೈವ ಇಲ್ಲಿಯವರೆಗೆ ಕರೆತಂದಿದೆ. ಈಗ ಈ ಚಿತ್ರದ ಪ್ರೀಕ್ವೆಲ್‌ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ. ಈ ಪ್ರಶಸ್ತಿಯಿಂದ ಆ ಜವಾಬ್ದಾರಿಯ ತೂಕ ಮತ್ತಷ್ಟು ಹೆಚ್ಚಾಗಿದೆ ಎಂದು ನಟ, ನಿರ್ದೇಶಕ ರಿಷಭ್​ ಶೆಟ್ಟಿ ಹೇಳಿದ್ದಾರೆ.

ಹೊಂಬಾಳೆ ಸಂಸ್ಥೆ ನಿರ್ಮಾಣದ ಕಾಂತಾರ ಚಿತ್ರದಲ್ಲಿನ ನಟನೆಗೆ ರಿಷಭ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.  ಇದೇ ಸಿನಿಮಾಗೆ ಅತ್ಯುತ್ತಮ ಮನೋರಂಜನಾ ಚಿತ್ರ ಕೂಡ ಲಭಿಸಿದೆ. ಇನ್ನು ಕೆಜಿಎಫ್‌ 2 ಚಿತ್ರಕ್ಕೆ ಕೂಡ ಎರಡು ರಾಷ್ಟ್ರೀಯ ಪ್ರಶಸ್ತಿಗಳು ಬಂದಿದೆ.  ಅತ್ಯುತ್ತಮ ಪ್ರಾದೇಶಿಕ ಚಿತ್ರ ಮತ್ತು ಅತ್ಯುತ್ತಮ ಸಾಹಸ ವಿಭಾಗದಲ್ಲಿ ಬಂದಿದೆ.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net