

ಬೆಂಗಳೂರು: ರಾಷ್ಟ್ರ ರಕ್ಷಣಾ ಪಡೆಯ ಮುಖಂಡ ಪುನೀತ್ ಕೆರೆಹಳ್ಳಿಯನ್ನು ಸಿಸಿಬಿ ಪೊಲೀಸರು ಗೂಂಡಾ ಕಾಯ್ದೆ ಅಡಿ ಬಂಧಿಸಿದ್ದಾರೆ. ಪುನೀತ್ ವಿರುದ್ಧ ವಿವಿಧ ಪೊಲೀಸ್ ಠಾಣೆಯಲ್ಲಿ ಕೊಲೆ, ಗಲಭೆ ಸೇರಿದಂತೆ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಗೂಂಡಾ ಕಾಯ್ದೆ ಅಡಿ ಆತನನ್ನು ಬಂಧಿಸಲಾಗಿದೆ.
ರಾಷ್ಟ್ರ ರಕ್ಷಣಾ ಪಡೆ ಹೆಸರಲ್ಲಿ ಗೋವು ಸಾಗಾಟ ಮಾಡುವವರನ್ನು ಟಾರ್ಗೆಟ್ ಮಾಡಿ ಬೆದರಿಸಿ, ಸುಲಿಗೆ ಮಾಡುವುದೇ ಈತನ ದುರುದ್ದೇಶವಾಗಿದೆ. ಹಲವರಿಗೆ ಈತ ಬೆದರಿಕೆ ಹಾಕಿರುವುದಲ್ಲದೇ, ಸಮಾಜ ವಿರೋಧಿ ಚಟುವಟಿಕೆಯಲ್ಲಿ ಪದೇಪದೆ ಭಾಗಿಯಾಗುವ ಮೂಲಕ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕದಡುವ ಕೆಲಸ ಮಾಡಿದ್ದಾನೆ ಎಂಬ ಆರೋಪದ ಮೇಲೆ ಪುನೀತ್ ವಿರುದ್ಧ ಕಳೆದ 10 ವರ್ಷಗಳಲ್ಲಿ ಹಲವು ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.
ಆತನ ಸಮಾಜ ವಿರೋಧಿ ಚಟುವಟಿಕೆಗಳನ್ನು ತಡೆಯುವ ಸಲುವಾಗಿ ಕರ್ನಾಟಕ ಗೂಂಡಾ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದಾರೆ. ಸದ್ಯ ಆತನನ್ನು ಪರಪ್ಪನ ಆಗ್ರಹಾರ ಕಾರಗೃಹಕ್ಕೆ ಕಳಿಸಲಾಗಿದೆ.
ಪುನೀತ್ ಕೆರೆಹಳ್ಳಿ ವಿರುದ್ಧ ಮಳವಳ್ಳಿ, ಸಾತನೂರು, ಕಗ್ಗಲಿಪುರ, ಹಲಸೂರು ಗೇಟ್, ಚಾಮರಾಜಪೇಟೆ, ಎಲೆಕ್ಟ್ರಾನಿಕ್ ಸಿಟಿ ಡಿಜೆ ಹಳ್ಳಿ, ಬೇಗೂರು ಹಾಗೂ ಹಂಪಿ ಟೂರಿಸಂ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿವೆ. ಈ ಪ್ರಕರಣಗಳ ವಿಚಾರಣೆ ನಡೆಯುತ್ತಲೇ ಇದೆ. (ದಿಗ್ವಿಜಯ ನ್ಯೂಸ್)