More

    ಕೈ ಅಭ್ಯರ್ಥಿಗಳ ತಲಾಶ್ ಶುರು: ಲೋಕಸಭಾ ಚುನಾವಣೆಗೆ ತಯಾರಿ; ಶೀಘ್ರ ಸಂಭಾವ್ಯರ ಆಯ್ಕೆ

    ಬೆಂಗಳೂರು: ಲೋಕಸಭೆ ಚುನಾವಣೆಗೆ ಒಂದೊಂದೇ ಹಂತದ ತಯಾರಿ ನಡೆಸಿರುವ ಕಾಂಗ್ರೆಸ್, ಸಂಭಾವ್ಯ ಅಭ್ಯರ್ಥಿಗಳನ್ನು ಹೆಕ್ಕಿ ತೆಗೆಯಲು ಪ್ರಕ್ರಿಯೆ ಆರಂಭಿಸಿದೆ.

    28 ಲೋಕಸಭಾ ಕ್ಷೇತ್ರದ ಪೈಕಿ ಒಂದು ಕಡೆ ಮಾತ್ರ ಹಾಲಿ ಸಂಸದರಿದ್ದಾರೆ. 2019ರಲ್ಲಿ ಕಣಕ್ಕಿಳಿದಿದ್ದ ಕೆ.ಎಚ್.ಮುನಿಯಪ್ಪ ವಿಧಾನಸಭೆ ಪ್ರವೇಶಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ಸದಸ್ಯರಾಗಿದ್ದಾರೆ. ಇನ್ನುಳಿದಂತೆ 25 ಲೋಕಸಭಾ ಕ್ಷೇತ್ರದ ಪೈಕಿ 20ಕ್ಕಿಂತ ಹೆಚ್ಚು ಕಡೆ ಪ್ರಬಲ ಅಭ್ಯರ್ಥಿಗಳನ್ನು ಹುಡುಕಬೇಕಾಗಿದೆ. ಹಾಗಾಗಿ ಈಗಿನಿಂದಲೇ ಅಭ್ಯರ್ಥಿಗಳ ಆಯ್ಕೆ ಆರಂಭಿಸಿದರೆ ಪ್ರಚಾರಕ್ಕೆ ಸೂಕ್ತ ಸಮಯಾವಕಾಶ ದೊರಕಲಿದೆ. ಇದೇ ಕಾರಣಕ್ಕೆ ಆಗಸ್ಟ್ ಅಂತ್ಯದೊಳಗೆ ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಪಡೆದುಕೊಳ್ಳಲು ಎಐಸಿಸಿ ಬಯಸಿದೆ.

    28 ಲೋಕಸಭಾ ಕ್ಷೇತ್ರಗಳ ಪೈಕಿ 20 ಸ್ಥಾನಗಳನ್ನಾದರೂ ಗೆಲ್ಲುವ ಮೂಲಕ ರಾಹುಲ್ ಗಾಂಧಿ ಕೈ ಬಲಪಡಿಸಬೇಕೆಂದು ಹೈಕಮಾಂಡ್ ಸೂಚನೆ ನೀಡಿದೆ. ಹೀಗಾಗಿ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಗುರಿ ಮುಟ್ಟಲು ಕೆಪಿಸಿಸಿ ಕೂಡ ಬಯಸಿದೆ.

    136 ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಶಾಸಕರೇ ಇರುವುದರಿಂದ 2019ರ ಚುನಾವಣೆಯ ಪರಿಸ್ಥಿತಿ ಈಗ ಇರುವುದಿಲ್ಲ. ತಪು್ಪಗಳು, ಗೊಂದಲ ಮಾಡಿಕೊಳ್ಳದೇ ಹೋದರೆ ಬಿಜೆಪಿಯ ನಾಗಾಲೋಟಕ್ಕೆ ಕಡಿವಾಣ ಹಾಕಬಹುದೆಂಬ ಅಂದಾಜು ಕೈ ನಾಯಕರಲ್ಲಿದೆ.ಈ ಪ್ರಯತ್ನದ ಭಾಗವಾಗಿಯೇ ಜಾತಿ ಆಧಾರಿತ ಸಭೆಗಳನ್ನು ನಡೆಸಬೇಕೆಂದು ಉದ್ದೇಶಿಸಿದ್ದು, ಮೊದಲ ಸುತ್ತಿನಲ್ಲಿ ಅಲ್ಪಸಂಖ್ಯಾತ ಮುಖಂಡರ ಸಭೆ ನಡೆದಿದೆ. ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಂ ಮತಗಳು ಒಟ್ಟಾಗಿ ಕಾಂಗ್ರೆಸ್ ಬೆಂಬಲಿಸಿದಂತೆಯೇ ಲೋಕಸಭಾ ಚುನಾವಣೆಯಲ್ಲಿಯೂ ಜೆಡಿಎಸ್​ನತ್ತ ವಾಲದೇ ಪೂರ್ಣ ಪ್ರಮಾಣದಲ್ಲಿ ‘ಕೈ’ ಪರ ಒಲಿಸಿಕೊಳ್ಳಲು ಪ್ರಮುಖ ನಾಯಕರ ರಾಜ್ಯ ಪ್ರವಾಸ, ಮುಸ್ಲಿಮರು ಹೆಚ್ಚಿರುವ ಕಡೆ ಸಮಾವೇಶ ನಡೆಸಲು ಗುರಿಹಾಕಿಕೊಳ್ಳಲಾಗಿದೆ.

    ಅಭ್ಯರ್ಥಿ ವಿಚಾರಕ್ಕೆ ಬಂದರೆ ಪ್ರತಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರು, 2023ರ ಚುನಾವಣೆ ಅಭ್ಯರ್ಥಿಗಳು, ಪರಿಷತ್ ಸದಸ್ಯರು, ಜಿಲ್ಲಾ ಘಟಕಗಳಿಂದ ಮಾಹಿತಿ ತರಿಸಿಕೊಳ್ಳಲಾಗುತ್ತಿದೆ. ಯಾರೆಲ್ಲ ಟಿಕೆಟ್ ಆಕಾಂಕ್ಷಿಗಳಿದ್ದಾರೆ? ಯಾರು ಅಭ್ಯರ್ಥಿಯಾದರೆ ಪಕ್ಷಕ್ಕೆ ಅನುಕೂಲ? ಜಾತಿ ಸಮೀಕರಣದ ಲಾಭ ಯಾವ ರೀತಿ ಪರಿಣಾಮ ಬೀರಬಹುದು? ಎದುರಾಳಿ ಹಾಲಿ ಸಂಸದರನ್ನು ಮಣಿಸಲು ಯಾರು ಸಮಬಲ ಪೈಪೋಟಿ ನೀಡಬಹುದು? ಎಂಬ ಬಗ್ಗೆ ಹೈಕಮಾಂಡ್ ಅಭಿಪ್ರಾಯ ಸಂಗ್ರಹಿಸಿದೆ. ಇದೇ ತಿಂಗಳ ಅಂತ್ಯದೊಳಗೆ ಈ ಪ್ರಕ್ರಿಯೆ ಮುಗಿಸಲು ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

    ಗಳಿಸಿದ್ದು ಉಳಿಸಿಕೊಳ್ಳುವ ಹಠ: ವಿಧಾನಸಭಾ ಚುನಾವಣೆ ಲೆಕ್ಕಾಚಾರವೇ ಬೇರೆ, ಲೋಕಸಭಾ ಚುನಾವಣೆ ಲೆಕ್ಕಾಚಾರ ಬೇರೆಯದ್ದೇ ಆಗಿರಲಿದೆ. ಆದರೂ ಮತ ಏರಿಳಿತ ಗಮನಿಸುವುದಾದರೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ 171 ವಿಧಾನಸಭಾ ಕ್ಷೇತ್ರದಲ್ಲಿ ಲೀಡ್ ಪಡೆದುಕೊಂಡಿತ್ತು. ಈ ಕಾರಣದಿಂದ 25 ಸ್ಥಾನ ಸಲೀಸಾಗಿ ಗೆಲ್ಲಲು ಸಾಧ್ಯವಾಯಿತು. 2023ರ ಮೇನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 136 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್​ಗೆ ಲೀಡ್ ಬಂದಿದೆ. ಈ ಲೀಡ್ ಸಂಸತ್ ಚುನಾವಣೆಯಲ್ಲೂ ಕಾಯ್ದುಕೊಂಡರೆ 16-17ಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಲಾಭ ಮಾಡಿಕೊಳ್ಳಬಹುದೆಂಬ ಲೆಕ್ಕಾಚಾರ ಕಾಂಗ್ರೆಸ್​ನಲ್ಲಿದೆ. ಇದೇ ಕಾರಣಕ್ಕೆ ಹಾಲಿ ಶಾಸಕರಿಗೆ ಗುರಿ ನಿಗದಿಪಡಿಸಲಾಗಿದೆ.

    ಪಕ್ಷಕ್ಕಿರುವ ಮೂರು ದಾರಿ

    1. ಕಳೆದ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಪ್ರಬಲರಾಗಿದ್ದರೆ ಅಥವಾ ಹಾಲಿ ಶಾಸಕರು ಕ್ಷೇತ್ರ ಮೀರಿ ಪ್ರಬಲರಾಗಿದ್ದರೆ ಅವರನ್ನು ಪರಿಗಣಿಸಬಹುದು.

    2. ಬಿಜೆಪಿ ಅಭ್ಯರ್ಥಿಯ ಜಾತಿ ಸಮೀಕರಣ ತಲೆಕೆಳಗೆ ಮಾಡುವ ಸಾಮರ್ಥ್ಯ ಇರುವ ತನ್ನ ಸಮೀಕರಣದಂತೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು.

    3. ಪಕ್ಷದಲ್ಲಿ ಪ್ರಯೋಗಕ್ಕೆ ಮಹತ್ವ ನೀಡದೆ, ಸಮರ್ಥ ಅಭ್ಯರ್ಥಿ ಇಲ್ಲದಿದ್ದರೆ ಬಿಜೆಪಿ ಅಥವಾ ಜೆಡಿಎಸ್​ನ ಪ್ರಬಲರನ್ನು ಸೆಳೆದುಕೊಂಡು ಕಣಕ್ಕಿಳಿಸುವುದು.

    ಲೆಫ್ಟಿಗಳಿಗೆಂದೇ ವಿಶೇಷ ಹೆಲ್ಮೆಟ್​: ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಪ್ರಚಾರಕ್ಕೆ ಸಿಕ್ತು ‘ವೇಗ’

    ವಂಚಕರಿಗಿನ್ನು 420 ಬದಲು ಬೇರೆ ನಂಬರ್!; ಏನಿದು ಸಂಖ್ಯೆ ಬದಲಾವಣೆ?; ಇಲ್ಲಿದೆ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts