ವಂಚಕರಿಗಿನ್ನು 420 ಬದಲು ಬೇರೆ ನಂಬರ್!; ಏನಿದು ಸಂಖ್ಯೆ ಬದಲಾವಣೆ?; ಇಲ್ಲಿದೆ ವಿವರ

Parliament
Published on

ನವದೆಹಲಿ: ಕಾನೂನಿಗೆ ಸಂಬಂಧಿಸಿದಂತೆ ಕೆಲವು ನಂಬರ್​ಗಳು ಅಪರಾಧದ ಚಿತ್ರಣವನ್ನೇ ಮನಸ್ಸಲ್ಲಿ ಮೂಡಿಸಿಬಿಡುತ್ತವೆ. ಅಂಥ ಕೆಲವು ನಂಬರ್​ಗಳ ಪೈಕಿ 302, 376, 420ಗಳು ಪ್ರಮುಖವಾದವು. ಸಿನಿಮಾ ಡೈಲಾಗ್​ಗಳಲ್ಲೂ ಹಾಸುಹೊಕ್ಕಾಗಿರುವ ಈ ನಂಬರ್​ಗಳು ಇನ್ನುಮುಂದೆ ಬದಲಾಗುವ ಸಾಧ್ಯತೆಗಳಿವೆ.

ಕೇಂದ್ರ ಗೃಹ ಸಚಿವ ಅಮಿತ್ ಷಾ ಇಂದು ಸಂಸತ್ತಿನಲ್ಲಿ ಮಂಡಿಸಿದ್ದ ಮೂರು ಮಸೂದೆಗಳ ಹಿನ್ನೆಲೆಯಲ್ಲಿ ಇಂಥ ಕೆಲವು ಬದಲಾವಣೆಗಳು ಆಗಲಿರುವ ಸಾಧ್ಯತೆಗಳಿವೆ. 1860ರ ಇಂಡಿಯನ್ ಪೀನಲ್ ಕೋಡ್ ಬದಲಿಗೆ ಭಾರತೀಯ ನ್ಯಾಯ ಸಂಹಿತಾ, ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ ಬದಲಿಗೆ ಭಾರತೀಯ ನಾಗರಿಕ ಸುರಕ್ಷ ಸಂಹಿತಾ ಹಾಗೂ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ ಬದಲಿಗೆ ಭಾರತೀಯ ಸಾಕ್ಷ್ಯ ಜಾರಿಗೆ ತರುವ ಕುರಿತು ಮೂರು ಮಸೂದೆಗಳನ್ನು ಇಂದು ಸಂಸತ್ತಿನಲ್ಲಿ ಇಡಲಾಗಿದೆ.

ಅದರಲ್ಲೂ ಇಂಡಿಯನ್ ಪೀನಲ್ ಕೋಡ್ 1860 ಬದಲಿಗೆ ಬರಲಿರುವ ಭಾರತೀಯ ನ್ಯಾಯ ಸಂಹಿತ ಮಸೂದೆಯಲ್ಲಿ ಈಗಿನ ಹಲವು ನಂಬರ್​ಗಳನ್ನು ಬದಲಿಸಲಾಗಿದೆ. ಈ ಮಸೂದೆ ಜಾರಿಗೆ ಬಂದರೆ ಐಪಿಸಿಯಲ್ಲಿರುವ ಬಹಳಷ್ಟು ಅಪರಾಧಗಳಿಗೆ ಸಂಬಂಧಿತ ನಂಬರ್​ಗಳು ಬದಲಾವಣೆ ಆಗಲಿವೆ.

ಸದ್ಯ ಐಪಿಸಿ ಪ್ರಕಾರ 302 ಎಂದರೆ ಕೊಲೆ, 376 ಎಂದರೆ ಅತ್ಯಾಚಾರ, 420 ಎಂದರೆ ವಂಚನೆ. ಆದರೆ ಪ್ರಸ್ತಾವಿತ ಮಸೂದೆಯಲ್ಲಿ ವಂಚನೆ ಪ್ರಕರಣಕ್ಕೆ ಹಳೆಯ 420ರ ಬದಲು 316 ಸಂಖ್ಯೆ ಇರಲಿದೆ. ಐಪಿಸಿಯಲ್ಲಿ ಕೊಲೆಗೆ ಇರುವ ಸೆಕ್ಷನ್ 302, ಬಿಎನ್​ಎಸ್​ನಲ್ಲಿ ಸುಲಿಗೆಗೆ ಬಳಕೆ ಆಗಲಿದೆ.

ಐಪಿಸಿಯಲ್ಲಿ ಸೆಕ್ಷನ್​ 375 ಮತ್ತು 376 ಅತ್ಯಾಚಾರಕ್ಕೆ ಸಂಬಂಧಿಸಿದ್ದಾದರೆ, ಬಿಎನ್ಎಸ್​ನಲ್ಲಿ ಅತ್ಯಾಚಾರ ಸೆಕ್ಷನ್ 63ರಲ್ಲಿ ಬರಲಿದೆ. ಐಪಿಸಿಯಲ್ಲಿ ಸೆಕ್ಷನ್ 307 ಕೊಲೆಯತ್ನಕ್ಕೆ ಸಂಬಂಧಿಸಿದ್ದಾದರೆ ಬಿಎನ್​ಎಸ್​ನಲ್ಲಿ ಕೊಲೆಯತ್ನ ಸೆಕ್ಷನ್ 107ರಡಿ ಬರಲಿದೆ. ಹೀಗೆ ಈ ಮಸೂದೆ ಜಾರಿಯಾದಲ್ಲಿ ಅಪರಾಧಕ್ಕೆ ಸಂಬಂಧಿತ ಸೆಕ್ಷನ್​ಗಳ ಸಂಖ್ಯೆಯಲ್ಲಿ ಬದಲಾವಣೆ ಆಗಲಿದೆ. - ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net