ಹೃದಯ ಶ್ರೀಮಂತಿಕೆ ಎಲ್ಲರನ್ನೂ ತನ್ನವರೆಂದೇ ಕಾಣುವ ಗುಣ

ವಿಜಯವಾಣಿ (1)
Published on
ಶ್ರೀಮಂತಿಕೆ ಎಂದರೆ ಬರೀ ಹಣದ ಶ್ರೀಮಂತಿಕೆ ಒಂದೇ ಅಲ್ಲ; ಅದು ಗುಣದ ಶ್ರೀಮಂತಿಕೆಯು ಹೌದು; ಹೃದಯ ಶ್ರೀಮಂತಿಕೆಯು ಹೌದು! ಬರಿಯ ಹಣದ ಶ್ರೀಮಂತಿಕೆಗೆ ತನ್ನದೇ ಆದ ಇತಿಮಿತಿಗಳಿವೆ.

ಉದಾಹರಣೆಗೆ ಹಣಬಲದಿಂದ ಕೊಂಡುಕೊಳ್ಳಬಹುದು: ದೊಡ್ಡ ಬಂಗಲೆಯನ್ನು, ಆದರೆ ಒಲವಿನ ಮನೆಯನ್ನಲ್ಲ! ಮನೆ ಒಲವಿನ ತಾಣವಾಗಲು ಬೇಕು ಮಧುರ ಪ್ರೀತಿ. ಭವ್ಯ ಬಂಧನ, ಅನುರಾಗದ ಅನುಬಂಧ. ಕೊಂಡುಕೊಳ್ಳಬಹುದು ಮೆತ್ತನೆಯ ಪಲ್ಲಂಗವನ್ನು, ಆದರೆ ಸವಿನಿದ್ದೆಯನ್ನಲ್ಲ. ಸುಖ ನಿದ್ದೆಗೆ ದೇಹ ದಣಿದಿರಬೇಕು ಮನಸ್ಸು ಮಣಿದಿರಬೇಕು. ಕೊಂಡುಕೊಳ್ಳಬಹುದು ಬೇಕಾದಷ್ಟು ಆಹಾರ ಪದಾರ್ಥಗಳನ್ನು ಆದರೆ ಹಸಿವೆಯನ್ನಲ್ಲ. ಹಸಿವಾಗಲು ಇರಬೇಕು ಒಳ್ಳೆಯ ಆರೋಗ್ಯ. ಕೊಂಡುಕೊಳ್ಳಬಹುದು ಭಾರಿ ಪುಸ್ತಕಗಳನ್ನು, ಆದರೆ ಜ್ಞಾನವನ್ನಲ್ಲ! ಜ್ಞಾನ ಸಂಪಾದನೆ ಸಾಧ್ಯವಾಗುವುದು ಪ್ರಯತ್ನ- ಪರಿಶ್ರಮಗಳಿಂದ. ಹಾಗೆಯೇ ಬೆಲೆಬಾಳುವ ಉಡುಪು ತೊಡುಪುಗಳನ್ನು, ಚಿನ್ನಾಭರಣಗಳನ್ನು, ಆದರೆ ನೈಜ ಸೌಂದರ್ಯವನ್ನಲ್ಲ. ಕಾರಣ ಅದು ದೈವದತ್ತವಾದುದು. ದೇವರ ದೊಡ್ಡ ವಿಗ್ರಹವನ್ನು ಖರೀದಿಸಬಹುದು, ಆದರೆ ಅವನ ಅನುಗ್ರಹವನ್ನಲ್ಲ. ಅನುಗ್ರಹವಾಗಲು ಬೇಕು ಅನನ್ಯವಾದ ಭಕ್ತಿ.

ಹಾಗೆ ನೋಡಿದರೆ, ಬರಿಯ ದುಡ್ಡು ಮಾತ್ರ ಇರುವವನಷ್ಟು ಬಡವ ಬೇರೊಬ್ಬನಿಲ್ಲ! ಆದರೆ ಹೃದಯ ಶ್ರೀಮಂತಿಕೆಗೆ ಯಾರ ನಿರ್ಬಂಧವೂ ಇಲ್ಲ. ಯಾವ ಬಂಡವಾಳವೂ ಬೇಕಿಲ್ಲ. ‘ಇವನಾರವ ಇವನಾರವ ನೆಂದೆಣಿಸದಿರಯ್ಯ, ಇವ ನಮ್ಮವ ಇವ ನಮ್ಮವ ಇವನಮ್ಮ ಮನೆಯ ಮಗನೆಂದೆಣಿಸಯ್ಯ’ ಎಂಬ ಬಸವಣ್ಣನವರ ವಚನದಂತೆ ಎಲ್ಲರ ಜೊತೆ ಬೆಳೆಸಿಕೊಳ್ಳುವ ಆತ್ಮೀಯತೆಯೇ ಹೃದಯ ಶ್ರೀಮಂತಿಕೆಯನ್ನು ವ್ಯಕ್ತಪಡಿಸುವ ಸಾಧನ. ಒಟ್ಟಿನಲ್ಲಿ ಬರೀ ಮನೆ ದೊಡ್ಡದಾದರೆ ಸಾಲದು. ಮನಸ್ಸೂ ದೊಡ್ಡದಾಗಿರಬೇಕು. ಬೆಲೆಬಾಳುವ ವಸ್ತುಗಳು ಇರಬಹುದು ಹಲವರಲ್ಲಿ, ಆದರೆ ಬೆಲೆ ಕಟ್ಟಲಾಗದ ಗುಣಗಳು ಇರುವುದು ಕೆಲವರಲ್ಲಿ ಮಾತ್ರ. ತನ್ನವರಲ್ಲದವರನ್ನೂ ತನ್ನವರೆಂದೇ ಕಾಣುವ ಗುಣವೇ ಹೃದಯ ಶ್ರೀಮಂತಿಕೆ. ಇದಕ್ಕೆ ಈ ಒಂದು ಪುಟ್ಟ ಘಟನೆ ಸಾಕ್ಷಿ.

ಒಮ್ಮೆ, ಒಂದು ಸೀರೆಯ ಅಂಗಡಿಗೆ ಶ್ರೀಮಂತ ಮಹಿಳೆಯೊಬ್ಬಳು ಬರುತ್ತಾಳೆ. ಬಂದವಳೇ ಸೀರೆಗಳನ್ನು ತೋರಿಸುವ ಹುಡುಗನಿಗೆ ಹೇಳುತ್ತಾಳೆ. ‘ನಮ್ಮ ಮನೆಯ ಕೆಲಸದವಳ ಮಗಳಿಗೆ ಮದುವೆ ಫಿಕ್ಸ್ ಆಗಿದೆಯಂತೆ. ಇಪ್ಪತ್ತೈದು ವರ್ಷಗಳಿಂದ ನಮ್ಮಲ್ಲಿ ಕೆಲಸ ಮಾಡುತ್ತಿರುವ ಈ ಕೆಲಸದವಳ ಮಗಳಿಗೆ ನಾನು ಏನಾದರೂ ಉಡುಗೊರೆ ಕೊಡಬೇಕಲ್ಲ! ಒಂದು ಅಗ್ಗದ ಕಡಿಮೆ ಬೆಲೆಯ ಕೆಲಸದವರು ಉಟ್ಟುಕೊಳ್ಳುವ ಸಾಧಾರಣ ಸೀರೆಯನ್ನೇ ಕೊಡಿ. ಅವರಿಗೆ ಅಷ್ಟೇ ಸಾಕು.’ ಅಂತೆಯೇ ಅಗ್ಗದ ಸೀರೆಯೊಂದನ್ನು ಖರೀದಿಸಿ ಆಕೆ ಹೊರಡುತ್ತಾಳೆ. ಇದಾದ ಕೆಲವೇ ದಿನಗಳಲ್ಲಿ ಅದೇ ಅಂಗಡಿಗೆ ಅದೇ ಮನೆಯ ಕೆಲಸದವಳು ಬರುತ್ತಾಳೆ. ಬಂದು ಸೀರೆ ಅಂಗಡಿಯವರಿಗೆ ಹೇಳುತ್ತಾಳೆ: ‘ನಾನು ಕೆಲಸ ಮಾಡುತ್ತಿರುವ ಮನೆಯ ಮಗಳಿಗೆ ಬರುವ ವಾರ ಮದುವೆ. ನಾನೇ ಸಾಕಿ ಬೆಳೆಸಿದ ಮಗು. ನನಗಂತೂ ನನ್ನ ಸ್ವಂತ ಮಗಳು ಇದ್ದ ಹಾಗೆ. ಎಷ್ಟು ಬೆಲೆ ಆದರೂ ಪರವಾಗಿಲ್ಲ.

ಒಂದು ಒಳ್ಳೆಯ ಸೀರೆಯನ್ನು ಕೊಡಿ. ನನಗೆ ಅವರು ಬಕ್ಷೀಸ್ ಕೊಟ್ಟಿದ್ದಾರೆ. ಅದನ್ನೇ ಈ ಸೀರೆ ಖರೀದಿಸಲು ವೆಚ್ಚಮಾಡಿದರಾಯಿತು’ ಇದು ಹೃದಯ ಶ್ರೀಮಂತಿಕೆ. ಹೃದಯ ಶ್ರೀಮಂತಿಕೆಗಿಂತ ಸಿರಿತನ ಬೇರೇನಿದೆ? ಅಂತೆಯೇ ಗುಣದ ಬಡತನಕ್ಕಿಂತ ದೊಡ್ಡ ಬಡತನ ಬೇರೊಂದಿಲ್ಲ. ಈ ಸತ್ಯವನ್ನೇ ವರಕವಿ ದ.ರಾ. ಬೇಂದ್ರೆ ಅವರು ತಮ್ಮ ಕವನದಲ್ಲಿ ಬಹಳ ಸುಂದರವಾಗಿ ಬರೆದಿರುತ್ತಾರೆ. ‘ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು’. ಆದುದರಿಂದ ನಮಗೆ ಶಾರೀರಿಕ ಸೌಂದರ್ಯವಿರಲಿ ಇರದಿರಲಿ, ಒಳ್ಳೆಯ ಆಂತರಿಕ ಸೌಂದರ್ಯವಿರಲಿ; ಆರ್ಥಿಕ ಶ್ರೀಮಂತಿಕೆ ಇರಲಿ ಇರದಿರಲಿ, ಹೃದಯ ಶ್ರೀಮಂತಿಕೆ ಮಾತ್ರ ಇರಲಿ. ಬರಿಯ ಹಣದ ಶ್ರೀಮಂತಿಕೆ ಜನರನ್ನು ದೂರ ಮಾಡುತ್ತದೆ.

ಆದರೆ ಗುಣದ ಶ್ರೀಮಂತಿಕೆ ಜನರನ್ನು ಹತ್ತಿರ ತರುತ್ತದೆ. ಸಂಪತ್ತು ಉಳ್ಳವರೆಲ್ಲ ಶ್ರೀಮಂತರಲ್ಲ. ಸಂತೃಪ್ತಿ ಉಳ್ಳವರೇ ನಿಜವಾದ ಶ್ರೀಮಂತರು. ಹೃದಯ ಶ್ರೀಮಂತಿಕೆ ಇಂತಹ ಸಂತೃಪ್ತಿಯನ್ನು, ಸಂತೋಷವನ್ನು ನೀಡುತ್ತವೆ. ನಾವೆಷ್ಟು ಸಂತೋಷವಾಗಿದ್ದೇವೆ ಎನ್ನುವುದರ ಮೇಲೆ ಜೀವನದ ಸಾರ್ಥಕತೆ ನಿರ್ಧಾರವಾಗುವುದಿಲ್ಲ. ನಮ್ಮಿಂದಾಗಿ ಎಷ್ಟು ಜನರು ಸಂತೋಷವಾಗಿದ್ದಾರೆ, ಸಂತೃಪ್ತರಾಗಿದ್ದಾರೆ ಅನ್ನುವುದರ ಮೇಲೆ ಜೀವನದ ಸಾರ್ಥಕತೆ ನಿರ್ಧಾರವಾಗುತ್ತದೆ. ನೀಡುವುದರಲ್ಲಿ ಇರುವ ಆನಂದ ಪಡೆಯುವುದರಲ್ಲಿ ಇಲ್ಲ. ಇದನ್ನು ಅನುಭವಿಸಿ ಆನಂದಿಸಬೇಕೆ ಹೊರತು ಶಬ್ದಗಳಲ್ಲಿ ತಿಳಿ ಹೇಳಲಾಗದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net