ಅಸ್ಸಾದ್​ ಚಡ್ಡಿ ಧರಿಸಿರುವ ಫೋಟೋಗಳು ವೈರಲ್​! ತಗ್ಗಲಿಲ್ಲ ಬಂಡುಕೋರರ ಆರ್ಭಟ | Syria Rebels

ವಿಜಯವಾಣಿ - 2024-12-16T214659.180
Published on

Bashar Assad: ಬಂಡುಕೋರರ ಪಡೆಗಳು (Syrian Rebels) ಸಿರಿಯಾ ಸರ್ಕಾರದ ವಿರುದ್ಧ ದೊಡ್ಡ ಸಮರ ಸಾರಿದ್ದಲ್ಲದೇ, ಮಾಜಿ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ 25 ವರ್ಷಗಳ ಆಡಳಿತಕ್ಕೆ ಯುಗಾಂತ್ಯವಾಡಿದ ವಿಷಯ ಇದೀಗ ಜಗಜ್ಜಾಹೀರಾಗಿದೆ. ಸಿರಿಯಾವನ್ನು ಅಸ್ಸಾದ್​​ರಿಂದ ಸಂಪೂರ್ಣವಾಗಿ ಕಸಿದುಕೊಂಡ ಬಂಡುಕೋರರು, ಸಿರಿಯಾದ ರಾಜಧಾನಿ ಡಮಾಸ್ಕಸ್​ ಅನ್ನು ತಮ್ಮ ಸ್ವಾಧಿನಕ್ಕೆ ಪಡೆದುಕೊಂಡು, ಹೊಸ ಆಡಳಿತಕ್ಕೆ ದಾಪುಗಾಲಿಟ್ಟಿದ್ದಾರೆ. ಬಶರ್​ ಅಧಿಕಾರದಲ್ಲಿ ಏನೇನಿತ್ತೋ ಅದನ್ನೆಲ್ಲಾ ತಮ್ಮ ಆಡಳಿತಕ್ಕೆ ತರುವಲ್ಲಿ ಯಶಸ್ವಿಯಾಗಿರುವ ಸಿರಿಯನ್​ ರೆಬೆಲ್ಸ್​. ಅಸ್ಸಾದ್​ ಒಡೆತನದ ಅರಮನೆಯಿಂದ ಹಿಡಿದು ಐಷಾರಾಮಿ ಕಾರು, ಲಕ್ಸುರಿ ಜೀವನವನ್ನು ಬಟಾಬಯಲು ಮಾಡಿದ್ದಾರೆ.

ಅಸ್ಸಾದ್​ಗೆ ಸಂದೇಶ

ಇತ್ತೀಚೆಗಷ್ಟೇ ಅಸ್ಸಾದ್​ ಉಳಿದಿದ್ದ ಭವ್ಯ ಬಂಗಲೆಯ ಮೂಲೆ ಮೂಲೆಯನ್ನು ತಡಕಾಡಿರುವ ಬಂಡುಕೋರರು, ಅಸ್ಸಾದ್​ ಬಳಸುತ್ತಿದ್ದ ದುಬಾರಿ ಮೌಲ್ಯದ ವಸ್ತುಗಳು, ಐಷಾರಾಮಿ ಕಾರುಗಳನ್ನು ವಿಡಿಯೋ ಮೂಲಕ ಜನರ ಮುಂದಿಟ್ಟಿದ್ದರು. ಈ ವಿಡಿಯೋವನ್ನು ರಷ್ಯಾದಲ್ಲಿ ತನ್ನ ಕುಟುಂಬದೊಂದಿಗೆ ವಾಸ್ತವ್ಯ ಹೂಡಿರುವ ಬಶರ್​ ಅಲ್​ ಅಸ್ಸಾದ್​ಗೆ ಸಂದೇಶವನ್ನಾಗಿ ರವಾನಿಸಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಈ ಮಧ್ಯೆ ಅಸ್ಸಾದ್​ ಆ ಕಾಲದಲ್ಲಿ ಒಳಉಡುಪನ್ನು ಧರಿಸಿ, ತೆಗೆಸಿಕೊಂಡ ಫೋಟೋಗಳನ್ನು ತೆರೆದಿಟ್ಟಿರುವ ಬಂಡುಕೋರರು, ಅಸ್ಸಾದ್​ ಚಡ್ಡಿ ಧರಿಸಿರುವ ಹಲವು ಭಂಗಿಗಳ ಛಾಯಾಚಿತ್ರವನ್ನು ಹರಿಬಿಟ್ಟಿದ್ದಾರೆ.

ಚಡ್ಡಿಯಲ್ಲೇ ಮಿಂಚಿದ್ದಾರೆ

ತನ್ನ 25 ವರ್ಷಗಳ ಆಡಳಿತ ಕಸಿದುಕೊಂಡ ಬಂಡುಕೋರರಿಗೆ ಹೆದರಿ ಸಿರಿಯಾದಿಂದ ಪಲಾಯನ ಮಾಡಿದ್ದ ಬಶರ್ ಅಲ್-ಅಸ್ಸಾದ್, ಸದ್ಯ ರಷ್ಯಾದಲ್ಲಿ ಕುಟುಂಬದೊಂದಿಗೆ ನೆಲೆ ಕಂಡುಕೊಂಡಿದ್ದಾರೆ. ಸಿರಿಯಾ ರಾಜಧಾನಿ ಡಮಾಸ್ಕಸ್ ಅನ್ನು ವಶಪಡಿಸಿಕೊಂಡ ಬಂಡುಕೋರರು, ಅಲೆಪ್ಪೊದಲ್ಲಿನ ಅಸ್ಸಾದ್​ ಅರಮನೆಯಲ್ಲಿದ್ದ ಆಲ್ಬಂಗಳಲ್ಲಿ ಮಾಜಿ ಅಧ್ಯಕ್ಷನ ಹಳೆಯ ಫೋಟೋಗಳನ್ನು ಜಗತ್ತಿಗೆ ತೋರಿಸಿದ್ದಾರೆ. ಕ್ಯಾಮರಾ ಮುಂದೆ ಆಕರ್ಷಕವಾಗಿ ಕಾಣಿಸುವಂತೆ ಪೋಸ್ ನೀಡಿರುವ ಅಸ್ಸಾದ್​, ಬಹುತೇಕ ಫೋಟೋಗಳಲ್ಲಿ ಚಡ್ಡಿಯಲ್ಲೇ ಮಿಂಚಿದ್ದಾರೆ.

ಶರ್ಟ್​, ಪ್ಯಾಂಟ್​ ಧರಿಸದೆ ಕೇವಲ ಚಡ್ಡಿಯಲ್ಲಿ ಕಾಣಿಸಿಕೊಂಡಿರುವ ಅಸ್ಸಾದ್​, ಸ್ಕೂಟರ್​ ಮೇಲೆ ನಿಂತು ತೆಗೆಸಿಕೊಂಡಿರುವ ಫೋಟೋಗಳು ಜಾಲತಾಣಗಳಲ್ಲಿ ಕಾಣಸಿಕ್ಕಿವೆ. ಸದ್ಯ ಈ ಫೋಟೋಗಳು ವ್ಯಾಪಕವಾಗಿ ಹರಿದಾಡಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net