

Siberian Tiger: ಪ್ರೀತಿಸಿದ ಹುಡುಗಿಗಾಗಿ ಯಾವುದೋ ಮೂಲೆಯಿಂದ ಮತ್ಯಾವುದೇ ಮೂಲೆಗೆ ಸಂಚರಿಸುವ ಪ್ರೇಮಿಯ ತವಕ, ಕಾತರ ನಾವೆಲ್ಲಾ ಜಾಲತಾಣಗಳಲ್ಲಿ ಕೇಳಿಯೂ ಇದ್ದೇವೆ, ಅಲ್ಲಲ್ಲಿ ನೋಡಿಯೂ ಇದ್ದೇವೆ. ಇಂತಹ ಘಟನೆಗಳ ಹಲವು ನಿದರ್ಶನಗಳು ಇಂದು ನಮ್ಮ ಕಣ್ಣು ಮುಂದಿವೆ. ಆದರೆ, ಪ್ರಾಣಿಗಳಲ್ಲಿ ಸಹ ಇದೇ ರೀತಿಯ ನಂಟು, ಬೇಸುಗೆಯಿದೆ ಎಂದರೆ ನಂಬಲು ನಿಜಕ್ಕೂ ಸಾಧ್ಯವಿಲ್ಲ. ಸರಳವಾಗಿ ಹೇಳುವುದಾದರೆ ಇಂತಹ ವಿಷಯಗಳು ಸತ್ಯಕ್ಕೆ ದೂರವೆಂದೆ ಅನೇಕರು ವಾದಿಸುತ್ತಾರೆ. ಆದರೆ, ಇಲ್ಲೊಂದು ಘಟನೆ ಅಂತಹ ವಾದಗಳನ್ನು ಸುಳ್ಳು ಎನ್ನುವಂತೆ ಮಾಡಿರುವುದು ಸದ್ಯ ಭಾರೀ ಅಚ್ಚರಿಗೆ ನೂಕಿದೆ. ತನ್ನ ಮಾಜಿ ಸಂಗಾತಿಯನ್ನು (Former Mate) ಹುಡುಕಿಕೊಂಡು ಬರೋಬ್ಬರಿ 200 ಕಿಮೀ ರಷ್ಯಾ ಕಾಡಿನ ಮಧ್ಯೆ ಸಂಚರಿಸಿದ ಸೈಬಿರಿಯನ್ ಹುಲಿ, ನೆಟ್ಟಿಗರು ಮತ್ತು ವನ್ಯಜೀವಿಗಳ ಹುಬ್ಬೇರಿಸಿದೆ.
ಸುಮಾರು 200 ಕಿಲೋಮೀಟರ್‌ಗಳಷ್ಟು ದೂರದಲ್ಲಿ ಬೇರ್ಪಟ್ಟಿದ್ದ ಎರಡು ಅಮುರ್ ಹುಲಿಗಳಾದ ಬೋರಿಸ್ ಮತ್ತು ಸ್ವೆಟ್ಲಾಯಾ, ಇದೀಗ ರಷ್ಯಾದ ಅರಣ್ಯದಲ್ಲಿ ಮತ್ತೆ ಒಂದಾಗಿರುವ ದೃಶ್ಯ ವನ್ಯಜೀವಿ ಪ್ರೇಮಿಗಳ ಮನ ಮಿಡಿಯುವಂತೆ ಮಾಡಿದೆ. 2012ರಲ್ಲಿ ಸಿಖೋಟೆ-ಅಲಿನ್ ಪರ್ವತಗಳಿಂದ ಅನಾಥವಾಗಿದ್ದ ಬೋರಿಸ್ ಮತ್ತು ಸ್ವೆಟ್ಲಾಯಾ ಹುಲಿಗಳನ್ನು ಸಂರಕ್ಷಣಾ ಕೇಂದ್ರದಲ್ಲಿ ಒಟ್ಟಿಗೆ ಇರಿಸಿ, ಪೋಷಿಸಲಾಗಿತ್ತು. 2014ರಲ್ಲಿ ಅಮುರ್ ಹುಲಿಗಳ ಐತಿಹಾಸಿಕ ಆವಾಸಸ್ಥಾನವಾದ ಪ್ರಿ-ಅಮುರ್ ಪ್ರದೇಶದಲ್ಲಿ ಇವೆರೆಡು ಹುಲಿಗಳನ್ನು 18 ತಿಂಗಳ ವಯಸ್ಸಿನಲ್ಲಿ ಕಾಡಿಗೆ ಬಿಡುವುದು ಗುರಿ ಹೊಂದಿದ್ದ ಸಂರಕ್ಷಣಾ ಕೇಂದ್ರ, ಅದರಂತೆಯೇ ಹುಲಿಗಳನ್ನು ವಿರುದ್ಧ ದಿಕ್ಕುಗಳಲ್ಲಿ ಬಿಟ್ಟಿತ್ತು. ಆದರೆ, ಮಾಜಿ ಸಂಗಾತಿಯ ಹೆಜ್ಜೆಯನ್ನೇ ಹುಡುಕುತ ಸಾಗಿದ ಸೈಬಿರಿಯನ್ ಹುಲಿರಾಯ, ಕಡೆಗೂ ಆಕೆಯನ್ನು ಸೇರುವಲ್ಲಿ ಯಶಸ್ವಿಯಾಗಿದೆ.
ಸಂರಕ್ಷಣಾ ಯೋಜನೆಯ ಭಾಗವಾಗಿ ಹುಲಿಗಳನ್ನು ನೂರಾರು ಕಿಲೋಮೀಟರ್‌ಗಳಷ್ಟು ದೂರ ಇಡಲಾಗಿತ್ತು. ಆದಾಗ್ಯೂ, ಬೋರಿಸ್ (ಗಂಡು ಹುಲಿ) ಅಸಾಮಾನ್ಯ ಚಲನೆಯ ಮಾದರಿಗಳನ್ನು ಹೊಂದಿತ್ತು ಎನ್ನಲಾಗಿದೆ. ವಿಶಿಷ್ಟ ಹುಲಿಗಳಿಗಿಂತ ಭಿನ್ನವಾಗಿ, ನಿರ್ದಿಷ್ಟ ಪ್ರದೇಶದೊಳಗೆ ತಿರುಗಾಡಲು ಒಲವು ತೋರುತ್ತಿತ್ತು. ಆದರೆ, ಬೋರಿಸ್ ಯಾವಾಗ ತನ್ನ ದಿಕ್ಕನ್ನು ಬದಲಿಸಿದ ಎಂಬುದು ಯಾರಿಗೂ ಅರಿವಿಲ್ಲ. ಸುಮಾರು ಮೂರು ವರ್ಷಗಳ ಕಾಲ ಸ್ವೆಟ್ಲಾಯಾ (ಹೆಣ್ಣು ಹುಲಿ) ಜತೆ ಒಂದಾಗಲು ಬರೋಬ್ಬರಿ 200 ಕಿಮೀ ರಷ್ಯಾ ಕಾಡಿನ ಮಧ್ಯೆ ಪ್ರಯಾಣಿಸಿದ್ದಾನೆ. ಭೇಟಿಯಾದ ಆರು ತಿಂಗಳಲ್ಲಿ ಇಬ್ಬರ ಪ್ರೇಮಕಥೆಯ ಸಾಕ್ಷಿಗೆ ಎರಡು ಹುಲಿ ಮರಿಗಳ ಜನನವಾಗಿದೆ ಎಂದು ವನ್ಯಜೀವಿ ಸಂರಕ್ಷಣಾ ಇಲಾಖೆ ಮಾಹಿತಿ ಹಂಚಿಕೊಂಡಿದೆ,(ಏಜೆನ್ಸೀಸ್).