ಕೇಂದ್ರ ಸರ್ಕಾರದಿಂದ ಬಡವರ ವಿರೋಧಿ ನೀತಿ, ದ್ವೇಷದ ರಾಜಕೀಯ: ಕೆಪಿಸಿಸಿ ಆರೋಪ

KPCC protest
Published on

ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬಡವರಿಗೆ ನೀಡಲು ಉದ್ದೇಶಿಸಿರುವ ಅನ್ನಭಾಗ್ಯ ಯೋಜನೆಯಡಿಯಲ್ಲಿ ಉಚಿತವಾಗಿ ಅಕ್ಕಿ ವಿತರಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಕೇಂದ್ರ ಸರ್ಕಾರ ಅಕ್ಕಿ ನೀಡದೆ ರಾಜ್ಯ ಸರ್ಕಾರದ ಮನವಿಯನ್ನ ತಿರಸ್ಕರಿಸಿರುವುದು ಬಿಜೆಪಿಯ ಬಡವರ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಕೆಪಿಸಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಕಾಂಗ್ರೆಸ್​ ಕಾರ್ಯಕರ್ತರು ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ ಇಂದು ಕೆಪಿಸಿಸಿ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್​ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರ ಪರ ಇದೆ ಎಂಬುದು ಕೇಂದ್ರ ಸರ್ಕಾರಕ್ಕೆ ತಿಳಿದಿದ್ದರೂ ಬಡವರ ಬಗ್ಗೆ ಕಾಳಜಿ ವಹಿಸದೆ ಬಡವರ ಅನ್ನಭಾಗ್ಯ ಯೋಜನೆಗೆ ಅಕ್ಕಿ ವಿತರಿಸದೆ ರಾಜ್ಯ ಸರ್ಕಾರದ ಮನವಿಯನ್ನು ತಿರಸ್ಕರಿಸಿದೆ. ಕೇಂದ್ರ ಸರ್ಕಾರಕ್ಕೆ ಹಣ ನೀಡಿ ಬೇಡಿಕೆ ಇಟ್ಟರೂ ಪ್ರಧಾನಿ ನರೇಂದ್ರ ಮೋದಿ ಬೇಡಿಕೆಯನ್ನು ಗಮನಿಸದಿರುವುದು ಅವರ ಬಡವರ ವಿರೋಧಿ ನೀತಿಯನ್ನ ಎತ್ತಿ ತೋರುತ್ತದೆ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ದ್ವೇಷದ ರಾಜಕೀಯ ಮಾಡುತ್ತಿರುವುದು ಸಾಬೀತಾಗಿದೆ ಎಂದು ಅವರು ಕಿಡಿಕಾರಿದರು.

ಬಡವರಿಗೆ ಅಕ್ಕಿ ನೀಡದೆ ಹೋದರೆ ಹೋರಾಟ ನಡೆಸುತ್ತೇವೆ ಎನ್ನುವ ಬಿಜೆಪಿ ನಾಯಕರ ಹೇಳಿಕೆಯನ್ನು ಗಮನಿಸಿದರೆ ಬಡವರಿಗೆ ಅಕ್ಕಿ ನೀಡದೆ ವಂಚಿಸುತ್ತಿರುವ ಮೋದಿ ಸರ್ಕಾರ ಎಂಬ ಅರಿವು ಸಹ ಅವರಿಗಿಲ್ಲ ಎಂಬುದು ಗೊತ್ತಾಗುತ್ತದೆ. ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಲು ಇವರಿಗೆ ತಾಕತ್ತು-ದಮ್ಮು ಇಲ್ಲವೇ? ಎಂದು ಪ್ರಶ್ನಿಸಿದ ಮನೋಹರ್, ರಾಜ್ಯದ ಬಿಜೆಪಿ ಸಂಸದರು ನಿಷ್ಕ್ರಿಯರು ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿಗಳನ್ನ ಹಂತಹಂತವಾಗಿ ಜಾರಿಗೆ ತರುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಸೇಡಿನ ರಾಜಕೀಯ ನಡೆಸಲು ಕೇಂದ್ರ ಸರ್ಕಾರ ಹುನ್ನಾರ ನಡೆಸಿ ಇಬ್ಬಗೆ ನೀತಿಯನ್ನು ಅನುಸರಿಸಿ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಲು ನಿರಾಕರಿಸಿದೆ. ಬಡವರಿಗೆ ಸಂಬಂಧಿತ ಈ ಯೋಜನೆಗೆ ಮಣ್ಣು ಹಾಕುತ್ತಿರುವ ಕೇಂದ್ರ ಸರ್ಕಾರದ ಇಬ್ಬಗೆ ನೀತಿಯನ್ನು ಖಂಡಿಸಿ ಅಡುಗೆ ಮಾಡುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಮುಖಂಡರಾದ ಜಿ.ಜನಾರ್ದನ್, ಎ.ಆನಂದ್, ಈ. ಶೇಖರ್, ಸುಧಾಕರ್, ಮಂಜುನಾಥ್, ಹೇಮರಾಜ್, ಅನಿಲ್, ಚಂದ್ರಶೇಖರ, ಓಬಳೇಶ್, ಉಮೇಶ್, ಪ್ರಶಾಂತ್, ಪುಟ್ಟರಾಜು, ಸುಪ್ರಜ್ ಮತ್ತಿತರರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net