

ಆನಂದಪುರ: ಇಲ್ಲಿನ ಗುಂಡಿಗದ್ದೆ ಬಯಲು ಪ್ರದೇಶದಲ್ಲಿ ಭತ್ತದ ನಾಟಿ ಕಾರ್ಯ ಬಿರುಸುಗೊಂಡಿದೆ. ಇದು ಸುಮಾರು 2 ಸಾವಿರ ಎಕರೆಯಷ್ಟು ವಿಸೀರ್ಣವಾಗಿದ್ದು ಉತ್ತಮ ಮಳೆಯ ಕಾರಣ ಹದಗೊಂಡಿದೆ. ಜೂನ್ 15ರ ಸುಮಾರಿಗೆ ಸ್ವಲ್ಪ ಹದಗೊಂಡ ಗದ್ದೆಯಲ್ಲಿ ರೈತರು ಭತ್ತದ ಬೀಜ ಅಗೆ ಹಾಕಿದ್ದರು. ನಾಟಿಗೆ ಗಿಡಗಳು ಸಿದ್ಧಗೊಂಡ ಕಾರಣ ಜುಲೈ 10 ರಿಂದಲೇ ನಾಟಿ ಕಾರ್ಯ ಆರಂಭಗೊಂಡಿದೆ.
ಕಳೆದ 3-4 ದಿನಗಳಿಂದ ಜೋರಾಗಿ ಮಳೆ ಬೀಳುತ್ತಿದ್ದರೂ ಸಹ ಅದನ್ನು ಲೆಕ್ಕಿಸದೆ ರೈತರು ಭತ್ತದ ನಾಟಿ ಕಾರ್ಯ ನಡೆಸುತ್ತಿದ್ದಾರೆ. ಆನಂದಪುರ, ಯಡೇಹಳ್ಳಿ, ಆಚಾಪುರ, ಮುರುಘಾಮಠ, ದಾಸಕೊಪ್ಪ, ಮಲಂದೂರು, ಖೈರಾ ಗ್ರಾಮಗಳ ವ್ಯಾಪ್ತಿಯ ವಿಶಾಲವಾದ ಗದ್ದೆ ಬಯಲು ಇದಾಗಿದೆ. ಸೋಮವಾರ ಮತ್ತು ಮಂಗಳವಾರ ಹಲವು ರೈತರು ತಮ್ಮ ಗದ್ದೆಯಲ್ಲಿ ನಾಟಿ ಕಾರ್ಯ ನಡೆಸುತ್ತಿದ್ದು ಗದ್ದೆ ಹದಗೊಳಿಸುವ ಟ್ರಾೃಕ್ಟರ್, ಟಿಲ್ಲರ್ ಯಂತ್ರಗಳ ಅಬ್ಬರ ಅಗೆ ಸಸಿ ಕಿತ್ತು ನೆಡುವ ಕೂಲಿಯಾಳುಗಳ ಕೃಷಿ ಚಟುವಟಿಕೆ ಜೋರಾಗಿ ನಡೆದಿತ್ತು. ಅತ್ಯಧಿಕ ಮಳೆ ಸುರಿದ ವರ್ಷಗಳಲ್ಲಿ 3-4 ದಿನ ನಾಟಿ ಗದ್ದೆಯಲ್ಲಿ ನೀರು ತುಂಬಿತ್ತು. ಈ ವರ್ಷ ಮತ್ತೆ ಅದೇ ರೀತಿ ನಾಟಿ ಗದ್ದೆ ಮುಳುಗುವ ಭೀತಿ ರೈತರಲ್ಲಿದೆ.