ಅಕ್ಕಿ ರಫ್ತು ನಿಷೇಧ, ಭತ್ತ ಖರೀದಿ ನೀತಿ ರೂಪಿಸಲು ಸಕಾಲ: ನಿರೀಕ್ಷಿತ ಇಳುವರಿ ಕುಸಿತದ ಅಡ್ಡ ಪರಿಣಾಮ ನಿಯಂತ್ರಣ

Paddy (1)
Published on

| ಮೃತ್ಯುಂಜಯ ಕಪಗಲ್ ಬೆಂಗಳೂರು

ರಾಜ್ಯದಲ್ಲಿ ಮಳೆ ವಿಳಂಬ, ಸಂಭಾವ್ಯ ಕೊರತೆಯಿಂದ ಭತ್ತ ಉತ್ಪಾದನೆ ಕುಸಿಯಲಿದೆ. ಜತೆಗೆ ಮುಕ್ತ ಮಾರುಕಟ್ಟೆಯಲ್ಲಿ ಬೇಡಿಕೆ ಏರಿಕೆಯಾಗಲಿದೆ ಎಂದು ತಜ್ಞರು ಮುನ್ನಂದಾಜಿಸಿದ್ದಾರೆ.

ಉತ್ಪಾದನೆ ಕಡಿಮೆಯಾಗಿ ಅಕ್ಕಿ ಕೊರತೆಯಾಗಲಿದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಅಕ್ಕಿ ರಫ್ತು ಮೇಲೆ ನಿಷೇಧ ಹೇರಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತು, ‘ಭತ್ತ ಖರೀದಿ ನೀತಿ’ ರೂಪಿಸುವುದು ಸಕಾಲಿಕ ಕ್ರಮವಾಗಲಿದೆ ಎಂದು ಹೇಳುತ್ತಿದ್ದಾರೆ. ಕೃಷಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳಿಗೆ ಮುನ್ನಂದಾಜಿನ ಬೆಳವಣಿಗೆ ಬಗ್ಗೆ ಸ್ಪಷ್ಟ ಮಾಹಿತಿಯೊಂದು ರವಾನೆಯಾಗಿದೆ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಮೂಲಗಳು ತಿಳಿಸಿವೆ.

ಅಡ್ಡ ಪರಿಣಾಮ ನಿಯಂತ್ರಣ: ಕಿಲೋ ಲೆಕ್ಕದ ಬಳಕೆಗೆ ಮೊತ್ತದ ಬೆಳೆ, ಗ್ರಾಮ್ ಲೆಕ್ಕದ ಉಪಯೋಗಕ್ಕೆ ಮೌಲ್ಯದ ಬೆಳೆ ಎಂದು ವಿಂಗಡಿಸಲಾಗುತ್ತಿದ್ದು, ಮೊತ್ತದ ಬೆಳೆಗೆ ಆದ್ಯತೆ ಕಡಿಮೆಯಾಗಿ ರೈತರಲ್ಲಿ ನಿರಾಸಕ್ತಿ ಹೆಚ್ಚತೊಡಗಿದೆ. ಮಳೆ ಹೊಯ್ದಾಟವಿದ್ದರೂ ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆ ಬೀಳುವ ಮುನ್ಸೂಚನೆಯಿದೆ. ಈ ಕಾರಣಕ್ಕೆ ಪ್ರಸಕ್ತ ವರ್ಷ ಭತ್ತದ ಉತ್ಪಾದನೆ ಶೇ.25 ಇಳಿಕೆಯಾಗುವ ಅಂದಾಜಿದೆ. ಸೆಪ್ಟೆಂಬರ್​ವರೆಗೂ ಭತ್ತ ನಾಟಿಗೆ ಕಾಲಾವಕಾಶವಿದೆ. ಆದರೆ, ಭತ್ತ ನಾಟಿ ವಿಳಂಬವಾದಷ್ಟು ಉತ್ಪಾದಕತೆ, ಇಳುವರಿ ಮತ್ತು ಗುಣಮಟ್ಟ ತಗುತ್ತದೆ ಎಂಬ ಅತಂಕವಿದೆ. ಉತ್ಪಾದನೆ ಕುಸಿತ, ಬೇಡಿಕೆ ಹೆಚ್ಚಳದ ಸಮತೋಲನ ಕಾಯ್ದುಕೊಳ್ಳಲು ‘ಖರೀದಿ ನೀತಿ’ ಸಿದ್ಧಪಡಿಸಿ ಈಗಿನಿಂದಲೇ ತಯಾರಿ ಮಾಡಿಕೊಂಡರೆ ಅಡ್ಡಪರಿಣಾಮ ನಿಯಂತ್ರಣ ಸಾಧ್ಯ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಎರಡಕ್ಕೂ ಅನುಕೂಲ: ಆಹಾರ ಭದ್ರತೆ ಯೋಜನೆಯಡಿ ಕೇಂದ್ರ ಸರ್ಕಾರ ತಲಾ ಐದು ಕೆಜಿ ಅಕ್ಕಿ ಪೂರೈಸುತ್ತದೆ. ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ ತಲಾ ಐದು ಕೆಜಿ ಪೂರೈಕೆ ಜವಾಬ್ದಾರಿ ನಿಭಾಯಿಸಬೇಕಾಗಿದೆ. ಅಲ್ಲದೆ, ಆರು ಲಕ್ಷ ಬಿಪಿಎಲ್ ಪಡಿತರ ಚೀಟಿದಾರರು ‘ಹೆಚ್ಚುವರಿ’ ಎಂದು ಕೇಂದ್ರ ಪರಿಗಣಿಸಿದ್ದು, ತಲಾ 10 ಕೆಜಿ ಅಕ್ಕಿ ಪೂರ್ತಿ ರಾಜ್ಯ ಸರ್ಕಾರವೇ ತುಂಬಿಕೊಡುತ್ತಿದೆ. ಆಹಾರ ಭದ್ರತಾ ಕಾಯ್ದೆ ಪ್ರಕಾರ ಬೆಂಬಲ ಬೆಲೆ ಯೋಜನೆಯಡಿ ಎಷ್ಟು ಬೇಕಾದರೂ ಅಕ್ಕಿ, ರಾಗಿ ಮತ್ತು ಜೋಳ ಖರೀದಿಗೆ ಅವಕಾಶವಿದ್ದು, ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ. ಭತ್ತ ನುರಿಸುವುದು, ಸಾಗಣೆ ಮತ್ತು ಚೀಲದ ಖರ್ಚು ಕೂಡ ಕೇಂದ್ರ ತುಂಬಿಕೊಡುತ್ತಿದ್ದು, ಭತ್ತದ ಉಪ ಉತ್ಪನ್ನಗಳನ್ನು ಆಯಾ ಮಿಲ್​ಗಳಿಗೆ ಬಿಟ್ಟುಕೊಡುತ್ತದೆ.

ಈ ಅವಕಾಶ ಬಳಸಿಕೊಂಡು 165 ಲಕ್ಷ ಟನ್ ಪಂಜಾಬ್ ಖರೀದಿಸಿದರೆ, ತೆಲಂಗಾಣ ಮತ್ತು ಆಂಧ್ರಪ್ರದೇಶ ಮುಂದಿವೆ. ಈ ಅವಕಾಶ ಬಳಕೆಯಲ್ಲಿ ಕರ್ನಾಟಕ ಹಿಂದೆ ಬಿದ್ದಿದ್ದು, ಬೆಂಬಲ ಬೆಲೆ ಯೋಜನೆಯಡಿ ಕಳೆದ ವರ್ಷ ಐದು ಲಕ್ಷ ಟನ್ ಭತ್ತ ಖರೀದಿಸಿದೆ. ಸ್ಥಳೀಯವಾಗಿ ಭತ್ತ ಖರೀದಿಸಿದರೆ ರೈತರು, ಅಕ್ಕಿ ಗಿರಣಿಗಳು, ವಹಿವಾಟು ಮತ್ತು ಉದ್ಯೋಗ ಸೃಷ್ಟಿಗೆ ಅವಕಾಶ ಲಭಿಸಲಿದ್ದು, ಹೆಚ್ಚಿನ ಹೊರೆಯಿಲ್ಲದೆ ಅನ್ನಭಾಗ್ಯ ಯೋಜನೆ ಸಮರ್ಪಕ ನಿರ್ವಹಣೆ ಸಾಧ್ಯವಿದೆ. ಕಳೆದ ವರ್ಷ ಉತ್ಪಾದನೆಯಾಗಿದ್ದರಲ್ಲಿ 40 ಲಕ್ಷ ಟನ್ ಭತ್ತ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ರೈತರು ಮಾರಾಟ ಮಾಡಿದ್ದು, ವರ್ತಕರಿಗೆ ಹೆಚ್ಚಿನ ಲಾಭ ಮಾಡಿಕೊಂಡರು. ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಭತ್ತಕ್ಕೆ ಸಕಾಲದಲ್ಲಿ ರೈತರಿಗೆ ಹಣ ಪಾವತಿ, ಅಕ್ಕಿ ಗಿರಣಿ ಮಾಲೀಕರ ಬಾಕಿ ಮೊತ್ತ 20 ಕೋಟಿ ರೂ. ಚುಕ್ತಾ ಮಾಡುವುದೂ ಅಷ್ಟೇ ಮುಖ್ಯವಾಗಿದೆ ಎಂದು ಎಂದು ಮೂಲಗಳು ಹೇಳುತ್ತವೆ.

ರೈತರ ಭತ್ತ ಖರೀದಿ ಸೇರಿ ಹಲವು ಬೇಡಿಕೆಗಳ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ. | ಕುರುಬೂರು ಶಾಂತಕುಮಾರ್, ರಾಜ್ಯಾಧ್ಯಕ್ಷ, ರೈತ ಸಂಘಟನೆಗಳ ಒಕ್ಕೂಟ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಭತ್ತ ನುರಿಸಿ ಅಕ್ಕಿ ಮಾಡಿ ಪೂರೈಸಲಾಗಿದೆ. ಅಕ್ಕಿ ಗಿರಣಿ ಮಾಲೀಕರಿಗೆ ಬಾಕಿ ಮೊತ್ತವನ್ನು ಸರ್ಕಾರ ಪಾವತಿಸುವ ತನಕ ಭತ್ತ ನುರಿಸಿ ಅಕ್ಕಿ ಮಾಡಿಕೊಡದಿರಲು ತೀರ್ವನಿಸಿದ್ದೇವೆ. | ಸಾವಿತ್ರಿ ಪುರುಷೋತ್ತಮ, ಕಾರ್ಯಾಧ್ಯಕ್ಷ ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘ

ಮುನ್ನಂದಾಜು ಅಂಕಿ-ಅಂಶ

(ವಾರ್ಷಿಕ ಲೆಕ್ಕಾಚಾರ)

  • ವಾರ್ಷಿಕ ಭತ್ತ ಉತ್ಪಾದನೆ- 65 ರಿಂದ 45 ಲಕ್ಷ ಟನ್​ಗೆ ಕುಸಿತ
  • 45 ಲಕ್ಷ ಟನ್ ಭತ್ತದಿಂದ ಲಭ್ಯವಾಗುವ ಅಕ್ಕಿ- 30 ಲಕ್ಷ ಟನ್
  • ಪಡಿತರ ವ್ಯವಸ್ಥೆ (ಅಂತ್ಯೋದಯ, ಬಿಪಿಎಲ್, ಎಪಿಎಲ್ ಸೇರಿ)ಗೆ -30 ಲಕ್ಷ ಟನ್
  • ಹೆಚ್ಚುವರಿ ತಲಾ ಐದು ಕೆಜಿ ವಿತರಣೆ (ಅಂತ್ಯೋದಯ, ಬಿಪಿಎಲ್)ಗೆ -20 ಲಕ್ಷ ಟನ್
  • ಪಡಿತರ ವ್ಯವಸ್ಥೆಗೆ ಒಳಪಡದ ಬಾಕಿ ಎರಡು ಕೋಟಿ ಜನಸಂಖ್ಯೆಗೆ -20 ಲಕ್ಷ ಟನ್
  • ಬೇರೆ ರಾಜ್ಯ, ದೇಶಗಳಿಗೆ ರಫ್ತಾಗುವ ಅಕ್ಕಿ ಪ್ರಮಾಣ- 20 ಲಕ್ಷ ಟನ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net