ನಿಮಗೆಲ್ಲ ನಾಚಿಕೆ ಆಗಬೇಕು! ನೀವು ಹೀರೋನಾ, ನಿರ್ದೇಶಕರಾ? 'ಕಾಂತಾರ' ಕುರಿತು ಆರ್​ಜಿವಿ ಹೇಳಿಕೆ ವೈರಲ್​ | Kantara Chapter 1

ವಿಜಯವಾಣಿ (9)
Published on

Kantara Chapter 1: ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಮುಂಚೂಣಿಯಲ್ಲಿದ್ದ 'ಕಾಂತಾರ ಚಾಪ್ಟರ್​ 1' ಇದೇ ಅಕ್ಟೋಬರ್ 2ರಂದು ಭಾರತಾದ್ಯಂತ ಬಿಡುಗಡೆಗೊಂಡು, ಇಂದು ಬಾಕ್ಸ್ ಆಫೀಸ್​ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುವತ್ತ ಸಾಗಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿ, ರಿಷಬ್ ಶೆಟ್ಟಿ ನಿರ್ದೇಶಿಸಿದ ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಅಲ್ಲದೆ, ಜಯರಾಮ್ ಮತ್ತು ಗುಲ್ಶನ್ ದೇವಯ್ಯ ಸೇರಿದಂತೆ ಮುಂತಾದ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಸಿನಿಪ್ರಿಯರಿಂದ ವ್ಯಾಪಕ ಮೆಚ್ಚುಗೆ, ಪ್ರಶಂಸೆಗಳು ಹರಿದುಬರುತ್ತಿವೆ.

ಆರ್​ಜಿವಿ ಹೇಳಿಕೆ ವೈರಲ್​

ಆರಂಭದಿಂದಲೂ ಭಾರಿ ಹೈಪ್ ಸೃಷ್ಟಿಸಿದ್ದ ಈ ಚಿತ್ರ ಬಿಡುಗಡೆಯಾದ ನಂತರವೂ ಅದೇ ಶ್ರೇಣಿಯ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿರುವುದು ಗಮನಾರ್ಹ. ಇದರೊಂದಿಗೆ, ಕಾಂತಾರ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಕಲೆಕ್ಷನ್ ಕಾಣುತ್ತಿದೆ. ಕ್ಲೈಮ್ಯಾಕ್ಸ್​ನಿಂದಲೇ ಹೆಚ್ಚು ಸದ್ದು ಮಾಡುತ್ತಿರುವ ರಿಷಬ್ ಚಿತ್ರಕ್ಕೆ ರಾಕಿಂಗ್ ಸ್ಟಾರ್ ಯಶ್​, ಎನ್‌ಟಿಆರ್, ಪ್ರಭಾಸ್ ಮತ್ತು ಸಂದೀಪ್ ರೆಡ್ಡಿ ವಂಗಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಜಾಲತಾಣಗಳಲ್ಲಿ ಪ್ರಶಂಸೆ ಹಾಗೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇತರೆ ಚಿತ್ರರಂಗದವರಿಗೆ ಕನ್ನಡ ಚಿತ್ರೋದ್ಯಮದ ಶಕ್ತಿಯನ್ನು ತೋರಿರುವ ರಿಷಬ್ ಶೆಟ್ಟಿ ಕುರಿತು ಇದೀಗ ನಿರ್ದೇಶಕ ರಾಮ್​ ಗೋಪಾಲ್ ವರ್ಮ ಪ್ರತಿಕ್ರಿಯೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

'ಕಾಂತಾರ 1' ಚಿತ್ರವನ್ನು ವೀಕ್ಷಿಸಿ, ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಆರ್​ಜಿವಿ,"ಕಾಂತಾರ ನಿಜಕ್ಕೂ ಒಂದು ಅದ್ಭುತವೇ ಸರಿ. ಪ್ರತಿಯೊಬ್ಬ ನಿರ್ಮಾಪಕರು ರಿಷಭ್ ಶೆಟ್ಟಿ ಮತ್ತು ಅವರ ತಂಡವನ್ನು ನೋಡಿ ನಾಚಿಕೆ ಪಡಬೇಕು. ಚಿತ್ರದ ವಿಷಯ ಮತ್ತು ಅದರ ಹಿಂದಿರುವ ಅವರ ಕಠಿಣ ಪರಿಶ್ರಮವೇ ಸಿನಿಮಾವನ್ನು ಬ್ಲಾಕ್​ಬಸ್ಟರ್​​ ಮಾಡಿದೆ. ಯಾವುದೇ ವಿಚಾರದಲ್ಲಿ ರಾಜಿಯಾಗದೆ ಕ್ರಿಯೇಟಿವ್​ ತಂಡಕ್ಕೆ ಬೆಂಬಲ ನೀಡಿರುವ ಹೊಂಬಾಳೆ ಫಿಲ್ಮ್ಸ್​​ಗೆ ಅಭಿನಂದನೆ. ರಿಷಭ್ ಶೆಟ್ಟಿ, ನೀವೊಬ್ಬ ಶ್ರೇಷ್ಠ ನಟರೋ ಅಥವಾ ನಿರ್ದೇಶಕರೋ? ನನ್ನಿಂದ ಇದನ್ನು ನಿರ್ಧರಿಸಲು ಸಾಧ್ಯವಾಗಲಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ. ಆರ್​ಜಿವಿ ಹಾಕಿರುವ ಈ ಪೋಸ್ಟ್ ಸದ್ಯ ಜಾಲತಾಣಗಳಲ್ಲಿ ನೆಟ್ಟಿಗರ ಗಮನ ಸೆಳೆದಿದೆ.

ಬಾಕ್ಸ್​ ಆಫೀಸ್​ನಲ್ಲಿ 'ಕಾಂತಾರ' ಕಹಳೆ

ಭಾರತೀಯ ಬಾಕ್ಸ್ ಆಫೀಸ್​ನ ಮೊದಲ ದಿನ 61.85 ಕೋಟಿ ರೂ. ಗಳಿಸಿದ ಈ ಚಿತ್ರವು, ಕೇವಲ 2 ದಿನಗಳಲ್ಲಿ 100 ಕೋಟಿ ರೂ. ಕ್ಲಬ್​ ಸೇರಿದೆ ಎಂದು ಸಿನಿ ಮೂಲಗಳು ತಿಳಿಸಿವೆ. ಪ್ರೇಕ್ಷಕರಿಂದ ಮಾತ್ರವಲ್ಲದೆ ತಾರೆಯರಿಂದಲೂ ಪ್ರಶಂಸೆಯನ್ನು ಪಡೆಯುತ್ತಿರುವ ರಿಷಬ್ ಕಾಂತಾರ 1 ಚಿತ್ರಕ್ಕೆ ಸದ್ಯ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆಗಳು ಹರಿದುಬರುತ್ತಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net