

Karur stampede: ಸೆ. 27ರಂದು ಕರೂರಿನಲ್ಲಿ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ಮತ್ತು ಅವರ ಟಿವಿಕೆ ಪಕ್ಷದ ವಿರುದ್ಧ ಮದ್ರಾಸ್ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, 41 ಮಂದಿಯ ಸಾವಿಗೆ ಕಾರಣವಾದ ಘಟನೆ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ, ಜವಾಬ್ದಾರಿಯೂ ಇಲ್ಲ, ಸ್ಥಳದಿಂದ ಓಡಿ ಹೋಗಿದ್ದೀರಿ ಎಂದು ಕಿಡಿಕಾರಿದೆ.
ಘಟನೆಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸೆಂಥಿಲ್ ಕುಮಾರ್, ನಟನನ್ನು ನೋಡಲು ಬಂದವರನ್ನು ರ್ಯಾಲಿ ಆಯೋಜಕರು ಕೈ ಬಿಟ್ಟಿದ್ದಾರೆ. ಅವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇಂತಹ ಸಮಯದಲ್ಲಿ ಪಕ್ಷವು ಅವರ ರಕ್ಷಣೆಗೆ ಬರಬೇಕಿತ್ತು. ಆದರೆ ಘಟನೆಯ ನಂತರ ನಾಯಕರು ಯಾವುದೇ ಪಶ್ಚಾತ್ತಾಪ, ಜವಾಬ್ದಾರಿ ಅಥವಾ ವಿಷಾದವನ್ನು ತೋರಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಘಟನೆ ಬಗ್ಗೆ ತನಿಖೆ ನಡೆಸುತ್ತಿರುವ ಸ್ಥಳೀಯ ಪೊಲೀಸರ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಾಧೀಶರು, ಪೊಲೀಸರು ಟಿವಿಕೆ ಮುಖ್ಯಸ್ಥನಿಗೆ ಮತ್ತು ಆ ಪಕ್ಷದ ನಾಯಕರಿಗೆ ದಯಪಾಲಿಸುತ್ತಿರುವಂತೆ ಕಂಡುಬರುತ್ತಿದೆ. ವಿಜಯ್ ವಿರುದ್ಧ ಯಾಕೆ ಪ್ರಕರಣ ದಾಖಲಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಪ್ರಕರಣದ ತನಿಖೆ ನಡೆಸಲು ಐಜಿಪಿ ಆಸ್ರಾ ಗರ್ಗ್ ನೇತೃತ್ವದ ವಿಶೇಷ ತನಿಖಾ ತಂಡ ರಚಿಸಲು ನ್ಯಾಯಾಲಯ ಆದೇಶಿಸಿದ್ದು, ರಾಜ್ಯ ಸರ್ಕಾರವು ಅದರೊಂದಿಗೆ ಸಹಕರಿಸುವಂತೆ ಸೂಚಿಸಿದೆ.
ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳು (ಎಸ್‌ಒಪಿ) ಅಂತಿಮಗೊಳ್ಳುವವರೆಗೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾಜಕೀಯ ರ್ಯಾಲಿಗಳು ಮತ್ತು ರೋಡ್ ಶೋಗಳನ್ನು ನಿಷೇಧಿಸುವಂತೆ ನ್ಯಾಯಾಲಯವು ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ. (ಏಜೆನ್ಸೀಸ್)