ಪರಿಹಾರ ಮತ್ತು ಪುನರ್ವಸತಿ ರಾಜಕೀಯ ಮೀರಿ ಇರಬೇಕು; ಕೇಂದ್ರದ ವಿರುದ್ಧ ಪ್ರಿಯಾಂಕಾ ಗಾಂಧಿ ಕಿಡಿ| Priyanka Gandhi

Untitled design - 2025-10-04T125817.931
Published on

Priyanka Gandhi: ಕೇರಳದ ವಯನಾಡ್​ನಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತ ದುರಂತಕ್ಕೆ ಸಂಬಂಧಪಟ್ಟಂತೆ ಪರಿಹಾರ ಮತ್ತು ಪುನರ್ವಸತಿಗೆ ಸಮರ್ಪಕವಾಗಿ ಸ್ಪಂದಿಸದಿರುವುದಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್ ನಾಯಕಿ ಮತ್ತು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಶನಿವಾರ(ಅ. 04) ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಭೂಕುಸಿತದಿಂದ ತತ್ತರಿಸಿದ್ದ ವಯನಾಡ್​ಗೆ ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿಗಾಗಿ ಕೇರಳ ಸರ್ಕಾರ 2,221 ಕೋಟಿ ರೂ. ಕೇಳಿದ್ರೆ, ಕೇಂದ್ರ ಸರ್ಕಾರ ಕೇವಲ 260 ಕೋಟಿ ರೂಪಾಯಿಗಳಿಗೆ ಅನುಮೋದನೆ ನೀಡಿದ್ದನ್ನು ಅವರು ಟೀಕಿಸಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಹಾಕಿರುವ ಪ್ರಿಯಾಂಕಾ ಗಾಂಧಿ, ವಯನಾಡಿನ ಜನರು ಕರುಣೆ, ನ್ಯಾಯ ಮತ್ತು ತುರ್ತು ಪರಿಹಾರವನ್ನು ಬೇಡುವ ವಿನಾಶಕಾರಿ ದುರಂತವನ್ನು ಎದುರಿಸಿದರು. ಭೂಕುಸಿತದ ನಂತರ ಜೀವನವನ್ನು ಪುನರ್ನಿರ್ಮಿಸಲು ಕೇರಳ ₹2,221 ಕೋಟಿ ಪರಿಹಾರವನ್ನು ಕೇಳಿತ್ತು. ಆದರೆ ಕೇಂದ್ರ ಸರ್ಕಾರ ₹260 ಕೋಟಿ ಮಾತ್ರ ಮಂಜೂರು ಮಾಡಿದೆ. ಇದು ಅಗತ್ಯವಿರುವ ಮೊತ್ತದ ಒಂದು ಭಾಗ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದುರಂತದ ಬಳಿಕ ಭೇಟಿ ನೀಡಿದ್ದ ಪ್ರಧಾನಿಯವರಿಂದ ಮನೆ, ಜೀವನೋಪಾಯ ಹಾಗೂ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದ ವಯನಾಡಿನ ಜನರು ಅರ್ಥಪೂರ್ಣ ಸಹಾಯವನ್ನು ನಿರೀಕ್ಷಿಸಿದ್ದರು. ಆದರೆ ಪ್ರಧಾನಿಗಳಿಂದ ಸಾಕಷ್ಟು ನೆರವು, ಬೆಂಬಲ ಸಿಗಲಿಲ್ಲ. ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳು ರಾಜಕೀಯವನ್ನು ಮೀರಿ ನಡೆಯಬೇಕು. ಮನುಷ್ಯನ ಸಂಕಷ್ಟಗಳನ್ನು ರಾಜಕೀಯ ಅವಕಾಶವೆಂದು ಪರಿಗಣಿಸಬಾರದು ಎಂದು ಹೇಳಿದ್ದಾರೆ.

ಏತನ್ಮಧ್ಯೆ ಕೇಂದ್ರ ಸರ್ಕಾರ ನೀಡಿದೆ ಎನ್ನಲಾಗಿರುವ 260.65 ಕೋಟಿ ರೂಪಾಯಿಗಳನ್ನು ಕೇರಳ ಇನ್ನೂ ಸ್ವೀಕರಿಸಿಲ್ಲ ಎಂದು ಸಿಎಂ ಪಿಣರಾಯಿ ವಿಜಯನ್ ರಾಜ್ಯ ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ. ದುರಂತವನ್ನು ಪರಿಶೀಲಿಸಿದ ವರದಿಗಳ ಆಧಾರದ ಮೇಲೆ ರಾಜ್ಯ 2,221,10 ಕೋಟಿ ರೂಪಾಯಿ ಪರಿಹಾರ ಮತ್ತು ಭೂಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕೆಂಬ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net