

RG Kar Case: ಆರ್‌ಜಿ ಕರ್ ಮೆಡಿಕಲ್ ಕಾಲೇಜಿನ ಟ್ರೈನಿ ವೈದ್ಯೆ ಕೊಲೆ-ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂಜಯ್ ಘೋಶ್ ಮತ್ತು ಅಭಿಜಿತ್ ಮೊಂಡಲ್ಗೆ ಕೋರ್ಟ್ ಜಾಮೀನು ನೀಡಿದ ಬೆನ್ನಲ್ಲೇ ಇದೀಗ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ. ಆಗಸ್ಟ್ 9ರಂದು ವೈದ್ಯೆಯ ಮೃತದೇಹವನ್ನು ವಶಕ್ಕೆ ಪಡೆದ ದಿನದಿಂದ ಇಂದಿನವರೆಗೂ ನ್ಯಾಯಕ್ಕಾಗಿ ಪ್ರತಿಭಟಿಸುತ್ತಿರುವ ಕಿರಿಯ ವೈದ್ಯರು ಮತ್ತು ಮೃತ ಟ್ರೈನಿ ವೈದ್ಯೆಯ ಪೋಷಕರು, ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ. ಆದರೆ, ಕೋರ್ಟ್ ಇಬ್ಬರಿಗೂ ಬೇಲ್ ನೀಡಿದ್ದನ್ನು ಖಂಡಿಸಿರುವ ಪ್ರತಿಭಟನಾನಿರತ ವೈದ್ಯರಿಗೆ ರಾಜಕೀಯ ಪಕ್ಷಗಳು ಇದೀಗ ಸಾಥ್ ನೀಡಿವೆ.
ಇಂದು ನಗರದ ವಿವಿಧ ಸ್ಥಳಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾಂಗ್ರೆಸ್ ಮತ್ತು ಕಿರಿಯ ವೈದ್ಯರು, ಆಡಳಿತರೂಢ ತೃಣಮೂಲ ಕಾಂಗ್ರೆಸ್ ಮತ್ತು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದ್ದಾರೆ. ಪ್ರಕರಣದ ಆರೋಪಿಗಳು ಜಾಮೀನು ಪಡೆದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯ ಒದಗಿಸಲು ಸಿಬಿಐ ವಿಫಲವಾಗಿದೆ ಎಂದು ಎಡಪಕ್ಷಗಳು ಮತ್ತು ಕಾಂಗ್ರೆಸ್ ಗಂಭೀರವಾಗಿ ಆರೋಪ ಹೊರಿಸಿವೆ.
"ನಮಗೆ ನ್ಯಾಯ ಸಿಗುವವರೆಗೂ ಈ ಹೋರಾಟ ನಿಲ್ಲಿಸುವುದಿಲ್ಲ. ಯಾರು ಏನೇ ಪಿತೂರಿ ಮಾಡಿದರೂ ಕೂಡ ನ್ಯಾಯಕ್ಕಾಗಿ ನಮ್ಮೀ ಪ್ರತಿಭಟನೆ ಕೊನೆಗೊಳ್ಳುವುದಿಲ್ಲ. ಇದು ನಮ್ಮ ಹಕ್ಕು" ಎಂದು ಕೊಲೆ-ಅತ್ಯಾಚಾರಕ್ಕೆ ಬಲಿಯಾದ ಟ್ರೈನಿ ವೈದ್ಯೆಯ ತಾಯಿ ಅಳಲು ತೋಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷವು, ರವೀಂದ್ರ ಸದನ್ ಪ್ರದೇಶದಿಂದ ದಕ್ಷಿಣ ಕೋಲ್ಕತ್ತಾದ ನಿಜಾಮ್ ಪ್ಯಾಲೇಸ್‌ನಲ್ಲಿರುವ ಸಿಬಿಐ ಕಚೇರಿಯವರೆಗೆ ವಿರೋಧಿ ಕೂಗುಗಳಿರುವ ನಾಮಫಲಕಗಳನ್ನು ಹಿಡಿದು ಮೆರವಣಿಗೆ ನಡೆಸಿತು. ಸದ್ಯ ಪ್ರತಿಭಟನೆ ತೀವ್ರಗೊಂಡಿದ್ದು, ವೈದ್ಯೆ ಸಾವಿಗೆ ನ್ಯಾಯದ ಹುಡುಕಾಟ ಜೋರಾಗಿದೆ,(ಏಜೆನ್ಸೀಸ್).