ಸಂಪಾದಕೀಯ | ಕ್ರಾಂತಿಕಾರಿ ಸುಧಾರಣೆ

Narendra Modi
Published on

ಈ ವರ್ಷದ ಏಪ್ರಿಲ್​ನಿಂದಲೇ ಅಮೆರಿಕದ ಸುಂಕ ನೀತಿ ತಲ್ಲಣ ಮೂಡಿಸಿದ್ದು, ಇತ್ತೀಚೆಗೆ ಭಾರತದ ಮೇಲೆ ಶೇಕಡ 50ರಷ್ಟು ಸುಂಕ ಹೇರಲಾಗಿದೆ. ಈ ಪರಿಸ್ಥಿತಿಯನ್ನು ನಿಭಾಯಿಸುವುದು ಸೇರಿದಂತೆ ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಟು ವೇಗ ನೀಡಲು ಕೇಂದ್ರ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದ್ದು, ಸ್ವಾಭಾವಿಕವಾಗಿಯೇ ವಿತ್ತ ವಲಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆಯಿಂದ ದೇಶವನ್ನು ಉದ್ದೇಶಿಸಿ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, ‘ದೀಪಾವಳಿ ಕೊಡುಗೆಯಾಗಿ ಜಿಎಸ್​ಟಿ ದರಗಳನ್ನು ತಗ್ಗಿಸಲಾಗುವುದು’ ಎಂದು ಘೋಷಿಸಿದ್ದರು. ಈ ಘೋಷಣೆಯ ಎರಡು ವಾರಗಳಲ್ಲೇ ಬುಧವಾರ ನಿರ್ಧಾರ ಹೊರಬಿದ್ದಿದ್ದು, ಇದೇ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ. ಇದೇ ದಿನದಿಂದ ನವರಾತ್ರಿ ಪರ್ವ ಆರಂಭಗೊಳ್ಳಲಿದ್ದು, ಈ ಅವಧಿಯಲ್ಲಿ ದೇಶದಲ್ಲಿ ವಾಹನ, ರಿಯಲ್ ಎಸ್ಟೇಟ್ ಸೇರಿದಂತೆ ಹಲವು ವಲಯಗಳಲ್ಲಿ ಖರೀದಿ ಚಟುವಟಿಕೆಗಳು ಹೆಚ್ಚುತ್ತವೆ ಎಂಬುದು ಗಮನಾರ್ಹ.

ಸರಕು ಮತ್ತು ಸೇವಾ ತೆರಿಗೆಯಲ್ಲಿ (ಜಿಎಸ್​ಟಿ) ಜಾರಿಗೊಂಡ ಎಂಟು ವರ್ಷಗಳ ನಂತರ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಈ ಮೂಲಕ ಜನಸ್ನೇಹಿ ತೆರಿಗೆ ವ್ಯವಸ್ಥೆ ಅಸ್ತಿತ್ವಕ್ಕೆ ಬರುತ್ತಿರುವುದು ಉತ್ತಮ ಬೆಳವಣಿಗೆ. ಜೀವನಾವಶ್ಯಕ ವಸ್ತುಗಳ ತೆರಿಗೆ ಇಳಿಕೆ ಮಾಡಿದ್ದರೆ, ಕೆಲವನ್ನು ತೆರಿಗೆಮುಕ್ತಗೊಳಿಸಲಾಗಿದೆ. ಆರೋಗ್ಯವಿಮೆ, ಜೀವವಿಮೆ, ವೈಯಕ್ತಿಕ ವಿಮೆಯನ್ನು ತೆರಿಗೆ ಮುಕ್ತಗೊಳಿಸಲಾಗಿರುವುದು ಮತ್ತು ಕ್ಯಾನ್ಸರ್ ಚಿಕಿತ್ಸೆ ಸೇರಿದಂತೆ 33 ವಿವಿಧ ಜೀವರಕ್ಷಕ ಔಷಧಗಳನ್ನು ತೆರಿಗೆಯಿಂದ ಹೊರಗಡೆ ಇಟ್ಟಿರುವುದು ದೇಶದ ಕೋಟ್ಯಂತರ ಮಧ್ಯಮವರ್ಗೀಯರಿಗೆ ನಿರಾಳ ತಂದಿದೆ. ಮುಖ್ಯವಾಗಿ, ಶೇಕಡ 12 ಮತ್ತು ಶೇ.28ರ ಸ್ಲ್ಯಾಬ್​ನ್ನು ರದ್ದುಗೊಳಿಸಲಾಗಿದ್ದು, ಶೇ.5 ಮತ್ತು ಶೇ.18ರ ಸ್ಲ್ಯಾಬ್ ಮಾತ್ರ ಉಳಿಸಿಕೊಳ್ಳಲಾಗಿದೆ. ತೆರಿಗೆ ದರಗಳ ಕಡಿತದಿಂದ ಉತ್ಪಾದನಾ ವೆಚ್ಚ ಕಡಿಮೆಯಾಗಲಿದ್ದು, ಸ್ಪರ್ಧಾತ್ಮಕ ಬೆಲೆ ನಿಗದಿಗೆ ಸಹಕಾರಿ ಆಗಲಿದೆ. ಮಾರಾಟಗಾರರಲ್ಲೂ ಗೊಂದಲ ನಿವಾರಣೆಯಾಗಲಿದ್ದು, ಕಡಿಮೆ ಸ್ಲ್ಯಾಬ್​ಗಳಿಂದ ಉತ್ಪನ್ನಗಳ ವರ್ಗೀಕರಣದಲ್ಲಿ ಸ್ಪಷ್ಟತೆ ಸಿಗಲಿದೆ.

‘ವ್ಯಾಪಕವಾದ ಸುಧಾರಣೆಗಳು ನಮ್ಮ ನಾಗರಿಕರ ಜೀವನವನ್ನು ಸುಧಾರಿಸುತ್ತದೆ ಮತ್ತು ಎಲ್ಲರಿಗೂ ವಿಶೇಷವಾಗಿ ಸಣ್ಣ ವ್ಯಾಪಾರಿಗಳು ಹಾಗೂ ಉದ್ಯಮಿಗಳಿಗೆ ವ್ಯಾಪಾರ ಸುಲಭತೆಯನ್ನು ಖಚಿತಪಡಿಸುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ಜಿಎಸ್​ಟಿ ಎಂಬುದು ಗೊಂದಲಕರ ತೆರಿಗೆ ವ್ಯವಸ್ಥೆ ಎಂದು ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳು ಪ್ರತಿಕ್ರಿಯಿಸಿದ್ದರು. ಅಲ್ಲದೆ, ಜಿಎಸ್​ಟಿಯಲ್ಲಿ ಮಾರ್ಪಾಡು ಅಗತ್ಯ ಎಂಬ ಬೇಡಿಕೆಯೂ ವ್ಯಾಪಕವಾಗಿ ಕೇಳಿಬಂದಿತ್ತು. ದೇಶ ಆರ್ಥಿಕ ಸುಧಾರಣೆಯ ದಿಕ್ಕಿನಲ್ಲಿ ಇರುವಾಗ, ಹಣದುಬ್ಬರವನ್ನು ನಿಯಂತ್ರಿಸಿರುವಾಗ ಮತ್ತು ಜಾಗತಿಕ ಅನಿಶ್ಚಿತತೆ ನಡುವೆಯೂ ಉತ್ತಮ ಜಿಡಿಪಿಯನ್ನು ಸಾಧಿಸಿರುವಾಗ ತೆರಿಗೆ ವ್ಯವಸ್ಥೆಯ ಸುಧಾರಣೆ ನಿಜಕ್ಕೂ ದಿಟ್ಟ ಹೆಜ್ಜೆ. ಹಲವು ವಲಯಗಳಲ್ಲಿ ತೆರಿಗೆ ಕಡಿತ ಮತ್ತು ತೆರಿಗೆ ಮಾರ್ಪಾಡಿನಿಂದ ಖಂಡಿತವಾಗಿಯೂ ಜನರ ಜೇಬಿನಲ್ಲಿ ಒಂದಿಷ್ಟು ದುಡ್ಡು ಉಳಿಯಲಿದೆ. ಆದರೆ, ಆಯಾ ರಂಗಗಳು ತೆರಿಗೆ ಕಡಿತದ ಲಾಭವನ್ನು ಗ್ರಾಹಕರಿಗೆ ಪ್ರಾಮಾಣಿಕವಾಗಿ ವರ್ಗಾಯಿಸಿದರೆ ಮಾತ್ರ ಕೇಂದ್ರ ಸರ್ಕಾರದ ಪ್ರಯತ್ನ ಸಾರ್ಥಕವಾಗಬಲ್ಲದು. ದೇಶದ ಮಧ್ಯಮವರ್ಗ ನೆಮ್ಮದಿಯಿಂದ ಬದುಕಬಲ್ಲದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net