

ಸಾಮಾಜಿಕ ಸುರಕ್ಷೆಯ ಕಾರ್ಯಕ್ರಮಗಳು, ಯೋಜನೆಗಳು ಜನರ ಜೀವನಮಟ್ಟ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಾಗಿ, ಇಂಥ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳುವುದು ಪ್ರಭುತ್ವದ ಕರ್ತವ್ಯ. ಅದೇ ರೀತಿ, ಕಾಲಮಾನಕ್ಕೆ ತಕ್ಕಂತೆ ಸುಧಾರಣೆಯ ಕ್ರಮಗಳನ್ನು ಅಳವಡಿಸುವುದು ಅಗತ್ಯ. ಆದರೆ, ಇಂಥ ಕ್ರಮಗಳು ಜನಸ್ನೇಹಿಯಾಗಿರಬೇಕೆ ಹೊರತು, ಜನರನ್ನು ತೊಂದರೆಗೆ ಸಿಲುಕಿಸುವಂತಿರಬಾರದು. ರಾಜ್ಯ ಸರ್ಕಾರ ಸಂಧ್ಯಾ ಸುರಕ್ಷಾ ಯೋಜನೆಯಡಿ ಪಿಂಚಣಿ ಸೌಲಭ್ಯವನ್ನು ಒದಗಿಸಲು ಮಾನದಂಡ ಬದಲಿಸಿರುವುದು ಈಗ ಹಿರಿಯ ನಾಗರಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಕುಟುಂಬದ ವಾರ್ಷಿಕ ಆದಾಯ 32 ಸಾವಿರ ರೂಪಾಯಿಗಿಂತ ಕಡಿಮೆ ಇದ್ದರಷ್ಟೇ ಇನ್ನು ಮುಂದೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಪಿಂಚಣಿ ಸೌಲಭ್ಯ ಸಿಗಲಿದೆ. ಸಂಧ್ಯಾಕಾಲದಲ್ಲಿ ಪಿಂಚಣಿಯ ಆಸರೆ ಬಯಸುವ ವೃದ್ಧರಿಗೆ ಇದು ಮಾರಕವಾಗಿ ಪರಿಣಮಿಸಲಿದೆ.
ರಾಜ್ಯದಲ್ಲಿ ಬಿಪಿಎಲ್ ಪಡಿತರ ಚೀಟಿ ಪಡೆಯಲು 1.20 ಲಕ್ಷ ರೂ. ಅದಾಯ ಮಿತಿ ಇದೆ. ಆದ್ದರಿಂದ ಈಗ ಪಿಂಚಣಿ ಅರ್ಜಿ ಸಲ್ಲಿಸಲು ಪಿಂಚಣಿ ಯೋಜನೆಗೆ 32 ಸಾವಿರ ರೂ. ವಾರ್ಷಿಕ ಆದಾಯ ಮಿತಿಗೊಳಿಸಿರುವುದು ಎಷ್ಟು ಸರಿ? ದುರ್ಬಲರು, ಅಸಹಾಯಕರು, ಬಡತನ ರೇಖೆಗಿಂತ ಕೆಳಗಿನವರಿಗೆ ಜೀವನ ನಿರ್ವಹಣೆಗೆ ಅನುಕೂಲವಾಗಲಿ ಎಂದು ಮಾಸಿಕ ಪಿಂಚಣಿ ನೀಡಲಾಗುತ್ತಿದೆ. ಆದರೆ, ವಯೋವೃದ್ಧರಿಗೆ ನೀಡುತ್ತಿದ್ದ ಸೌಲಭ್ಯವನ್ನು ಕುಟುಂಬದ ಆದಾಯ ಮಿತಿ ಹೇರಿ ಕಸಿದುಕೊಳ್ಳಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ.
ಆದಾಯ ಹೆಚ್ಚಿದ್ದವರಿಗೆ ಪಿಂಚಣಿ ಇಲ್ಲ ಎಂಬ ನಿಯಮವೇನೋ ಸರಿ. ಆದರೆ, ಇದರಿಂದ ನೈಜ ಫಲಾನುಭವಿಗಳಿಗೆ ಅನ್ಯಾಯವಾಗಬಾರದು. ನಿಯಮ ಬದಲಾವಣೆಗಿಂತ ಮೊದಲು ಸರ್ಕಾರ, ಈಗ ಅಸ್ತಿತ್ವದಲ್ಲಿರುವ ಓಬೀರಾಯನ ಕಾಲದ ‘ಕುಟುಂಬದ ಆದಾಯ ಮಿತಿ ನಿಯಮ’ವನ್ನು ಇಂದಿನ ಕಾಲಮಾನಕ್ಕೆ ತಕ್ಕಂತೆ ಪರಿಷ್ಕರಿಸುವುದು ಅವಶ್ಯ. ವಾರ್ಷಿಕ 32 ಸಾವಿರ ರೂ. ಆದಾಯದಲ್ಲಿ ಯಾವ ಕುಟುಂಬ ಇಂದಿನ ದಿನಗಳಲ್ಲಿ ಜೀವನ ಸಾಗಿಸಲು ಸಾಧ್ಯ? ಸರ್ಕಾರ ತನ್ನ ಬೊಕ್ಕಸದ ಮೇಲಾಗುತ್ತಿರುವ ಹೊರೆಯನ್ನು ತಗ್ಗಿಸಿಕೊಳ್ಳಲು ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಅದನ್ನು ಬಿಟ್ಟು ಸಾಮಾಜಿಕ ಸುರಕ್ಷಾ ಯೋಜನೆಗಳ ಆಶಯಗಳ ಮೇಲೆಯೇ ಪ್ರಹಾರ ಮಾಡುವುದು ಸಲ್ಲ.
ಪಿಂಚಣಿ ಅರ್ಜಿಗೆ ಪಡಿತರ ತಂತ್ರಾಂಶ ಜೋಡಣೆ ಮಾಡಿದರೂ ನಿಜವಾದ ಬಿಪಿಎಲ್ ಜನರನ್ನು ಗುರುತಿಸುವುದು ಕಷ್ಟ. ಏಕೆಂದರೆ ಎಷ್ಟೋ ಕಡೆ ಆರ್ಥಿಕ ಸ್ಥಿತಿವಂತರು ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. ಇಂಥ ಅನೇಕ ನ್ಯೂನತೆಗಳು ಈಗಿನ ವ್ಯವಸ್ಥೆಯಲ್ಲಿವೆ. ಅವುಗಳನ್ನೆಲ್ಲ ಸರಿಪಡಿಸಿ, ನಂತರ ಪಿಂಚಣಿ ವಿತರಣೆ ವ್ಯವಸ್ಥೆಯ ಸುಧಾರಣೆಗೆ ಕೈಹಾಕುವುದು ಒಳಿತು. ಆಗ ಮಾತ್ರ ನಿಜವಾದ ಆರ್ಥಿಕ ಸ್ಥಿತಿವಂತರನ್ನು ಪಿಂಚಣಿಯಿಂದ ದೂರವಿಡಲು ಸಾಧ್ಯ. ಹಾಗಾಗಿ, ಸರ್ಕಾರ ತರಾತುರಿಯಲ್ಲಿ ಪಿಂಚಣಿ ಸಂಬಂಧಿತ ನಿಯಮ ಬದಲಿಸಿ, ವಯೋವೃದ್ಧರನ್ನು ಸಂಕಷ್ಟಕ್ಕೆ ತಳ್ಳುವುದು ಬೇಡ.