ದೇವರ ಮನೆಯಲ್ಲಿ ಸಿಎಂ ರೇವಂತ್​ ರೆಡ್ಡಿ ಫೋಟೋ! ಕಷ್ಟಕಾಲದಲ್ಲಿ ಕೈಹಿಡಿದವರನ್ನು ಸ್ಮರಿಸಿದ ಕುಮಾರಿ | Kumari Aunty

ವಿಜಯವಾಣಿ - 2025-02-20T193250.763
Published on

Kumari Aunty: ಹೈದರಾಬಾದ್​ನ ರಸ್ತೆಬದಿ ಕಡಿಮೆ ದರದಲ್ಲಿ ರುಚಿಕರವಾದ ಮಾಂಸಹಾರಿ ಊಟವನ್ನು ಜನರಿಗೆ ಉಣಬಡಿಸುತ್ತಿದ್ದ ಕುಮಾರಿ ಎಂಬುವವರು, ತಮ್ಮ ವಿಧವಿಧವಾದ ಅಡುಗೆ ರುಚಿಯಿಂದಲೇ ಇಡೀ ನಗರದಲ್ಲಿ ಹೆಸರುವಾಸಿಯಾಗಿದ್ದರು. ಹಸಿದು ಬಂದವರಿಗೆ ಕೈಗೆಟುಕುವ ದರದಲ್ಲಿ ಭರ್ಜರಿ ಊಟ ಕೊಡುತ್ತಿದ್ದ ಕುಮಾರಿ ಅವರನ್ನು ಕುಮಾರಿ ಆಂಟಿ ಅಂಗಡಿ ಎಂದೇ ಎಲ್ಲರೂ ಗುರುತಿಸುತ್ತಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಇವರ ಹೋಟೆಲ್ ಜನಪ್ರಿಯತೆ ಪಡೆದಿದ್ದೇ ತಡ, ನಾನಾ ರಾಜ್ಯ, ಜಿಲ್ಲೆಗಳಿಂದ ಜನರು ಆಗಮಿಸಿ ಇವರನ್ನು ಮತ್ತಷ್ಟು ಫೇಮಸ್​ ಮಾಡಿದರು.

ತೆಲುಗು ಜನರಿಗೆ ಕುಮಾರಿ ಅವರ ಪರಿಚಯ ಅಗತ್ಯವಿಲ್ಲ. ಸೋಷಿಯಲ್ ಮೀಡಿಯಾ ಮುಖಾಂತರವೇ ರಾಜ್ಯದ ಹಲವಾರು ಭಾಗಗಳಿಗೆ ತಲುಪಿದ ಕುಮಾರಿ, ತಮ್ಮ ಊಟದ ಶೈಲಿ, ಅದನ್ನು ಕಡಿಮೆ ದರಕ್ಕೆ ಕೊಡುವುದು ಎಲ್ಲರಿಗೂ ಅಚ್ಚರಿ ತಂದಿತು ಜತೆಗೆ ಗಮನಸೆಳೆಯಿತು. ಕಳೆದ ವರ್ಷ ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಬಗ್ಗೆಯೇ ಸಿಕ್ಕಾಪಟ್ಟೆ ಚರ್ಚೆಗಳು ನಡೆದಿತ್ತು. ರೋಡ್ ಸೈಡ್ ಫುಡ್ ಬ್ಯುಸಿನೆಸ್​ನಲ್ಲಿ ಖ್ಯಾತಿ ಗಳಿಸಿರುವ ಕುಮಾರಿ ಆಂಟಿ, ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

'ಸಾವಿರ ರೂ. ಮೌಲ್ಯವಿರುವ ನಿಮಗೆ ಎರಡು ಲಿವರ್ ಎಕ್ಟ್ರಾ' ಎಂಬ ಡೈಲಾಗ್​ನಿಂದಲೇ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡಿದ್ದ ಕುಮಾರ್ ಆಂಟಿ ಅಂಗಡಿಗೆ ಕೇವಲ ತೆಲುಗು ಜನ ಮಾತ್ರವಲ್ಲದೇ ಇತರೆ ರಾಜ್ಯಗಳಿಂದ ಜನರು ಹರಿದುಬಂದರು. ಇದರಿಂದ ಕುಮಾರಿ ವ್ಯಾಪರವು ಜೋರಾಯಿತು. ಜನಜಂಗುಳಿ ಹೆಚ್ಚಾದ ಹಿನ್ನೆಲೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕೂಡ​ ಹೆಚ್ಚಾಯಿತು. ಕುಮಾರಿ ಅಂಗಡಿಯಿಂದ ವಾಹನ ಸಂಚಾರಕ್ಕೆ ತೊಂದರೆ ಆದ ಕಾರಣ ಆಕೆಯ ಅಂಗಡಿಯನ್ನು ನಗರಾಡಳಿತ ಮುಚ್ಚಲು ಆದೇಶಿಸಿತು. ಇದು ಅವರ ವಹಿವಾಟಿಗೆ ದೊಡ್ಡ ಮಟ್ಟದ ಪೆಟ್ಟು ನೀಡಿತು.

ತೀವ್ರ ನಷ್ಟ ಅನುಭವಿಸಿ, ಅಂಗಡಿ ತೆರೆಯಲು ಪರದಾಡಿದ ಕುಮಾರಿ ಆಂಟಿಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ವ್ಯಾಪಕ ಬೆಂಬಲ ಸೂಚಿಸಿದರು. ಅಂದು ಈ ಬೆಳವಣಿಗೆಯನ್ನು ಗಮನಿಸಿದ ಸಿಎಂ ರೇವಂತ್ ರೆಡ್ಡಿ, ಟ್ರಾಫಿಕ್​ ಸಮಸ್ಯೆ ಉಂಟಾಗದಂತೆ ಹೋಟೆಲ್​ ನಡೆಸಿಕೊಂಡು ಹೋಗುವಂತೆ ಆಕೆಗೆ ಅನುವು ಮಾಡಿಕೊಟ್ಟರು. ಇದರಿಂದ ಮತ್ತೆ ಕುಮಾರಿ ತಮ್ಮ ಹೋಟೆಲ್​ ನಡೆಸುವಂತಾಯಿತು.

ರೇವಂತ್ ರೆಡ್ಡಿ ಪ್ರತಿಕ್ರಿಯೆ ಬಳಿಕ ಮತ್ತಷ್ಟು ಜನಪ್ರಿಯತೆ ಗಳಿಸಿದ ಕುಮಾರಿ, ಕೆಲವು ಧಾರವಾಹಿಯಲ್ಲಿಯೂ ಕಾಣಿಸಿಕೊಂಡರು. ಅದಾದ ಬಳಿಕ ಇಲ್ಲಿಯವರೆಗೂ ಜಾಲತಾಣಗಳಲ್ಲಿ ಸದ್ದು ಮಾಡದ ಕುಮಾರಿ ಆಂಟಿ, ಇದೀಗ ಕಳೆದ ಎರಡು ದಿನಗಳಿಂದ ಸಿಕ್ಕಾಪಟ್ಟೆ ಸುದ್ದು ಮಾಡುತ್ತಿದ್ದಾರೆ. ಅದಕ್ಕೆ ಕಾರಣ, ಅವರ ದೇವರ ಮನೆಯಲ್ಲಿರುವ ಸಿಎಂ ಫೋಟೋ ಎಂಬುದು ಗಮನಾರ್ಹ. ಅಂದು ತನ್ನ ದುಡಿಮೆಗೆ ನಿರ್ಬಂಧ ಹೇರಿದ್ದ ಸಂಚಾರಿ ಪೊಲೀಸರಿಂದ ತೀರ ಮನನೊಂದಿದ್ದ ಕುಮಾರಿಗೆ ಸಿಎಂ ರೇವಂತ್​ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದೇ ಇದಕ್ಕೆ ಕಾರಣ.

ಸಿಎಂ ಸಹಾಯವನ್ನು ಸ್ಮರಿಸುವ ಸಲುವಾಗಿ ತನ್ನ ಮನೆಯ ದೇವರ ಕೋಣೆಯಲ್ಲಿ ರೇವಂತ್ ರೆಡ್ಡಿಯವರ ಫೋಟೋವನ್ನಿಟ್ಟಿರುವ ಕುಮಾರಿ, ಎಲ್ಲಾ ದೇವರಿಗೂ ಪೂಜೆ ಮಾಡುವಂತೆ ಸಿಎಂ ಫೋಟೋಗೂ ಪೂಜೆ ಮಾಡುತ್ತಿರುವುದು ವೈರಲ್ ವಿಡಿಯೋದಲ್ಲಿ ಸೆರೆಯಾಗಿದೆ. ಭಗವಂತನಿಗೆ ಪೂಜೆ ಮಾಡುವ ಕುಮಾರಿ, ತನ್ನ ಕಷ್ಟಕಾಲದಲ್ಲಿ ಸಹಾಯ ಮಾಡಿದ ರೇವಂತ್ ರೆಡ್ಡಿಯನ್ನು ದಿನನಿತ್ಯ ಸ್ಮರಿಸುತ್ತಿರುವುದು ಇದೀಗ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಡಿಯೋ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಹಲವರು ಹಲವು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net