

ನವದೆಹಲಿ: ಭಾರತ ಮಿತ್ರ ರಾಷ್ಟ್ರವಾಗಿದೆ. ಅದು ಅತಿಕ್ರಮಿಸಿಕೊಂಡಿರುವ ನಮ್ಮ ಜಾಗಗಳನ್ನು ಅದು ಒಳ್ಳೆಯ ಮಾತಿನಲ್ಲಿ ನಮಗೆ ಮರಳಿಸಬೇಕು ಎಂದು ನೇಪಾಳದ ರಕ್ಷಣಾ ಸಚಿವ ಈಶ್ವರ್ ಪೊಖ್ರೇಲ್ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಚೀನಾದ ಚಿತಾವಣೆ ಮೇರೆಗೆ ನಾವು ಇಲ್ಲದ ಗಡಿ ವಿವಾದವನ್ನು ಕೆದುಕುತ್ತಿದ್ದೇವೆ ಎಂಬ ಭಾರತೀಯ ಸೇನಾಪಡೆ ಮುಖ್ಯಸ್ಥ ಜನರಲ್ ಎಂ.ಎಂ. ನರವಾನೆ ಅವರ ಆರೋಪ ಒಂದು ರಾಜಕೀಯ ಸ್ಟಂಟ್ ಎಂದು ಬಣ್ಣಿಸಿದರು.
ಉತ್ತರಾಖಂಡದ ಧಾರಚುಲಾದೊಂದಿಗೆ ಸಂಪರ್ಕ ಒದಗಿಸುವ ರೀತಿಯಲ್ಲಿ ಲಿಪುಲೇಖ್ಗೆ ಭಾರತ ರಸ್ತೆ ನಿರ್ಮಿಸಿರುವುದಕ್ಕೆ ನೇಪಾಳ ಆಕ್ಷೇಪ ವ್ಯಕ್ತಪಡಿಸಿತ್ತು. ಯಾವುದೋ ಬಾಹ್ಯ ಶಕ್ತಿಯ ಒತ್ತಡಕ್ಕೆ ಮಣಿದು ನೇಪಾಳ ಈ ಆರೋಪ ಮಾಡುತ್ತಿದೆ ಎಂದು ಜನರಲ್ ನರವಾನೆ ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಆದರೆ, ಇದಾಗಿ ಒಂದೆರಡು ದಿನಗಳಲ್ಲಿ ನೇಪಾಳ ಲಿಪುಲೇಖ್, ಲಿಂಪಿಯಾಧುರಾ ಮತ್ತು ಕಾಲಾಪಾನಿ ತಮಗೆ ಸೇರಿದ್ದು ಎಂಬಂತೆ ಬಿಂಬಿಸಿ ಪರಿಷ್ಕೃತ ಭೂಪಟವನ್ನು ಬಿಡುಗಡೆ ಮಾಡಿತ್ತು. ಆದರೆ ಈ ಮೂರು ಪ್ರದೇಶಗಳು ಉತ್ತರಾಖಂಡದ ಪಿತ್ತೋರ್ಗಢ ಜಿಲ್ಲೆಯ ವ್ಯಾಪ್ತಿಗೆ ಬರುತ್ತವೆ ಎಂದು ಭಾರತ ಪ್ರತಿಪಾದಿಸಿದೆ.
ಈ ಮೂರು ಪ್ರದೇಶಗಳನ್ನು ಭಾರತ ಅತಿಕ್ರಮಿಸಿಕೊಂಡಿದೆ. ನೇಪಾಳದೊಂದಿಗೆ ಭಾರತ ಸ್ನೇಹ ಹಾಗೂ ಸೌಹಾರ್ದಯುತ ಸಂಬಂಧ ಹೊಂದಿದೆ. ಆದ್ದರಿಂದ ರಾಜಕೀಯ ಮತ್ತು ರಾಜತಾಂತ್ರಿಕ ಮಾರ್ಗದಲ್ಲಿನ ಮಾತುಕತೆ ಮೂಲಕ ಈ ಪ್ರದೇಶಗಳನ್ನು ನಮಗೆ ಮರಳಿಸಬೇಕು ಎಂದು ನೇಪಾಳದ ರಕ್ಷಣಾ ಸಚಿವ ಈಶ್ವರ್ ಪೊಖ್ರೇಲ್ ಹೇಳಿದ್ದಾರೆ.