

Supreme Court Ex Judges: ಉಪರಾಷ್ಟ್ರಪತಿ ಚುನಾವಣೆಯಲ್ಲಿ ಇಂಡಿಯಾ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಿವೃತ್ತ ನ್ಯಾ.ಸುದರ್ಶನ್ ರೆಡ್ಡಿ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿದ್ದಾಗ ನೀಡಿದ ಸಾಲ್ವಾ ಜುಡುಮ್ ತೀರ್ಪು ಉಲ್ಲೇಖಿಸಿ ಅವರನ್ನು ನಕ್ಸಲ್ ಬೆಂಬಲಿಗರೆಂದು ಕೇಂದ್ರ ಗೃಹಸಚಿವ ಅಮಿತ್ ಶಾ ಆರೋಪಿಸಿದ್ದಕ್ಕೆ, ನಿವೃತ್ತ ನ್ಯಾಯಾಧೀಶ ಗುಂಪೊಂದು ಇದೊಂದು ದುರದೃಷ್ಟಕರ, ಪಕ್ಷಪಾತಪೂರಿತ ತಪ್ಪು ವ್ಯಾಖ್ಯಾನ ಎಂದು ಖಂಡಿಸಿದೆ.
ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಕುರಿಯನ್ ಜೋಸೆಫ್, ಮದನ್ ಬಿ. ಲೋಕೂರ್ ಮತ್ತು ಜೆ. ಚೆಲಮೇಶ್ವರ್, ಎ.ಕೆ. ಪಟ್ನಾಯಕ್, ಅಭಯ್ ಒಕಾ, ಗೋಪಾಲ ಗೌಡ, ವಿಕ್ರಮ್‌ಜಿತ್ ಸೇನ್ ಸೇರಿದಂತೆ 18 ನಿವೃತ್ತ ನ್ಯಾಯಾಧೀಶರ ಗುಂಪು ಹೇಳಿಕೆಯನ್ನು ಖಂಡಿಸಿ ಪತ್ರ ಬಿಡುಗಡೆ ಮಾಡಿದೆ.
ಉನ್ನತ ರಾಜಕೀಯ ನಾಯಕರಿಂದ ಸುಪ್ರೀಂ ಕೋರ್ಟ್‌ನ ತೀರ್ಪಿನ ಬಗ್ಗೆ ಪಕ್ಷಪಾತಪೂರಿತ ತಪ್ಪು ವ್ಯಾಖ್ಯಾನವು ನ್ಯಾಯಾಧೀಶರ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಸಾಲ್ವಾ ಜುಡಮ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಸಾರ್ವಜನಿಕವಾಗಿ ತಪ್ಪಾಗಿ ವ್ಯಾಖ್ಯಾನಿಸಿರುವುದು ದುರದೃಷ್ಟಕರ. ಈ ತೀರ್ಪು ಎಲ್ಲಿಯೂ ನಕ್ಸಲಿಸಂ ಅಥವಾ ಅದರ ಸಿದ್ಧಾಂತವನ್ನು, ಸ್ಪಷ್ಟವಾಗಿ ಅಥವಾ ಅದರ ಆದೇಶದಲ್ಲಿ ಸಮರ್ಥಿಸುವುದಿಲ್ಲ ಎಂದಿದ್ದಾರೆ.
ಉಪರಾಷ್ಟ್ರಪತಿ ಚುನವಣೆಗಾಗಿ ನಡೆಯುವ ಪ್ರಚಾರವು ಸಿದ್ಧಾಂತದಿಂದ ಕೂಡಿರಬಹುದು. ಆದರೆ ಅದನ್ನು ಸಭ್ಯವಾಗಿ ಮತ್ತು ಘನತೆಯಿಂದ ನಡೆಸಬಹುದು. ಯಾವುದೇ ಅಭ್ಯರ್ಥಿಯ ತಿಳಿಯದ ಸಿದ್ಧಾಂತವನ್ನು ಟೀಕಿಸುವುದನ್ನು ತಪ್ಪಿಸಬೇಕು. "ಸುಪ್ರೀಂ ಕೋರ್ಟ್‌ನ ತೀರ್ಪಿನ ಪಕ್ಷಪಾತಪೂರಿತ ತಪ್ಪು ವ್ಯಾಖ್ಯಾನವು ನ್ಯಾಯಾಧೀಶರ ಮೇಲೆ ಪರಿಣಾಮ ಬೀರಬಹುದು. ಇದು ನ್ಯಾಯಾಂಗದ ಸ್ವಾತಂತ್ರ್ಯವನ್ನು ಕದಲಿಸುತ್ತದೆ ಎಂದು ತಿಳಿಸಿದ್ದಾರೆ.
ಕೇಂದ್ರ ಗೃಹಮಂತ್ರಿ ಅಮಿತ್ ಶಾ ಹೇಳಿದ್ದೇನು?
ಶುಕ್ರವಾರ ಕೇರಳದಲ್ಲಿ ಮಾತನಾಡಿದ್ದ ಅಮಿತ್ ಶಾ, "ಸುದರ್ಶನ್ ರೆಡ್ಡಿ ಅವರು ನಕ್ಸಲಿಸಂಗೆ ಸಹಾಯ ಮಾಡಿದವರು. ಅವರು ಸಾಲ್ವಾ ಜುಡಮ್ ತೀರ್ಪು ನೀಡಿದರು. ಸಾಲ್ವಾ ಜುಡಮ್ ತೀರ್ಪು ನೀಡದಿದ್ದರೆ, ನಕ್ಸಲ್ ಭಯೋತ್ಪಾದನೆ 2020ರ ವೇಳೆಗೆ ಕೊನೆಗೊಂಡಿರುತ್ತಿತ್ತು. ಅವರು ಸಾಲ್ವಾ ಜುಡಮ್ ತೀರ್ಪು ನೀಡಿದ ಸಿದ್ಧಾಂತದಿಂದ ಪ್ರೇರಿತರಾಗಿದ್ದವರು" ಎಂದು ಹೇಳಿದ್ದರು.
ಅಮಿತ್ ಶಾ ಆರೋಪಕ್ಕೆ ನ್ಯಾ.ಸುದರ್ಶನ್ ರೆಡ್ಡಿ ಪ್ರತಿಕ್ರಿಯೆ
ಅಮಿತ್ ಶಾ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ನ್ಯಾ.,ಸುದರ್ಶನ್ ರೆಡ್ಡಿ, ತೀರ್ಪಿನ ವಿಚಾರದಲ್ಲಿ ಗೃಹಸಚಿವರೊಂದಿಗೆ ವಾದದಲ್ಲಿ ಸೇರಲು ಬಯಸುವುದಿಲ್ಲ. ಆ ತೀರ್ಪು ತಮ್ಮದಲ್ಲ, ಸುಪ್ರೀಂಕೋರ್ಟ್ ತೀರ್ಪು ಅದು. ಅಮಿತ್ ಶಾ ಆ ತೀರ್ಪು ಅನ್ನು ಸಂಪೂರ್ಣ ಓದಿಲ್ಲ. ಓದಿದ್ದರೆ ಈ ರೀತಿಯ ಕಮೆಂಟ್ ಮಾಡುತ್ತಿರಲಿಲ್ಲ ಎಂದು ಹೇಳಿದ್ದರು.
ನ್ಯಾ. ಸುದರ್ಶನ್ ರೆಡ್ಡಿ, ನ್ಯಾ ಎಸ್.ಎಸ್. ನಿಜ್ಜಾರ್ ಅವರ ಸುಪ್ರೀಂಕೋರ್ಟ್ನ ದ್ವಿಸದಸ್ಯ ಪೀಠ, 2011ರ ಜುಲೈನಲ್ಲಿ ನಕ್ಸಲರ ವಿರುದ್ಧ ಹೋರಾಟದಲ್ಲಿ ಆದಿವಾಸಿ ಯುವಕರನ್ನು ವಿಶೇಷ ಪೊಲೀಸ್ ಅಧಿಕಾರಿಗಳಾಗಿ ಬಳಸುವುದು ಕಾನೂನುಬಾಹಿರ ಮತ್ತು ಸಂವಿಧಾನವಿರುದ್ಧ ಎಂದು ತೀರ್ಮಾನಿಸಿ ಸಾಲ್ವಾ ಜುಡಮ್ ಎಂಬ ಪಡೆಯನ್ನು ವಿಸರ್ಜಿಸುವಂತೆ ಆದೇಶಿಸಿತ್ತು.(ಏಜೆನ್ಸೀಸ್)