

Rahul Mamkootathil: ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಪಾಲಕ್ಕಾಡ್ ಶಾಸಕ ರಾಹುಲ್ ಮಾಮ್ಕೂಟತ್ತಿಲ್ ಅವರನ್ನು ಕೆಪಿಸಿಸಿ (ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ) 6 ತಿಂಗಳ ಕಾಲ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಅಮಾನತು ಮಾಡಿದೆ ಎಂದು ಸೋಮವಾರ (ಆಗಸ್ಟ್ 25) ವರದಿಯಾಗಿದೆ.
ಮಲಯಾಳಂ ನಟಿ ರಿನಿ ಆನ್ ಜಾರ್ಜ್ ಮತ್ತು ಲೇಖಕಿ ಹನಿ ಭಾಸ್ಕರನ್ ಸೇರಿದಂತೆ ಹಲವು ಮಹಿಳೆಯರು ರಾಹುಲ್ ವಿರುದ್ಧ ಅನುಚಿತ ಸಂದೇಶಗಳನ್ನು ಕಳುಹಿಸಿದ ಆರೋಪ ಮಾಡಿದ್ದಾರೆ. ಟ್ರಾನ್ಸ್ಜೆಂಡರ್ ಕಾರ್ಯಕರ್ತೆ ಅವಂತಿಕಾ ವಿಷ್ಣು ಕೂಡ ತಮಗೆ ಲೈಂಗಿಕವಾಗಿ ಪ್ರವೋಕ್ ಮಾಡುವ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಆರೋಪಕ್ಕೆ ಸಂಬಂಧಿಸಿದಂತೆ ಕಳೆದ ವಾರ ವಿವಾದ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ರಾಹುಲ್ ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಆಡಳಿತ ಪಕ್ಷ ಸಿಪಿಎಂ ರಾಹುಲ್ ರಾಜೀನಾಮೆಗೆ ಆಗ್ರಹಿಸಿತ್ತು.
ಸದ್ಯ ತಮ್ಮ ವಿರುದ್ಧ ಬಂದಿರುವ ಆರೋಪಗಳನ್ನು ನಿರಾಕರಿಸಿರುವ ರಾಹುಲ್, ಯಾವುದೇ ಆರೋಪ ಕಾನೂನಾತ್ಮಕವಾಗಿ ದೂರು ದಾಖಲಾದರೆ ಉತ್ತರಿಸುವುದಾಗಿ ಹೇಳಿದ್ದಾರೆ. ಈ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್, ವಿಪಕ್ಷ ನಾಯಕ ವಿ.ಡಿ.ಸತೀಶನ್ ಹಾಗೂ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ್ ಸಮಾಲೋಚನೆ ನಡೆಸಿದ್ದು, ಪಕ್ಷಕ್ಕಾಗುವ ಡ್ಯಾಮೇಜ್ ತಪ್ಪಿಸಲು 6 ತಿಂಗಳ ಕಾಲ ಅಮಾನತು ಮಾಡಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ರಾಹುಲ್ ಮಾಮ್ಕೂಟತ್ತಿಲ್ ವಿರುದ್ಧ ಆರೋಪವೇನು?
ಮೂರು ವರ್ಷಗಳ ಹಿಂದೆ ಕೇರಳದ ಯುವ ರಾಜಕಾರಣಿಯೊಬ್ಬರು ತನಗೆ ಅನುಚಿತ ಸಂದೇಶಗಳನ್ನು ಕಳುಹಿಸಿ ಹೋಟೆಲ್ ಕೋಣೆಗೆ ಆಹ್ವಾನಿಸಿದ್ದರು ಎಂದು ನಟಿ ಮತ್ತು ಮಾಜಿ ಪತ್ರಕರ್ತೆ ರಿನಿ ಆನ್ ಜಾರ್ಜ್ ಆರೋಪಿಸಿದ್ದರಿಂದ ವಿವಾದ ಶುರುವಾಯಿತು. ಆದರೆ ನಟಿ ನೇರವಾಗಿ ರಾಹುಲ್ ಹೆಸರನ್ನು ಉಲ್ಲೇಖಿಸಿರಲಿಲ್ಲ.
ಇದಾದ ಬಳಿಕ ಮತ್ತಷ್ಟು ಆರೋಪ ಕೇಳಿ ಬಂದಿದ್ದು, ಟ್ರಾನ್ಸ್ಜೆಂಡರ್ ಮಹಿಳೆ ಅವಂತಿಕಾ, ಮಮ್ಕೂಟತಿಲ್ ತನಗೆ ಲೈಂಗಿಕವಾಗಿ ಪ್ರಚೋದನೆ ಮಾಡುವಂತಹ ಅಶ್ಲೀಲ ಮೆಸೇಜ್ ಮಾಡಿದ್ದಾರೆ. ಅತ್ಯಾಚಾರದಂತ ಲೈಂಗಿಕ ಕ್ರಿಯೆಗೆ ತನ್ನ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದರು. ಮತ್ತೊಬ್ಬ ಮಹಿಳೆಗೆ ವಾಟ್ಸಾಪ್ ಚಾಟ್ ಮಾಡಿದ್ದಾರೆ ಎಂಬ ಚಾಟ್ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. (ಏಜೆನ್ಸೀಸ್)