

Amit Shah: ಜುಲೈ 21ರಂದಯ ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಕರ್ ಹಠಾತ್ ರಾಜೀನಾಮೆ ನೀಡಿದ್ದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ಸದ್ಯ ಒಂದು ತಿಂಗಳ ಬಳಿಕ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಈ ಬಗ್ಗೆ ಮೊದಲ ಬಾರಿಗೆ ಸೋಮವಾರ(ಆಗಸ್ಟ್ 25) ಪ್ರತಿಕ್ರಿಯಿಸಿದ್ದಾರೆ.
ದೆಹಲಿಯಲ್ಲಿ ಎಎನ್ಐ ಜೊತೆ ಮಾತನಾಡಿರುವ ಅಮಿತ್ ಶಾ, "ಧನ್ಕರ್ ಅವರು ಒಂದು ಸಾಂವಿಧಾನಿಕ ಹುದ್ದೆಯಲ್ಲಿದ್ದರು. ಮತ್ತು ಅಧಿಕಾರಾವಧಿಯಲ್ಲಿ ಸಂವಿಧಾನಕ್ಕೆ ಅನುಗುಣವಾಗಿ ಉತ್ತಮ ಕೆಲಸ ಮಾಡಿದ್ದಾರೆ. ತಮ್ಮ ವೈಯಕ್ತಿಕ ಆರೋಗ್ಯ ಸಮಸ್ಯೆಯಿಂದಾಗಿ ರಾಜೀನಾಮೆ ನೀಡಿದ್ದಾರೆ. ಇದನ್ನು ತುಂಬಾ ಎಳೆಯಬಾರದು. ಮತ್ತು ಏನನ್ನಾದರೂ ಹುಡುಕಲು ಪ್ರಯತ್ನಿಸಬಾರದು" ಎಂದು ಹೇಳಿದ್ದಾರೆ.
ಧನಕರ್ ರಾಜೀನಾಮೆ ಪಡೆದು ಅವರನ್ನು ಸಾರ್ವಜನಿಕವಾಗಿ ಕಾಣದಂತೆ ಮಾಡಿದ್ದಾರೆ ಎಂಬ ವಿಪಕ್ಷಗಳ ಆರೋಪವನ್ನು ತಳ್ಳಿ ಹಾಕಿರುವ ಅವರು, ಸತ್ಯ ಮತ್ತು ಸುಳ್ಳಿನ ಬಗ್ಗೆ ನಿಮ್ಮ ವ್ಯಾಖ್ಯಾನವು ವಿರೋಧ ಪಕ್ಷದವರು ಹೇಳುವುದನ್ನು ಆಧರಿಸಿದೆ ಎಂದು ತೋರುತ್ತದೆ. ಧನಕರ್ ರಾಜೀನಾಮೆ ಕೇವಲ ಆರೋಗ್ಯಕ್ಕೆ ಸಂಬಂಧಿಸಿದ ವೈಯಕ್ತಿಕ ನಿರ್ಧಾರವಾಗಿದೆ ಎಂದು ತಿಳಿಸಿದ್ದಾರೆ.
ಧನಕರ್ ಎಲ್ಲಿದ್ದಾರೆ ಎಂಬ ಬಗ್ಗೆ ವಿಪಕ್ಷ ನಾಯಕರ ಪ್ರಶ್ನೆ
ಕೇಂದ್ರ ಸರ್ಕಾರ ಜಗದೀಪ್ ಧನಕರ್ ಅವರನ್ನು ಗೃಹಬಂಧನದಲ್ಲಿರಿಸಿದೆ. ಉಪರಾಷ್ಟ್ರಪತಿಯೊಬ್ಬರು ರಾಜೀನಾಮೆ ನೀಡುವಾಗ ಮೌನ ವಹಿಸಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಹ ಈ ವಿಚಾರದಲ್ಲಿ ಮಾತನಾಡಿದ್ದಾರೆ. ಧನಕರ್ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಆಡಳಿತಾರೂಢ ಬಿಜೆಪಿ ದೇಶವನ್ನು ಮಧ್ಯಕಾಲೀನ ಕಾಲಕ್ಕೆ ಕೊಂಡೊಯ್ಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು.
ನಾವು ಮಧ್ಯಕಾಲೀನ ಕಾಲಕ್ಕೆ ಹಿಂತಿರುಗುತ್ತಿದ್ದೇವೆ, ಆಗ ರಾಜನು ಯಾರನ್ನಾದರೂ ತನ್ನ ಇಚ್ಛೆಯಂತೆ ತೆಗೆದುಹಾಕಬಹುದಿತ್ತು. ಚುನಾಯಿತ ವ್ಯಕ್ತಿ ಹೇಗಿರುತ್ತಾನೆ ಎಂಬ ಪರಿಕಲ್ಪನೆಯೇ ಇಲ್ಲ. ಅವನಿಗೆ ನಿಮ್ಮ ಮುಖ ಇಷ್ಟವಾಗುವುದಿಲ್ಲ, ಆದ್ದರಿಂದ ಅವನು ಇಡಿಗೆ ಪ್ರಕರಣ ದಾಖಲಿಸಲು ಹೇಳುತ್ತಾನೆ, ಮತ್ತು ನಂತರ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ವ್ಯಕ್ತಿಯನ್ನು 30 ದಿನಗಳಲ್ಲಿ ಪದಚ್ಯುತಗೊಳಿಸಲಾಗುತ್ತದೆ. ಅಲ್ಲದೆ, ನಾವು ಹೊಸ ಉಪಾಧ್ಯಕ್ಷರನ್ನು ಏಕೆ ಆಯ್ಕೆ ಮಾಡುತ್ತಿದ್ದೇವೆ ಎಂಬುದನ್ನು ಮರೆಯಬಾರದು. ನಿನ್ನೆಯಷ್ಟೇ, ನಾನು ಯಾರೊಂದಿಗಾದರೂ ಸಂಭಾಷಣೆ ನಡೆಸುತ್ತಿದ್ದೆ. ನಾನು ಹೇಳಿದೆ, ನಿಮಗೆ ತಿಳಿದಿದೆಯೇ, ಹಳೆಯ ಉಪರಾಷ್ಟ್ರಪತಿ ಎಲ್ಲಿಗೆ ಹೋಗಿದ್ದಾರೆ? ಎಲ್ಲಿದ್ದಾರೆ ಎಂದು ಕೇಳಿದ ಎಂದಿದ್ದರು.
ಸುಪ್ರೀಂಕೋರ್ಟ್ ಹಿರಿಯ ವಕೀಲ ಮತ್ತು ರಾಜ್ಯಸಭಾ ಸದಸ್ಯ, ಧನಕರ್ ಸಾರ್ವಜನಿಕವಾಗಿ ಕಾಣದಿರುವುದಕ್ಕೆ, ಮತ್ತು ಅವರು ಎಲ್ಲಿದ್ದಾರೆ ಎಂದು ತಿಳಿಯಲು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಬೇಕೇ ಎಂದು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್)