

ತುಮಕೂರು: ದರೈಸ್ತ್ರೀ ಕಲ್ಚರಲ್ ಟ್ರಸ್ಟ್ ವತಿಯಿಂದ ದರೈಸ್ತ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಬಾಲ ಭವನದಲ್ಲಿ ಮಾ.7ರಂದು ಮಧ್ಯಾಹ್ನ 3.30ಕ್ಕೆ ಏರ್ಪಡಿಸಲಾಗಿದೆ.
ಕವಿ ಕೆ.ಬಿ. ಸಿದ್ದಯ್ಯ ಅವರ ದರೈಸ್ತ್ರೀ ಪರಿಕಲ್ಪನೆ ಮತ್ತು ಅವರ ಸಾಂಸ್ಕೃತಿಕ ಆಶಯ ಮುಂದುವರೆಸಿಕೊಂಡು ಹೋಗುವ ಉದ್ದೇಶವನ್ನು ದರೈಸ್ತ್ರೀ ಕಲ್ಚರಲ್ ಟ್ರಸ್ಟ್ ಹೊಂದಿದೆ ಎಂದು ಇಂದು ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದರು.
ದಲಿತ ಚಳವಳಿ ಮತ್ತು ರೈತ ಚಳವಳಿಯನ್ನು ತಾತ್ವಿಕವಾಗಿ, ಸಂಘಟನಾತ್ಮಕವಾಗಿ, ಭಾವನಾತ್ಮಕವಾಗಿ ಬೆಸೆಯುವಲ್ಲಿ ತಾತ್ವಿಕ ಚಿಂತನೆಯ ಭಾಗವಾಗಿ ದೇಶದಲ್ಲೇ ಮೊದಲ ಬಾರಿಗೆ ದಲಿತ, ರೈತ, ಸ್ತ್ರೀ ಹೋರಾಟಗಾರರ ಹೆಸರಿನಲ್ಲಿ ಸಾಂಸ್ಕೃತಿಕ ಪ್ರಶಸ್ತಿಯನ್ನು 2005 ರಲ್ಲಿ ಸ್ಥಾಪಿಸಲಾಗಿತ್ತು. ಅಂದು ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರಿಗೆ ಪ್ರದಾನ ಮಾಡಲಾಗಿತ್ತು ಎಂದರು.
ದಲಿತ ರೈತ ಸ್ತ್ರೀ ಪ್ರಶಸ್ತಿಗೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಹಾಗೂ ಮಹಿಳಾ ಹೋರಾಟಗಾರ್ತಿ ಕೆ.ನೀಲಾ ಹಾಗೂ ಕೆ.ಬಿ.ಕಾವ್ಯ ಪ್ರಶಸ್ತಿಗೆ ವಿಲ್ಸನ್ ಕಟೀಲ್ ಅವರನ್ನು ಆಯ್ಕೆ ಮಾಡಿದ್ದು, ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದರು.
ದರೈಸ್ತ್ರೀ ಪ್ರಶಸ್ತಿಯನ್ನು 2ನೇ ಬಾರಿಗೆ, ಕೆ.ಬಿ.ಕಾವ್ಯ ಪ್ರಶಸ್ತಿಯನ್ನು ಇದೇ ಮೊದಲ ಬಾರಿಗೆ ಪ್ರದಾನ ಮಾಡಲಾಗುತ್ತಿದೆ. ಇನ್ನು ಮುಂದೆ ಪ್ರತಿ ವರ್ಷವೂ ದರೈಸ್ತ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿ ನಗದು ಬಹುಮಾನ, ಫಲಕ ಒಳಗೊಂಡಿರುತ್ತದೆ ಎಂದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ದರೈಸ್ತ್ರೀ ಟ್ರಸ್ಟ್ ಗೌರವಾಧ್ಯಕ್ಷೆ ಪಿ.ಗಂಗರಾಜಮ್ಮ, ದಲಿತ ಮುಖಂಡರಾದ ಕುಂದೂರು ತಿಮ್ಮಯ್ಯ, ರೈತ ಮುಖಂಡ ಎನ್.ಜಿ.ರಾಮಚಂದ್ರಯ್ಯ ಉಪಸ್ಥಿತರಿರುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ಎ.ರಾಮಚಂದ್ರಪ್ಪ, ಸದಸ್ಯರಾದ ಕೊಟ್ಟ ಶಂಕರ್, ಸಿಂಗದಹಳ್ಳಿ ರಾಜಕುಮಾರ್, ಕೆ.ಎಸ್.ರಾಮಚಂದ್ರಯ್ಯ, ಕುಂದೂರು ತಿಮ್ಮಯ್ಯ, ಗೋಪಿ ಇದ್ದರು.