

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಶನಿವಾರ ಪ್ರಕಟವಾಗಲಿದೆ. ಈ ಫಲಿತಾಂಶ ರಾಜಕೀಯ ದಿಕ್ಕುದೆಸೆ ಬದಲಿಸದೇ ಹೋದರೂ ಮೂರೂ ಪಕ್ಷಗಳ ಮುಂದಿನ ರಾಜಕೀಯ ನಡೆಗಳಿಗೆ ದಿಕ್ಸೂಚಿ ಆಗುವುದು ನಿಶ್ಚಿತವಾಗಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಯ ಚನ್ನಪಟ್ಟಣ, ಹಾವೇರಿ ಜಿಲ್ಲೆಯ ಶಿಗ್ಗಾವಿ ಮತ್ತು ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ನವೆಂಬರ್ 13ರಂದು ಮತದಾನ ನಡೆದಿತ್ತು. ಶನಿವಾರ ಬೆಳಗ್ಗೆ ಮತ ಎಣಿಕೆ ನಡೆಯಲಿದ್ದು, ಆಡಳಿತಾರೂಢ ಕಾಂಗ್ರೆಸ್, ಪ್ರಧಾನ ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ಪಾಲಿಗೆ ಮಹತ್ವದ್ದೆನಿಸಿದೆ. 2023ರ ವಿಧಾನಸಭೆ ಚುನಾವಣೆಯ ಫಲಿತಾಂಶ ಅವಲೋಕಿಸುವುದಾದರೆ ಸಂಡೂರಿನಲ್ಲಿ ಕಾಂಗ್ರೆಸ್ನಿಂದ ತುಕಾರಾಂ, ಶಿಗ್ಗಾವಿಯಲ್ಲಿ ಬಿಜೆಪಿಯಿಂದ ಬಸವರಾಜ ಬೊಮ್ಮಾಯಿ, ಚನ್ನಪಟ್ಟಣದಲ್ಲಿ ಜೆಡಿಎಸ್ನಿಂದ ಎಚ್.ಡಿ.ಕುಮಾರಸ್ವಾಮಿ ಗೆದ್ದಿದ್ದರು.
2024ರ ಲೋಕಸಭೆ ಚುನಾವಣೆಯಲ್ಲಿ ಈ ಮೂವರೂ ಗೆಲುವು ಸಾಧಿಸಿದ ಕಾರಣ ಇಲ್ಲಿ ಉಪ ಚುನಾವಣೆ ನಡೆದಿತ್ತು. ಈ ಬಾರಿ ಬಿಜೆಪಿ- ಜೆಡಿಎಸ್ ಜಂಟಿಯಾಗಿ ಹೋರಾಟ ನಡೆಸಿವೆ. ಕಾಂಗ್ರೆಸ್ ಈಗ ರಾಜ್ಯದಲ್ಲಿ ಆಡಳಿತಾರೂಢ ಸ್ಥಾನದಲ್ಲಿದ್ದು ಪ್ರತಿಪಕ್ಷದ ಜಂಟಿ ಹೋರಾಟಕ್ಕೆ ತಡೆಯೊಡ್ಡಲು ಶ್ರಮ ಹಾಕಿದೆ.
ನೂರೆಂಟು ಲೆಕ್ಕಾಚಾರ: ಚುನಾವಣೆ ಫಲಿತಾಂಶದ ಬಳಿಕ ಮೂರೂ ಪಕ್ಷದಲ್ಲಿ ಅವಲೋಕನ ಸಹಜ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಸೋತರೆ ಆಗಬಹುದಾದ ಬೆಳವಣಿಗೆ ಬೇರೆಯದೇ ಆಗಿರುತ್ತದೆ. ಅದೇ ಗೆಲುವು ಸಾಧಿಸಿದರೆ ಡಿ.ಕೆ. ಶಿವಕುಮಾರ್ ಪಾಲಿಗೆ ಅದು ದಿಗ್ವಿಜಯದ ಮುನ್ನುಡಿಯೂ ಹೌದು. ಮೂರಕ್ಕೆ ಮೂರೂ ಸ್ಥಾನ ಕಾಂಗ್ರೆಸ್ ಗೆಲುವು ಸಾಧಿಸಿದರೆ ಸಹಜವಾಗಿ ಅದರ ಕ್ರೆಡಿಟ್ ಸಿದ್ದರಾಮಯ್ಯಗೆ ಸೇರುತ್ತದೆ. ಅವರ ಕೈ ಇನ್ನಷ್ಟು ಬಲಗೊಂಡಂತಾಗುತ್ತದೆ.
ಪ್ರಮುಖ ಚರ್ಚಾ ವಿಷಯಗಳು: ಗ್ಯಾರಂಟಿ ಯೋಜನೆಗಳು ಮತ್ತು ಮುಡಾ ನಿವೇಶನ ಹಗರಣ, ವಾಲ್ಮೀಕಿ ನಿಗಮದಲ್ಲಿನ ಅವ್ಯವಹಾರ, ವಕ್ಪ್ ವಿವಾದ ಈ ಬಾರಿ ಉಪ ಚುನಾವಣೆಯಲ್ಲಿ ಪ್ರಮುಖವಾಗಿ ಚರ್ಚೆಯಾದ ಅಂಶಗಳು. ಇದನ್ನು ಹೊರತಾಗಿ ಸ್ಥಳೀಯ ಸಂಗತಿಗಳು, ಅಭ್ಯರ್ಥಿಗಳ ಪ್ರಾಬಲ್ಯ ಇನ್ನೊಂದು ಮಗ್ಗುಲು. ಆದರೆ ವಿವಾದ, ಅಕ್ರಮಗಳನ್ನು ಜನ ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆಂಬುದು ಅರಿವಿಗೆ ಬರಲಿದೆ. ಒಂದರ್ಥದಲ್ಲಿ ಸರ್ಕಾರದ ಕಾರ್ಯವೈಖರಿ ಒರೆಗೆ ಹಚ್ಚುವ ಪರೀಕ್ಷೆಯೂ ಹೌದು.
ನಾಯಕರ ಸಾಮರ್ಥ್ಯ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾರಣಕ್ಕೆ ಡಿ.ಕೆ ಸಹೋದರರು, ತಮ್ಮ ಮಗನನ್ನು ಗೆಲ್ಲಿಸಿಕೊಂಡು ಬರಲು ಎಚ್.ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಸಾಮರ್ಥ್ಯ ಈ ಚುನಾವಣೆಯಲ್ಲಿ ಅನಾವರಣವಾಗಲಿದೆ. ಬಳ್ಳಾರಿ ಜಿಲ್ಲೆಯಲ್ಲಿ ಪುನಃ ಅಧಿಪತ್ಯ ಸಾಧಿಸಲು ಹೊರಟ ಶಾಸಕ ಜನಾರ್ದನ ರೆಡ್ಡಿಯವರು ಸಂಡೂರಿನಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಬೆವರು ಹರಿಸಿದ್ದರು.
5.83 ಲಕ್ಷ ಮಂದಿ: ಮೂರು ಕ್ಷೇತ್ರದಿಂದ ಒಟ್ಟು 5.83 ಲಕ್ಷ ಮಂದಿ ಮತ ಚಲಾಯಿಸಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಿದ್ದಾರೆ.
ಬಿಜೆಪಿ ನಿರೀಕ್ಷೆ: ಹೆಚ್ಚುವರಿ ಸ್ಥಾನ ಗೆದ್ದರೆ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಜನಾಭಿಪ್ರಾಯ ರೂಪಿಸಲು ಹೊರಟ ಪ್ರಯತ್ನದಲ್ಲಿ ಫಲ ಸಿಕ್ಕಂತಾಗುತ್ತದೆ. ಜತೆಗೆ ಮೈತ್ರಿಯೂ ತಕ್ಕಮಟ್ಟಿಗೆ ಫಲಕೊಟ್ಟಂತೆ. ಮುಂದಿನ ಹೋರಾಟಕ್ಕೂ ಬಲ ಬರಲಿದೆ.
ಜೆಡಿಎಸ್ ಅಪೇಕ್ಷೆ: ಎರಡು ಚುನಾವಣೆ ಸೋತಿರುವ ನಿಖಿಲ್ಗೆ ಈ ಗೆಲುವು ಅತೀ ಮುಖ್ಯ. ಪಕ್ಷದ ಭವಿಷ್ಯಕ್ಕೊಬ್ಬ ಅಧಿಪತಿ ಸಿಕ್ಕಂತೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಸೋಲಿಸುವ ಡಿ.ಕೆ ಸಹೋದರರ ಲೆಕ್ಕಾಚಾರ ತಲೆಕೆಳಗುಮಾಡಿದಂತೆ.
ಕೈ ಮಹತ್ವಾಕಾಂಕ್ಷೆ: ಉಪ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷಕ್ಕೆ ಹೆಚ್ಚು ಅನುಕೂಲ ಎಂಬ ನಂಬಿಕೆ ಕಾಂಗ್ರೆಸ್ನದ್ದು. ಪ್ರತಿಪಕ್ಷಗಳ ಸರಣಿ ಆರೋಪದ ನಡುವೆಯೂ ಒಂದಕ್ಕಿಂತ ಹೆಚ್ಚು ಸ್ಥಾನ ಗೆದ್ದರೆ ಅದು ಕೈ ಪಾಳಯಕ್ಕೆ ಆತ್ಮವಿಶ್ವಾಸ ಹೆಚ್ಚಿಸುವ ಟಾನಿಕ್ ಆಗಲಿದೆ.
ಚನ್ನಪಟ್ಟಣ: ನಿಖಿಲ್ ಕುಮಾರಸ್ವಾಮಿ (ಎನ್ಡಿಎ) ವರ್ಸಸ್ ಸಿ.ಪಿ.ಯೋಗೇಶ್ವರ್ (ಕಾಂಗ್ರೆಸ್)
ಶಿಗ್ಗಾವಿ: ಭರತ್ ಬೊಮ್ಮಾಯಿ (ಎನ್ಡಿಎ) ವರ್ಸಸ್ ಯಾಸಿರ್ ಅಹ್ಮದ್ ಪಠಾಣ್ (ಕಾಂಗ್ರೆಸ್)
ಸಂಡೂರು: ಬಂಗಾರು ಹನುಮಂತು (ಎನ್ಡಿಎ) ವರ್ಸಸ್ ಅನ್ನಪೂರ್ಣ ತುಕಾರಾಂ (ಕಾಂಗ್ರೆಸ್)