ಜ್ಞಾನಭಾರತಿ ಆವರಣದಲ್ಲಿ ವಾಹನಸಂಚಾರ ರ್ನಿಬಂಧಿಸಿ: ಬಸವರಾಜ ಹೊರಟ್ಟಿ ಮನವಿ

basavaraj horatti
Published on

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಸಾರ್ವಜನಿಕರ ವಾಹನ ಸಂಚಾರವನ್ನು ಕಟ್ಟುನಿಟ್ಟಾಗಿ ರ್ನಿಬಂಧಿಸಿ, ಅದಕ್ಕೆ ಪರ್ಯಾಯ ಮಾರ್ಗ ರೂಪಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ವಿಧಾನಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ ಮನವಿ ಮಾಡಿದ್ದಾರೆ.

ಗೃಹಸಚಿವ ಡಾ.ಜಿ.ಪರಮೇಶ್ವರ್​, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಬೆಂಗಳೂರು ನಗರ ಪೊಲೀಸ್​ ಆಯುಕ್ತ ಬಿ. ದಯಾನಂದ್​ ಅವರಿಗೆ ಪತ್ರ ಬರೆದಿರುವ ಹೊರಟ್ಟಿ, ಜ್ಞಾನಭಾರತಿ ಆವರಣದಲ್ಲಿ ಸಾರ್ವಜನಿಕ ವಾಹನಗಳ ಓಡಾಟದ ಒತ್ತಡದಿಂದಾಗಿ ಪದೇಪದೆ ಅಪಘಾತಗಳು ಸಂಭವಿಸುತ್ತಿವೆ. ಇದರಿಂದ ಶಬ್ದಮಾಲಿನ್ಯ, ಪರಿಸರ ಮಾಲಿನ್ಯ ಉಂಟಾಗುತ್ತಿದ್ದು, ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. 2022ರ ಅಕ್ಟೋಬರ್​ನಲ್ಲಿ ಈ ಆವರಣದ ಮುಖ್ಯರಸ್ತೆಯಲ್ಲಿ ಎಂ.ಎಸ್ಸಿ. ವಿದ್ಯಾರ್ಥಿನಿ ಮೇಲೆ ವಾಹನ ಹರಿದು ಮೃತಪಟ್ಟಿದ್ದಳು. ಸದರಿ ಪ್ರಕರಣವು ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗಿತ್ತು ಎಂದು ತಿಳಿಸಿದ್ದಾರೆ.

ಈ ಘಟನೆಯ ಸಂದರ್ಭದಲ್ಲಿ 2022 ಅ.14ರಂದು ಉನ್ನತ ಪೊಲೀಸ್​ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಆವರಣದ ಮುಖ್ಯರಸ್ತೆಯ ಎರಡೂ ಬದಿಗಳಲ್ಲಿ ಕಾಂಪೌಂಡ್​ ಹಾಗೂ ಸೂಕ್ತ ಸ್ಥಳಗಳಲ್ಲಿ ಅಂಡರ್​ಪಾಸ್​ ಮತ್ತು ಪಾದಚಾರಿಗಳ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಸಲಹೆ ನೀಡಲಾಗಿತ್ತು. ಆದರೆ ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net