370ನೇ ವಿಧಿ ಮರುಸ್ಥಾಪನೆ ಯಾವ ಶಕ್ತಿಗೂ ಅಸಾಧ್ಯ ಮೋದಿ ಗುಡುಗು

Pm Modi
Published on

ಧುಲೆ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ 370ನೇ ವಿಧಿಯನ್ನು ಮರಳಿ ಸ್ಥಾಪಿಸಲು ಜಗತ್ತಿನ ಯಾವ ಶಕ್ತಿಗೂ ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಿಂದ ಸಂವಿಧಾನವನ್ನು ತೆಗೆದುಹಾಕುವುದು ಕಾಂಗ್ರೆಸ್ ನೇತೃತ್ವದ ಐಎನ್​ಡಿಐಎ ಕೂಟದ ಬಯಕೆಯಾಗಿದೆ ಎಂದು ಮೋದಿ ಆರೋಪಿಸಿದ್ದಾರೆ.

ನವೆಂಬರ್ 20ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಸಂಬಂಧ ತಮ್ಮ ಮೊದಲ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಒಂದು ಜಾತಿ ವಿರುದ್ಧ ಇನ್ನೊಂದನ್ನು ಕಾಂಗ್ರೆಸ್ ಎತ್ತಿ ಕಟ್ಟುತ್ತಿದೆ ಎಂದೂ ಆರೋಪಿಸಿ, ಒಗ್ಗಟ್ಟಿನಿಂದ ಇರುವಂತೆ ಜನರಿಗೆ ಕರೆ ನೀಡಿದರು. ‘ಏಕ್ ಹೈ, ತೋ ಸೇಫ್ ಹೈ’ (ಒಗ್ಗಟ್ಟಿದ್ದರೆ ಸುರಕ್ಷಿತ ವಾಗಿರುತ್ತೇವೆ) ಎಂದು ಹೇಳಿದರು. ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ‘ಪಾಕಿಸ್ತಾನ ಅಜೆಂಡಾ’ವನ್ನು ಪ್ರೋತ್ಸಾಹಿಸಬಾರದು ಹಾಗೂ ಪ್ರತ್ಯೇಕತಾವಾದಿಗಳ ಭಾಷೆಯನ್ನು ಆಡಬಾರದು ಎಂದು ಮೋದಿ ಹೇಳಿದರು. ಎಸ್​ಸಿ-ಎಸ್​ಟಿ ಮತ್ತು ಒಬಿಸಿಗಳು ಒಗ್ಗಟ್ಟಾದರೆ ಕಾಂಗ್ರೆಸ್ ರಾಜಕೀಯ ಮುಗಿದೇ ಹೋಗುತ್ತದೆ ಎಂದು ಬಿಜೆಪಿಯ ತಾರಾ ಪ್ರಚಾರಕರಾದ ಪ್ರಧಾನಿ ಹೇಳಿದರು.

ಮಹಾಯುತಿಯಿಂದ ಮಾತ್ರ ಉತ್ತಮ ಆಡಳಿತ ಸಾಧ್ಯ. ಏಕೆಂದರೆ ಮಹಾ ವಿಕಾಸ ಅಘಾಡಿ ಬ್ರೇಕೂ ಇರದ, ಚಕ್ರವೂ ಇರದ ಗಾಡಿ, ಅಲ್ಲಿ ಡ್ರೖೆವರ್ ಸೀಟಿಗಾಗಿ ಕಾದಾಟ ನಡೆಯುತ್ತಿರುವುದರಿಂದ ಬೇರೆ ಬೇರೆ ಥರದ ಹಾರ್ನ್ ಕೇಳಿಸುತ್ತಿದೆ ಎಂದೂ ಮೋದಿ ಕಾಂಗ್ರೆಸ್ ಮತ್ತದರ ಮಿತ್ರಪಕ್ಷಗಳನ್ನು ಟೀಕಿಸಿದರು.

Modi Advani

ಸಾವರ್ಕರ್ ಅವರನ್ನು ರಾಹುಲ್ ಮೆಚ್ಚಲಿ: ಹಿಂದುತ್ವ ಪ್ರತಿಪಾದಕ ವಿ.ಡಿ. ಸಾವರ್ಕರ್ ಮತ್ತು ಶಿವಸೇನೆ ಸಂಸ್ಥಾಪಕ ಬಾಳ ಠಾಕ್ರೆ ಅವರನ್ನು ಮೆಚ್ಚಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 15 ನಿಮಿಷ ಮಾತಾಡುವಂತೆ ಅದರ ಮಿತ್ರ ಪಕ್ಷಗಳು ಮಾಡಲಿ ಎಂದು ನಾಸಿಕ್ ಜಿಲ್ಲೆಯಲ್ಲಿ ದಿನದ ಎರಡನೇ ರ್ಯಾಲಿಯಲ್ಲಿ ಮೋದಿ ಸವಾಲು ಹಾಕಿದರು. ದೇಶಕ್ಕೆ ಸಾವರ್ಕರ್ ಮತ್ತು ಠಾಕ್ರೆ ಕೊಡುಗೆ ಅಮೋಘ ಎಂದು ಅವರು ಹೇಳಿದರು. ಅಧಿಕಾರಕ್ಕಾಗಿ ಇತರ ಹಿಂದುಳಿದ ವರ್ಗಗಳನ್ನು ದುರ್ಬಲಗೊಳಿಸಲು ಕಾಂಗ್ರೆಸ್ ಯತ್ನಿಸುತ್ತಿದೆ. ತನ್ನ ಅಸ್ತಿತ್ವಕ್ಕಾಗಿ ಅನ್ಯಪಕ್ಷಗಳನ್ನು ಅವಲಂಬಿಸಿರುವ ಕಾಂಗ್ರೆಸ್ ಒಂದು ‘ಪರಾವಲಂಬಿ ಜೀವಿ’ ಎಂದು ಛೇಡಿಸಿದರು. 20ರ ಚುನಾವಣೆ ಮಹಾರಾಷ್ಟ್ರದ ಸ್ವಾಭಿಮಾನ ಮತ್ತು ಹೆಮ್ಮೆಗಾಗಿ ನಡೆಯುವ ಹೋರಾಟವಾಗಿದೆ ಎಂದರು. ‘ನಮಗೆ ಮರಾಠಿ ಇತಿಹಾಸವು ಒಂದು ನಂಬಿಕೆಯ ಕೇಂದ್ರವಾಗಿದೆ. ಸಾವರ್ಕರ್ ನಮಗೆ ಸ್ಪೂರ್ತಿಯ ಮೂಲವಾಗಿದ್ದಾರೆ’ ಎಂದರು.

ರಾಹುಲ್ ಗಾಂಧಿಯ ನಾಲ್ಕನೇ ಪೀಳಿಗೆಗೂ ಆಗದು: 370ನೇ ವಿಧಿಯನ್ನು ಮರಳಿ ಸ್ಥಾಪಿಸುವುದು ರಾಹುಲ್ ಗಾಂಧಿ ಬಿಡಿ, ಅವರ ನಾಲ್ಕನೇ ಪೀಳಿಗೆಯವರಿಗೂ ಸಾಧ್ಯವಾಗದ ಮಾತು ಎಂದು ಕೇಂದ್ರ ಗೖಹ ಸಚಿವ ಅಮಿತ್ ಷಾ, ಶುಕ್ರವಾರ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದ ಮಹಾಯುತಿ ಮೈತ್ರಿ ಕೂಟದ ಚುನಾವಣಾ ರ್ಯಾಲಿಯಲ್ಲಿ ಹೇಳಿದರು. 2019ರ ಆಗಸ್ಟ್ 5ರಂದು 370ನೇ ವಿಧಿಯನ್ನು ರದ್ದುಗೊಳಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net