

ತಿ.ನರಸೀಪುರ: ಯಾವುದೇ ಸಮುದಾಯದವರು ತಮ್ಮ-ತಮ್ಮ ಆಚಾರ, ವಿಚಾರ, ಪದ್ಧತಿಗಳನ್ನು ಆಚರಣೆ ಮಾಡುವ ಜತೆಗೆ ಅನ್ಯರು ಆಚರಣೆ ಮಾಡುವ ಪದ್ಧತಿಗಳನ್ನು ಗೌರವಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ತಹಸೀಲ್ದಾರ್ ಟಿ.ಜೆ.ಸುರೇಶ್ ಆಚಾರ್ ಹೇಳಿದರು.
ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗು ವಿಶ್ವ ಕರ್ಮ ಕ್ಷೇಮಾಭಿವೃದ್ಧಿ ಸಂಘಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಪಟ್ಟಣದ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಗವಂತನಿಗೆ ಮೂರ್ತಿ ರೂಪ ಕೊಡುವ ಮುಖಾಂತರ ಮೂಲ ಪುರುಷ ವಿಶ್ವ ಕರ್ಮರು ಬಹಳಷ್ಟು ದೇವಸ್ಥಾನಗಳನ್ನು ನಿರ್ಮಿಸಿದ್ದಾರೆಂದು ನಾವು ಪುರಾಣದಿಂದ ಓದಿ ತಿಳಿದಿದ್ದೇವೆ. ಇಂತಹ ಮಹತ್ತರ ಕೊಡುಗೆಗಳನ್ನು ನಮ್ಮ ಸಮಾಜ ನೀಡಿದೆ ಎಂದರು.
ನಿವೃತ್ತ ಶಿಕ್ಷಕ ಹ್ಯಾಕನೂರು ಕುಮಾರಸ್ವಾಮಿ ಮಾತನಾಡಿ, ವಿಶ್ವಕರ್ಮರು ಪ್ರಾತಃಸ್ಮರಣೀಯರಾಗಿದ್ದು, ಅವರಿಂದಾಗಿ ವಿಶ್ವದಲ್ಲಿ ಕಲೆ ಮತ್ತು ವಾಸ್ತುಶಿಲ್ಪ ಆರಂಭಗೊಂಡಿದೆ. ಪುರಾಣಗಳಲ್ಲಿ ಉಲ್ಲೇಖಿಸಿದಂತೆ ಪ್ರಸಿದ್ಧ ಕ್ಷೇತ್ರಗಳು, ವಾಸ್ತುಶಿಲ್ಪ ಕಲೆಗಳು, ನಮ್ಮ ವಿಶ್ವಕರ್ಮರಿಂದ ರಚಿತವಾಗಿದ್ದು, ಸುಪ್ರಸಿದ್ಧ ದ್ವಾರಕ ನಗರವು ನಮ್ಮ ಸೃಷ್ಟಿಗಳಲ್ಲೊಂದಾಗಿದ್ದು, ಕಲೆ ಮತ್ತು ವಾಸ್ತು ಶಿಲ್ಪಕ್ಕೆ ನಾವೇ ಮೂಲ ಪುರುಷರಾಗಿದ್ದೇವೆ. ಸಮಾಜದ ಬಾಂಧವರು ಕಲೆಗೆ ಹೆಸರುವಾಸಿಯಾಗಿದ್ದು, ಸಮಾಜದವರ ಕೆಲಸದ ನೈಪುಣ್ಯತೆಯಿಂದ ರೂಪುಗೊಂಡ ಅತ್ಯುತ್ತಮ ಶಿಲ್ಪಕಲೆಗಳು ದೇಶದ ಆಸ್ತಿಯಾಗಿದೆ ಎಂದರು.
ಗಮನ ಸೆಳೆದ ಮೆರವಣಿಗೆ…!
ವಿಶ್ವ ಕರ್ಮರ ಭಾವಚಿತ್ರವನ್ನು ಅಲಂಕೃತ ವಾಹನದ ಮೇಲಿರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಸಮಾಜದ ಮುಖಂಡರು, ಮಹಿಳೆಯರು ಮೆರವಣಿಗೆಯಲ್ಲಿ ಸಾಗಿದರು.
ವಿವಿಧ ಗ್ರಾಮಗಳಿಂದ ಬಂದಿದ್ದ ಸ್ಥಬ್ಧ ಚಿತ್ರಗಳು ನೋಡುಗರ ಗಮನ ಸೆಳೆದವು. ಡೋಲು ಕುಣಿತದ ಮೂಲಕ ನೂರಾರು ಜನರು ಸಾಗಿದರು. ಕಾರ್ಯಕ್ರಮದಲ್ಲಿ ವಿಶ್ವ ಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಸಿದ್ದಪ್ಪಾಜಿ, ಗೌರವಾಧ್ಯಕ್ಷ ಎ.ಎನ್.ಸ್ವಾಮಿ, ಕಾರ್ಯಾಧ್ಯಕ್ಷ ಪಿ.ಪ್ರಭಾಕರ್, ಕಾರ್ಯದರ್ಶಿ ಎಸ್.ಮಹೇಶ್‌ಕುಮಾರ್, ಬನ್ನೂರು ಪುರಸಭೆ ಮುಖ್ಯಾಧಿಕಾರಿ ಆರ್.ಹೇಮಂತ್ ರಾಜು, ತಾ.ಪಂ. ಇಒ ಪಿ.ಎಸ್.ಅನಂತರಾಜು, ಬನ್ನೂರು ಪುರಸಭೆ ಉಪಾಧ್ಯಕ್ಷೆ ನಾಗರತ್ನ ಪ್ರಭಾಕರ್, ಗ್ಯಾರೇಜ್ ಸೋಮ, ತಾಲೂಕು ನಾಯಕರ ಸಂಘದ ನಿಕಟಪೂರ್ವ ಅಧ್ಯಕ್ಷ ಚಿಕ್ಕಯ್ಯ, ಬಾಬು ಜಗಜೀವನರಾಂ ಸಂಘದ ಅಧ್ಯಕ್ಷ ಪುಟ್ಟಯ್ಯ, ಮನ್ಸೂರ್ ಆಲಿ, ಅಕ್ಬರ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಶಾಂತ, ಪಶು ವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಲಿಂಗರಾಜು, ಬಿಸಿಎಂ ಇಲಾಖೆ ಅಧಿಕಾರಿ ರಾಜಣ್ಣ, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ಬಸವರಾಜು, ಕೆಬ್ಬೇಹುಂಡಿ ಶಿವಕುಮಾರ್ ಇತರರು ಇದ್ದರು.