

ರಿಪ್ಪನ್‌ಪೇಟೆ: ಮನೆಯಲ್ಲಿ ಸಂಸ್ಕಾರಯುತ ವಾತಾವರಣ ರೂಪುಗೊಳ್ಳುವಲ್ಲಿ ಮಹಿಳೆಯರ ಪಾತ್ರ ಅಪಾರ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕೋಣಂದೂರಿನ ಶ್ರೀಶೈಲ ಸೂರ್ಯ ಸಿಂಹಾಸನ ಶಾಖಾ ಶ್ರೀ ಶಿವಲಿಂಗೇಶ್ವರ ಬೃಹನ್ಮಠದಲ್ಲಿ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆ ಮತ್ತು 1008 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮಹಿಳೆಯರ ಸಹನೆಯನ್ನು ಸರ್ವರೂ ಗೌರವಿಸಬೇಕು ಎಂದು ತಿಳಿಸಿದರು.
ಮನೆಯನ್ನು ಸ್ವಚ್ಛ, ಪವಿತ್ರ ಹಾಗೂ ಅಚ್ಚುಕಟ್ಟಾಗಿ ಇರಿಸುವಲ್ಲಿ ಮಹಿಳೆ ಜವಾಬ್ದಾರಿ ಹೆಚ್ಚಿರುತ್ತದೆ. ಮನೆಯ ಎಲ್ಲ ಸದಸ್ಯರ ಒಗ್ಗಟ್ಟು ಕಾಪಾಡುವುದರಲ್ಲಿ, ಜನಿಸಿದ ಮಕ್ಕಳ ಪಾಲನೆ, ಪೋಷಣೆ ಮಾಡಿ ಬೆಳೆಸುವಲ್ಲಿ ತಾಯಿ ಪಡುವ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇಂತಹ ಮಹಿಳೆಯ ಸಹನೆ ಗೌರವಿಸುವುದರ ಪ್ರತೀಕವೇ ಉಡಿ ತುಂಬುವ ಕಾರ್ಯಕ್ರಮ ಎಂದರು.
ಪಂಚವೇದಗಳಲ್ಲಿ ಪ್ರಸಿದ್ಧ ಪಂಚವರ್ಣವನ್ನು ಆಶೀರ್ವಾದ ರೂಪದಲ್ಲಿ ಪಡೆದು ಪಂಚವರ್ಣದ ಐದು ಮುತ್ತ್ತುಗಳನ್ನು ಧರಿಸಿ, ಮುತ್ತೈದೆಯಾಗಿ ಪೀಠ ಪರಂಪರೆಯನ್ನು ಹೊತ್ತು ಗೌರವಿಸುವ ಕಾರ್ಯವನ್ನು ಕೂಡ ಮಹಿಳೆಯರು ಮಾಡುತ್ತಾರೆ. ಆದ್ದರಿಂದ ಸಮಾಜದಲ್ಲಿ ಮಹಿಳೆಗೆ ಸದಾಕಾಲ ಗೌರವಾಧಾರಗಳು ಸಿಗಬೇಕು ಎಂದು ಆಶಿಸಿದರು.
ಮಹಿಳೆಯರು ಗೌರವಯುತ ಜೀವನ ನಡೆಸುವ ಸ್ಥಳಗಳಲ್ಲಿ ದೇವಾನುದೇವತೆಗಳು ಪೂಜೆಗೊಳ್ಳುತ್ತಾರೆ. ಸಂತೃಪ್ತಿಯಿಂದ ಕೃಪೆ ನೀಡುತ್ತಾರೆ. ಮಹಿಳೆಯರು ಕಣ್ಣೀರು ಹಾಕುವಂತೆ ಮಾಡಬಾರದು. ಮನೆಯೇ ಮೊದಲ ಪಾಠಶಾಲೆ, ಜನನಿ ಮೊದಲ ಗುರು ಆಗಿರುವಂತೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಮಹಿಳೆಯರು ಗುರು ಕೂಡ ಆಗುತ್ತಾರೆ. ಶ್ರೀ ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ಶ್ರೀಶೈಲ ಜಗದ್ಗುರು
ಉಜ್ಜಯಿನಿ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ನಿವೃತ್ತ ಪ್ರಾಚಾರ್ಯೆ ಕಿರಣ ದೇಸಾಯಿ, ವಕೀಲೆ ಶೋಭಾ ಅವರು ಸನಾತನ ಸಂಸ್ಕೃತಿಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಉಪನ್ಯಾಸ ನೀಡಿದರು. ಶ್ರೀ ಮಠದಿಂದ ಪಾರ್ವತಮ್ಮ ಅವರಿಗೆ ನವಧಾನ್ಯಗಳಿಂದ ತುಲಾಭಾರ ಮಾಡಿ ಮಾತೃವಾತ್ಸಲ್ಯ ಸೇವಾ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕೋಣಂದೂರು ಬೃಹ್ಮಠದ ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ, ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ನಂದಿಪುರದ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ಬೀರೂರಿನ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕ್ಯಾಸನೂರು ಶ್ರೀ ಗುರುಬಸವ ಪಂಡಿತಾರಾಧ್ಯ ಸ್ವಾಮೀಜಿ, ನಂಜೇಶ್ವರಮಠದ ಶ್ರೀ ಗುರುಮಹೇಶ್ವರ ಸ್ವಾಮೀಜಿ, ಅಕ್ಕಿಆಲೂರು ಮಠದ ಶ್ರೀ ಶಿವಬಸವ ಸ್ವಾಮೀಜಿ, ಅಂಕುಶ ಮಠದ ಶ್ರೀ ವಾಸುದೇವ ಶಿವಾಚಾರ್ಯ ಸ್ವಾಮೀಜಿ, ಶ್ರೀ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ, ಮುಖಂಡರಾದ ಹಾಲಸ್ವಾಮಿ ಗೌಡ, ಕೆ.ಆರ್.ಪ್ರಕಾಶ್, ಪ್ರಸಾದ್, ಲೀಲಾ ಶಂಕರ್, ಎನ್.ವರ್ತೇಶ, ಶಾಂತಾನಂದ್, ದೀಪ್ತಿ ಇತರರಿದ್ದರು.
ಇದನ್ನೂ ಓದಿ : ಹಳ್ಳಿ ಹಳ್ಳಿಯಲ್ಲೂ ಕನ್ನಡ ಜಾಗೃತಿ