ಮತ್ತೆ ಮೀಸಲು ಕದನ; ಡಿ.9ಕ್ಕೆ ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ನಿರ್ಧಾರ

Pamchamasali Reservation
Published on

ಬೆಂಗಳೂರು: ಪ್ರತ್ಯೇಕ 2ಎ ಮೀಸಲಾತಿ ಬೇಡಿಕೆ ವಿಚಾರವಾಗಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿದ್ದ ಸಭೆ ವಿಫಲಗೊಂಡ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಸೆಡ್ಡು ಹೊಡೆದಿರುವ ಲಿಂಗಾಯತ ಪಂಚಮಸಾಲಿ ಸಮುದಾಯ ಡಿ.9ಕ್ಕೆ ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದೆ.

ಮೀಸಲಾತಿ ಬೇಡಿಕೆ ವಿಚಾರವಾಗಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಸಿಎಂ ಏನನ್ನೂ ಹೇಳಲಿಲ್ಲ. ನಿರ್ದಿಷ್ಟ ಕಾಲಮಿತಿಯೊಳಗೆ ಕ್ರಮಕೈಗೊಳ್ಳುವ ಭರವಸೆ ನೀಡಲಿಲ್ಲವೆಂದು ಅಸಮಾಧಾನ ವ್ಯಕ್ತವಾಗಿದೆ. ಮುಂದಿನ ಕ್ರಮವಾಗಿ ಕೂಡಲಸಂಗಮ ಪಂಚಮಸಾಲಿ ಪೀಠಾಧಿಪತಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಮತ್ತೊಮ್ಮೆ ಸಭೆ ಸೇರಿ ಹೋರಾಟ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ. ‘ನಮ್ಮ ಬೇಡಿಕೆಗೆ ಸಿಎಂ ಕಾಲಾವಕಾಶ ನೀಡಿಲ್ಲ. ಯಾವುದೇ ಸಕಾರಾತ್ಮಕವಾದ ಉತ್ತರವನ್ನೂ ಕೊಟ್ಟಿಲ್ಲ. ಇದರಿಂದಾಗಿ ಹೋರಾಟ ಮುಂದುವರಿಸುವುದು ಅನಿವಾರ್ಯವಾಗಿದೆ. ಚಳಿಗಾಲದ ಅಧಿವೇಶನಕ್ಕೆ ಮೊದಲೇ ನಮ್ಮ ಬೇಡಿಕೆ ಈಡೇರದಿದ್ದರೆ ಡಿ.9ರಂದು ಟ್ರಾ್ಯಕ್ಟರ್ ರ‍್ಯಾಲಿ ಮೂಲಕ ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುತ್ತೇವೆ’ಎಂದು ಶ್ರೀಗಳು ಎಚ್ಚರಿಸಿದರು.

ಶ್ರೀಗಳಿಗೆ ಬೆಂಬಲ: ಕಾಂಗ್ರೆಸ್ ಸರ್ಕಾರಕ್ಕೆ ಒಂದೂವರೆ ವರ್ಷ ಕಾಲಾವಕಾಶ ನೀಡಲಾಗಿದೆ. ಹಿಂದಿನ ಸರ್ಕಾರದ 2ಡಿ ಮೀಸಲಾತಿಗೆ ಕಾನೂನು ಅಡಚಣೆಯಿದೆ ಎಂದಾದರೆ 2ಎಗೆ ಸೇರಿಸುವ ಬಗ್ಗೆಯೂ ಸಿಎಂ ಸ್ಪಷ್ಟವಾಗಿ ಖಾತರಿಪಡಿಸಿಲ್ಲ, ಮುಂದಿನ ಸಭೆ ಬಗ್ಗೆ ಖಚಿತಪಡಿಸಿಲ್ಲ. ಸರ್ಕಾರದ ಮೇಲೆ ಒತ್ತಡ ಹೇರದೆ ವಿಧಿಯಿಲ್ಲ ಎಂದು ಸಮುದಾಯದ ಮುಖಂಡರು, ವಕೀಲರು ಒಮ್ಮತದ ನಿಲುವು ತಳೆದು, ಸ್ವಾಮೀಜಿ ಸೂಚನೆಯಂತೆ ಮುಂದಿನ ಹೆಜ್ಜೆ ಇಡುವುದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

ವಿಫಲವಾದ ಮಾತುಕತೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಕ್ಷಮ ಒಂದೂವರೆ ತಾಸು ನಡೆದ ಸಭೆಯಲ್ಲಿ ಯಾವುದೇ ಸ್ಪಷ್ಟ ನಿಲುವು ಹೊರಬೀಳಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದೂವರೆ ವರ್ಷದ ಬಳಿಕ ಲಿಂಗಾಯತ ಪಂಚಮಸಾಲಿ ಸಮುದಾಯದ ಪ್ರತ್ಯೇಕ ಮೀಸಲಾತಿ ಬೇಡಿಕೆಗೆ ಸಂಬಂಧಿಸಿದ ಮೊದಲ ಮಾತುಕತೆಯಿದಾಗಿತ್ತು. ಮೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ನೀತಿ ಸಂಹಿತೆ, ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಅಂತಿಮ ವರದಿ ಕೊಟ್ಟಿಲ್ಲವೆಂದು ಸಿಎಂ ಸಿದ್ದರಾಮಯ್ಯ ಕಾರಣ ಹೇಳಿದರು. ನೀತಿ ಸಂಹಿತೆ ತೆರವಾದ ನಂತರ ಮುಂದಿನ ಮಾತುಕತೆಗೆ ನಿರ್ದಿಷ್ಟ ಕಾಲಮಿತಿ ನಿಗದಿಪಡಿಸುವಂತೆ ನಿಯೋಗದ ನೇತೃತ್ವವಹಿಸಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪಟ್ಟುಹಿಡಿದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಸಮುದಾಯದ ವಕೀಲರು ಹಾಗೂ ಮುಖಂಡರು ಧ್ವನಿಗೂಡಿಸಿದರು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಪೂರ್ವನಿಗದಿಯಂತೆ ಸಭೆ ನಡೆಸಿದ್ದು, ಹಿಂದುಳಿದ ವರ್ಗಗಳು, ದುರ್ಬಲರಿಗೆ ಮೀಸಲಾತಿ ವಿಷಯದಲ್ಲಿ ಸರ್ಕಾರ ಮುಕ್ತ ಮನಸ್ಸು ಹೊಂದಿದೆ. ಸಂವಿಧಾನದ ಆಶಯಕ್ಕೆ ಅನುಗುಣವಾಗಿ ತೀರ್ಮಾನ ತೆಗೆದುಕೊಳ್ಳುವುದಾಗಿ ಸಿಎಂ ಭರವಸೆ ನೀಡಿದರು.

ಸ್ವಾಮೀಜಿ ಬೇಸರ: ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಬಿಜೆಪಿ ಸರ್ಕಾರದ ಅವಧಿಯ 2ಡಿ ಅನ್ವಯಿಸಿ ಶೇಕಡ ಮೀಸಲು ಜಾರಿಗೊಳಿಸಲು ಕೇಳಿದರೆ ಅದು ಸುಪ್ರೀಂಕೋರ್ಟ್​ನಲ್ಲಿದೆ ಎಂದರು. ಒಬಿಸಿ 2ಎಗೆ ಸೇರಿಸಿ ಎಂದು ಕೇಳಿದರೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಇನ್ನೂ ಪೂರ್ಣ ವರದಿ ಸಲ್ಲಿಸಿಲ್ಲವೆಂದರು. ಮಧ್ಯಂತರ ವರದಿ ಪರಿಗಣಿಸುವ ಕೋರಿಕೆಗೂ ಸಿಎಂ ರಚನಾತ್ಮಕವಾಗಿ ಸ್ಪಂದಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸೂಕ್ತ ಮೀಸಲಾತಿ ಇಲ್ಲದ ಕಾರಣ ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೃಷಿ ಕಾರ್ವಿುಕರು ಹೆಚ್ಚಾಗಿರುವ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2ಎಗೆ ಸೇರಿಸಿ ಸಾಮಾಜಿಕ ನ್ಯಾಯ ಒದಗಿಸಲು ಮನವಿ ಮಾಡಿದೆವು. ಪಂಚಮಸಾಲಿ ಸಮುದಾಯ ಪ್ರಸ್ತುತ ಪ್ರವರ್ಗ-3 ಬಿ ಯಲ್ಲಿದೆ. ಈ ಪ್ರವರ್ಗದಡಿ ಲಿಂಗಾಯತ ಹಾಗೂ ಅದರ ಉಪಜಾತಿಗಳೇ ಮೀಸಲಾತಿ ಸೌಲಭ್ಯ ಪಡೆಯುತ್ತಿವೆ. ಹಾಗಾಗಿ 2ಎ ಪ್ರವರ್ಗದಡಿ ಪಂಚಮಸಾಲಿಗರನ್ನು ಸೇರಿಸಬೇಕು ಎಂಬ ಬೇಡಿಕೆಯಿಟ್ಟಿದ್ದೇವೆ ಎಂದು ಸ್ವಾಮೀಜಿ ಸಮರ್ಥಿಸಿಕೊಂಡರು.

ಸಿಎಂ ಹೇಳಿದ್ದೇನು?

  • ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಪಂಚಮಸಾಲಿ ಲಿಂಗಾಯತ ಸಮುದಾಯದ ಬೇಡಿಕೆ ಈಡೇರಿಕೆ
  • ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮುಂದೆ ಪ್ರಸ್ತಾವನೆ ಸಲ್ಲಿಸಿ ಅದರ ಶಿಫಾರಸಿನಡಿ ಕ್ರಮ
  • ಯಾವುದೇ ತೀರ್ಮಾನ ನ್ಯಾಯಯುತವಾಗಿ, ನ್ಯಾಯಾಲಯ ಸೇರಿ ಎಲ್ಲರಿಗೂ ಒಪ್ಪಿತವಾಗುವಂತಿರಬೇಕು
  • ಹಿಂದಿನ ಸರ್ಕಾರ ಪಂಚಮಸಾಲಿ ಸಮುದಾಯಕ್ಕಾಗಿ 2ಸಿ ಮತ್ತು 2ಡಿ ಹೊಸ ಪ್ರವರ್ಗ ಮಾಡಿತು
  • 3ಎ ನಲ್ಲಿದ್ದ ಒಕ್ಕಲಿಗರನ್ನು 2ಸಿ ಗೆ ಸೇರಿಸಿ, 3ಬಿ ಲಿಂಗಾಯತರನ್ನು 2ಡಿಗೆ ಸೇರಿಸುವ ಪ್ರಸ್ತಾಪ ಇಟ್ಟಿತು
  • ಬಿಜೆಪಿ ಸರ್ಕಾರ ಮುಸ್ಲಿಮರ ಮೀಸಲಾತಿಯನ್ನು ತೆಗೆದು ಹಾಕಿತ್ತು
  • ಮುಸ್ಲಿಮರು ಇದನ್ನು ಸುಪ್ರೀಂನಲ್ಲಿ ಪ್ರಶ್ನಿಸಿದಾಗ, ಯಥಾಸ್ಥಿತಿಗೆ ರಾಜ್ಯ ಸರ್ಕಾರ ಒಪ್ಪಿಕೊಂಡಿತ್ತು
  • ಆದ್ದರಿಂದ ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ

ನಿಯೋಗದ ಮನವಿ ಆಲಿಸಿ, ಬೇಡಿಕೆ ಕುರಿತು ಸಭೆಯಲ್ಲಿ ರ್ಚಚಿಸಲಾಯಿತು. ಆದರೆ ಬೇಡಿಕೆ ಬಗ್ಗೆ ಸಿಎಂ ರಚನಾತ್ಮಕವಾಗಿ ಸ್ಪಂದಿಸಲಿಲ್ಲ. ನೀತಿ ಸಂಹಿತೆ ತೆರವಾದ ಬಳಿಕ ಮುಂದಿನ ಮಾತುಕತೆ ಬಗ್ಗೆ ನಿರ್ದಿಷ್ಟ ಕಾಲಮಿತಿಯನ್ನೂ ತಿಳಿಸಲಿಲ್ಲ. ಸಮುದಾಯದ ಮುಖಂಡರ ಜತೆಗೆ ರ್ಚಚಿಸಿ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸುತ್ತೇವೆ.

| ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಪೀಠಾಧಿಪತಿ, ಕೂಡಲಸಂಗಮ.

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಂತಿಮ ಶಿಫಾರಸು ವರದಿ ಇನ್ನೂ ನಮಗೆ ಸಿಕ್ಕಿಲ್ಲ. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಮೀಸಲಾತಿ ಬಗ್ಗೆ ಅಡ್ವೊಕೇಟ್ ಜನರಲ್, ಕಾನೂನು ಇಲಾಖೆ, ತಜ್ಞರು, ಸಂಪುಟದಲ್ಲಿ ರ್ಚಚಿಸಿ ಕ್ರಮಕೈಗೊಳ್ಳಲಾಗುವುದು.

| ಸಿದ್ದರಾಮಯ್ಯ ಮುಖ್ಯಮಂತ್ರಿ

ಯಾವುದೇ ಸಮುದಾಯಕ್ಕೆ ಅನ್ಯಾಯವಾಗಬಾರದು, ಬಿಜೆಪಿ ಸರ್ಕಾರ ತರಾತುರಿಯಲ್ಲಿ ಬೇರೆ ಸಮುದಾಯ ಗಳಿಗೆ ನೋವಾಗುವಂತೆ ತೀರ್ವನಿಸಿತ್ತು. ಪಂಚಮಸಾಲಿ ಸಮುದಾಯದ ಮೀಸಲು ವಿಚಾರ ನ್ಯಾಯಾಲಯದಲ್ಲಿರುವಾಗ ಹಸ್ತಕ್ಷೇಪ ಮಾಡಲು ಬರುವುದಿಲ್ಲ. ನೀತಿ ಸಂಹಿತೆ ತೆರವಾದ ನಂತರ ಮತ್ತೆ ಸಭೆ ಕರೆಯುತ್ತೇವೆ.

| ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ

ನಮ್ಮ ಸರ್ಕಾರದ ಅವಧಿಯಲ್ಲಿ ಪಂಚಮಸಾಲಿ ಸಮು ದಾಯಕ್ಕೆ ಮೀಸಲಾತಿ ಸಿಗುವ ವಿಶ್ವಾಸವಿದೆ. ಸಮುದಾಯದ ಬಗ್ಗೆ ನಮ್ಮ ನಾಯಕರು ಸಕಾರಾತ್ಮಕ ಭಾವನೆ ಹೊಂದಿದ್ದಾರೆ. 2ಎ ಮೀಸಲು ನೀಡುವುದರಿಂದ ಬೇರೆ ಸಮುದಾಯಗಳಿಗೆ ಸಮಸ್ಯೆಯಾಗಲಿದೆಯೇ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ.

| ಲಕ್ಷ್ಮಿ ಹೆಬ್ಬಾಳ್ಕರ್ ಸಚಿವೆ

ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಅಂತಿಮ ವರದಿ ಕೊಟ್ಟಿಲ್ಲ. ಸದ್ಯಕ್ಕೆ ಆಯೋಗದ ಅಧ್ಯಕ್ಷ ಸ್ಥಾನ ಖಾಲಿಯಿದ್ದು, ಯಾವಾಗ ನೇಮಕವಾಗುತ್ತಾರೋ ಗೊತ್ತಿಲ್ಲ. ಚುನಾವಣೆ ನೀತಿ ಸಂಹಿತೆ ಜಾರಿ ಇದ್ದರೂ ಪೂರ್ವನಿಗದಿಯಂತೆ ಸಭೆ ನಡೆಸಿದ್ದೇವೆ ಎಂದು ತೋರಿಸಿದ್ದಾರೆ. ಮುಂದಿನ ಸಭೆ ಬಗ್ಗೆ ನಿರ್ದಿಷ್ಟ ಕಾಲಮಿತಿಯನ್ನೂ ಗೊತ್ತುಪಡಿಸಲಿಲ್ಲ.

| ಈರಣ್ಣ ಕಡಾಡಿ ಬಿಜೆಪಿ ರಾಜ್ಯಸಭಾ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net