

ಹರಿಹರ/ದಾವಣಗೆರೆ: ಲಿಂಗಾಯತ ಪಂಚಮಸಾಲಿ ಸಮುದಾಯದ ‘2 ಎ’ ಮೀಸಲು ಬೇಡಿಕೆಗೆ ಸಂಬಂಧಿಸಿ ಸಮುದಾಯದ ಸ್ಥಿತಿಗತಿ ಅರಿಯಲು ಹಿಂದುಳಿದ ವರ್ಗಗಳ ಆಯೋಗ ದಾವಣಗೆರೆ ಜಿಲ್ಲೆಯಿಂದ ಮಂಗಳವಾರ ಕ್ಷೇತ್ರ ಅಧ್ಯಯನ ಪ್ರಾರಂಭಿಸಿತು.
ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಹಾಗೂ ಸದಸ್ಯರು ಆಯ್ದ ಗ್ರಾಮಗಳಿಗೆ ತೆರಳಿ ಪಂಚಮಸಾಲಿ ಸಮುದಾಯದವರು ವಾಸಿಸುವ ಪ್ರದೇಶ, ಅವರ ಕುಲ ಕಸುಬು, ಸಂಸ್ಕೃತಿ, ಪರಂಪರೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿ ಸೇರಿ ಇತರ ಮಾಹಿತಿ ಕಲೆ ಹಾಕಿದರು.
ಮೊದಲ ದಿನ ಹರಿಹರ ತಾಲೂಕಿನ ಬನ್ನಿಕೋಡು, ದೀಟೂರು, ಕೆ.ಬೇವಿನಹಳ್ಳಿ, ಹೊಳೆಸಿರಿಗೆರೆ, ರಾಮತೀರ್ಥ ಹಾಗೂ ಜಗಳೂರು, ದಾವಣಗೆರೆ ತಾಲೂಕಿನ ಗ್ರಾಮಗಳಿಗೆ ತಂಡ ಭೇಟಿ ನೀಡಿತು. ಡಿ.23ರವರೆಗೆ ಅಧ್ಯಯನ ಮುಂದುವರಿಯಲಿದೆ. ಆಯೋಗದ ಸದಸ್ಯರಾದ ಎಚ್.ಎಸ್.ಕಲ್ಯಾಣ ಕುಮಾರ್, ರಾಜಶೇಖರ್, ಟಿ.ಎಸ್.ಕೀರ್ತಿ, ಅರುಣ್ ಕುಮಾರ್, ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಹಾಗೂ ಹಿಂದುಳಿದ ವರ್ಗಗಳ ಅಧಿಕಾರಿಗಳಿದ್ದರು.
ಆಯೋಗ ನಡೆಸುವ ಸಮೀಕ್ಷೆ ವಾಸ್ತವ ಅಂಶಗಳಿಂದ ಕೂಡಿರುತ್ತದೆ. ಮನೆಮನೆಗೆ ತೆರಳಿ ಸಮುದಾಯದ ಸಂಸ್ಕೃತಿ, ಪರಂಪರೆ, ಜೀವನೋಪಾಯ, ಬದುಕಿನ ಇತರ ಆಯಾಮಗಳ ಕುರಿತು ಮಾಹಿತಿ ಸಂಗ್ರಹಿಸಲಾಗುವುದು. ಅಧ್ಯಯನ ವರದಿ ಸಲ್ಲಿಸಲು ಸರ್ಕಾರ ಸಮಯ ನಿಗದಿ ಮಾಡಿಲ್ಲ. ಆದಷ್ಟು ಶೀಘ್ರವೇ ಸಲ್ಲಿಸಲಾಗುವುದು.
| ಜಯಪ್ರಕಾಶ ಹೆಗ್ಡೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ
ಅನಾಥ ಮಕ್ಕಳಿಗೂ ಸೌಲಭ್ಯಕ್ಕೆ ಶಿಫಾರಸು: ರಾಜ್ಯದ ಅನಾಥಾಶ್ರಮಗಳಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳ ಮುಂದಿನ ಶೈಕ್ಷಣಿಕ ಹಾಗೂ ಉದ್ಯೋಗದ ಹಿತದೃಷ್ಟಿಯಿಂದ ಯಾವ ವರ್ಗಗಳಿಗೆ ಅವರು ಸೇರಿದವರು ಎಂದು ಪರಿಶೀಲಿಸಿ ವರದಿ ನೀಡಲಾಗುವುದು ಎಂದು ಜಯಪ್ರಕಾಶ ಹೆಗ್ಡೆ ತಿಳಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಹಲವು ಅನಾಥಾಶ್ರಮಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಾಗಿದೆ. ಅಲ್ಲಿನ ಮಾದರಿಯಂತೆ ಇಲ್ಲಿನ ಮಕ್ಕಳಿಗೂ ಸೌಲಭ್ಯ ಒದಗಿಸಲು ಶಿಫಾರಸು ಮಾಡಲಾಗುವುದು ಎಂದರು.
ಸರ್ಕಾರಕ್ಕೆ ಶೀಘ್ರವೇ ವರದಿ: ಹಿಂದುಳಿದ ವರ್ಗಗಳ ‘2ಎ’ ಮೀಸಲು ಪಟ್ಟಿಗೆ ಸೇರಿಸುವಂತೆ ಪಂಚಮಸಾಲಿ ಸಮುದಾಯ ಮನವಿ ಮಾಡಿದ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದರು. ಕಳೆದ ನವೆಂಬರ್ನಿಂದ ಬೆಳಗಾವಿಯಿಂದಲೇ ಸಮೀಕ್ಷೆ ಆರಂಭಿಸಬೇಕಿತ್ತಾದರೂ ಚುನಾವಣೆ ನೀತಿಸಂಹಿತೆ ಕಾರಣ ತಡವಾಯಿತು. ಇದೀಗ ದಾವಣಗೆರೆಯಿಂದ ಶುರು ಆಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪಂಚಮಸಾಲಿ ಸಮಾಜ ಹಿಂದುಳಿದ ವರ್ಗಗಳ ‘3 ಬಿ’ಪಟ್ಟಿಯಲ್ಲಿದೆ. ಹಿಂದುಳಿದ ವರ್ಗಗಳಲ್ಲಿನ ಕೆಲ ಸಮುದಾಯಗಳು ಪಂಚಮಸಾಲಿಗರ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿದ ಕಾರಣ ಪರ -ವಿರೋಧ ಚರ್ಚೆ ಮುನ್ನೆಲೆಗೆ ಬಂದಿದೆ ಎಂದರು.