

ಬೆಂಗಳೂರು: ಸೌಹಾರ್ದ ಸಹಕಾರ ಸಂಘಗಳ ಪ್ರಾಥಮಿಕ, ಮಾಧ್ಯಮಿಕ ಅಥವಾ ಒಕ್ಕೂಟ ಮತ್ತು ಅಪೆಕ್ಸ್ ಸಹಕಾರಿಗಳ ಸಂಘದ ಆಡಳಿತ ಮಂಡಳಿಯಲ್ಲಿ ಎಸ್‌ಸಿ, ಎಸ್‌ಟಿ ತಲಾ ಒಂದು, ಒಬಿಸಿ ಮತ್ತು ಮಹಿಳೆಯರಿಗೆ ತಲಾ ಎರಡು ಸದಸ್ಯ ಸ್ಥಾನ ಮೀಸಲಿಡುವ ಕಾಯ್ದೆ ಜಾರಿಯಾಗಿದೆ.
ವಿಧಾನ ಮಂಡಲ ಅಧಿವೇಶನದಲ್ಲಿ ಅಂಗೀಕರಿಸಿ ಶಿಾರಸು ಮಾಡಿದ್ದ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ‘ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಅಧಿನಿಯಮ, 2025’ ರಾಜ್ಯ ಪತ್ರದಲ್ಲಿ ಪ್ರಕಟವಾಗುವುದರೊಂದಿಗೆ ಜಾರಿಗೊಂಡಿದೆ.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೊರತುಪಡಿಸಿ ಆಡಳಿತ ಮಂಡಳಿ ನಿರ್ದೇಶಕರ ಗರಿಷ್ಠ ಸಂಖ್ಯೆ 13ಕ್ಕಿಂತ ಕಡಿಮೆಯಿಲ್ಲದ ಸದಸ್ಯರನ್ನು ಹೊಂದಿರಬೇಕು. ಆದರೆ ನಾಮಕರಣ ಸದಸ್ಯರ ಸಂಖ್ಯೆ ಮೀರಬಾರದು.
ಸೌಹಾರ್ದ ಸಹಕಾರಿ ಬ್ಯಾಂಕ್ ಹೊರತುಪಡಿಸಿ ಪ್ರತಿಯೊಂದು ಸಹಕಾರಿಯು ಸಹಕಾರಿ ವರ್ಷದ ಅಂತ್ಯಕ್ಕೆ ಹೊಂದಿರುವ ಒಟ್ಟು ಠೇವಣಿಯಲ್ಲಿ ಶೇ.20ರಷ್ಟು ಶಾಸನಬದ್ಧ ದ್ರವ್ಯತಾ ಮೀಸಲು ರೂಪದಲ್ಲಿ ನಿರ್ವಹಣೆ ಕಡ್ಡಾಯವಾಗಿದೆ.
ಸಹಕಾರಿಯ ತಕ್ಷಣದ ಬಳಕೆಗೆ ಅಗತ್ಯವಿರುವ ನಿಧಿ ಹೊರತುಪಡಿಸಿ ಉಳಿದ ಠೇವಣಿ ಮೊತ್ತವನ್ನು ಅಪೆಕ್ಸ್, ಡಿಸಿಸಿ, ಪಟ್ಟಣ ಸಹಕಾರಿ ಬ್ಯಾಂಕ್, ನಿಬಂಧಕರ ಪೂರ್ವಾನುಮತಿಯೊಂದಿಗೆ ಆರ್‌ಬಿಐ ನಿಯಂತ್ರಿತ ಯಾವುದೇ ಬ್ಯಾಂಕ್‌ನಲ್ಲಿ ಠೇವಣಿ ಸೇರಿ ಹಲವು ಮಹತ್ವದ ಅಂಶಗಳು ಕಾಯ್ದೆಯಲ್ಲಿ ಅಡಕವಾಗಿವೆ.
ನ್ಯಾಯಾಲಯಗಳಲ್ಲಿ ಸರ್ಕಾರಿ ವ್ಯಾಜ್ಯಗಳ ನಿರ್ವಹಣೆ, ನ್ಯಾಯಾಲಯಗಳು ಹೊರಡಿಸಿದ ಆದೇಶಗಳ ಪಾಲನೆ ಮೇಲ್ವಿಚಾರಣೆಗೆ ಅಧಿಕಾರಿಯನ್ನು ನೇಮಿಸಲು ಅವಕಾಶ ಕಲ್ಪಿಸಿದ ‘ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ (ತಿದ್ದುಪಡಿ) ಅಧಿನಿಯಮ, 2025’ ರಾಜ್ಯಪಾಲರ ಒಪ್ಪಿಗೆಯೊಂದಿಗೆ ಜಾರಿಯಾಗಿದೆ.