

ಮುಂಬೈ: ಹಣದುಬ್ಬರ ಏರಿಕೆ, ಜಿಡಿಪಿ ಇಳಿಕೆ, ರೂಪಾಯಿ ಬೆಲೆ ಏರುಪೇರು ಮುಂತಾದ ಒತ್ತಡಗಳ ನಡುವೆಯೂ ರೆಪೊ (ರೀಪರ್ಚೇಸ್ ಆಪ್ಷನ್) ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶುಕ್ರವಾರ ತೀರ್ಮಾನಿಸಿದೆ.
ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ನಿರೀಕ್ಷೆಗಿಂತ ತೀರಾ ಕೆಳಗಿಳಿದು, ಜುಲೈ-ಸೆಪ್ಟೆಂಬರ್ ತ್ರೖೆಮಾಸಿಕ ಅವಧಿಯಲ್ಲಿ ಶೇ. 5.4ಕ್ಕೆ ಕುಸಿದಿದೆ. ಕಳೆದ ಏಳು ತ್ರೖೆಮಾಸಿಕ ಅವಧಿಗಳಲ್ಲೇ ಇದು ಅತ್ಯಂತ ಕಡಿಮೆ. ಹಣದುಬ್ಬರ ಕೂಡ ಹೆಚ್ಚಾಗಿದ್ದು, ಡಾಲರ್ ಎದುರು ರೂಪಾಯಿ ಬೆಲೆಯು ನಿರಂತರವಾಗಿ ಏರಿಳಿತವಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಆರ್ಥಿಕತೆಯನ್ನು ಮೇಲೆತ್ತಲು ಆರ್ಬಿಐ ರೆಪೊ ದರವನ್ನು ಕಡಿಮೆ ಮಾಡುತ್ತದೆ, ಆ ಮೂಲಕ ಬ್ಯಾಂಕ್ ಸಾಲಗಳ ಬಡ್ಡಿ ದರ ಕಡಿಮೆಯಾಗಿ ಸಾಲಗಾರರಿಗೆ ಸ್ವಲ್ಪ ಮಟ್ಟಿಗೆ ಅನುಕೂಲವಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದೆ.
ಆರ್ಬಿಐನ ಮೂವರು ಮತ್ತು ಹೊರಗಿನ ಮೂವರು ಸದಸ್ಯರನ್ನು ಒಳಗೊಂಡ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆ ಶುಕ್ರವಾರದಿಂದ 3 ದಿನಗಳ ಕಾಲ ನಡೆಯಲಿದ್ದು, ಮೊದಲ ದಿನದ ಸಭೆಯಲ್ಲಿ ರೆಪೊ ದರ ಯಥಾಸ್ಥಿತಿ ಪರವಾಗಿ ನಾಲ್ವರು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನಿಬ್ಬರು ಸದಸ್ಯರು ರೆಪೊ ದರ ಇಳಿಸಬೇಕೆಂದು ವಾದಿಸಿದರು ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಏಪ್ರಿಲ್ನಿಂದ ಸೆಪ್ಟೆಂಬರ್ವರೆಗಿನ ಅವಧಿಗಿಂತ ದ್ವಿತೀಯಾರ್ಧದಲ್ಲಿ ಆರ್ಥಿಕ ವೃದ್ಧಿ ಉತ್ತಮವಾಗಿರಲಿದೆ ಎಂದು ದಾಸ್ ವಿಶ್ವಾಸ ವ್ಯಕ್ತಪಡಿಸಿದರು.
ರೂಪಾಯಿ ಮೇಲಿರುವ ಒತ್ತಡ ನಿವಾರಿಸುವುದಕ್ಕಾಗಿ ಹೆಚ್ಚಿನ ಬಂಡವಾಳ ಆಕರ್ಷಿಸಲು ವಿದೇಶಿ ಕರೆನ್ಸಿ ಠೇವಣಿ ಮೇಲಿನ ಬಡ್ಡಿ ದರವನ್ನು ಏರಿಸುವುದಕ್ಕೂ ಆರ್ಬಿಐ ನಿರ್ಧರಿಸಿದೆ. ಪೂರ್ವ ಮಂಜೂರಾತಿ ಪಡೆದ ಸಾಲಗಳನ್ನು ಯುಪಿಐ ಮೂಲಕ ವಿತರಿಸಲು ಸಣ್ಣ ಹಣಕಾಸು ಸಂಸ್ಥೆಗಳಿಗೆ ಆರ್ಬಿಐ ಅನುಮತಿ ನೀಡಿದೆ. ಆರ್ಥಿಕ ವಲಯದಲ್ಲಿ ಕೃತಕ ಬುದ್ಧಿಮತ್ತೆಯನ್ನು (ಎಐ) ಜವಾಬ್ದಾರಿಯುತವಾಗಿ ಮತ್ತು ನೈತಿಕವಾಗಿ ಬಳಸುವ ಬಗ್ಗೆ ಚೌಕಟ್ಟೊಂದನ್ನು ರೂಪಿಸಲು ತಜ್ಞರ ಸಮಿತಿಯನ್ನು ಆರ್ಬಿಐ ರಚಿಸಲಿದೆ. ಇದಲ್ಲದೆ ಹಣದುಬ್ಬರ ಏರಿಕೆಯ ಮುನ್ಸೂಚನೆಯನ್ನು ಆರ್ಬಿಐ ಶೇ. 4.8ಕ್ಕೆ ಏರಿಸಿದೆ. ಮುಂದಿನ ಎಂಪಿಸಿ ಸಭೆ ಮುಂದಿನ ವರ್ಷದ ಫೆಬ್ರವರಿ 5ರಿಂದ 7ರವರೆಗೆ ನಡೆಯಲಿದೆ.
ರೆಪೊ ದರದ ವಿಷಯದಲ್ಲಿ ಆರ್ಬಿಐ ನಿರ್ಧಾರ ಹೀಗೇ ಇರುತ್ತದೆ ಎಂಬ ನಿರೀಕ್ಷೆ ಮೊದಲಿನಿಂದಲೂ ಇತ್ತು. ಸಿಆರ್ಆರ್ ಇಳಿಸಿರುವುದು ಒಳ್ಳೆಯ ಕ್ರಮ. ಆರ್ಥಿಕತೆಯ ಬೆಳವಣಿಗೆಗೆ ಇದರಿಂದ ಸಹಾಯವಾಗಲಿದೆ. | ಹರ್ಷವರ್ಧನ್ ಅಗರ್ವಾಲ್ ಅಧ್ಯಕ್ಷ, ಎಫ್ಐಸಿಸಿಐ
ತಮಗೆ ಹಣದ ಅವಶ್ಯಕತೆ ಇದ್ದಾಗ ವಾಣಿಜ್ಯ ಬ್ಯಾಂಕ್ಗಳು ಆರ್ಬಿಐನಿಂದ ಸಾಲ ಪಡೆಯುತ್ತವೆ. ಅದರ ಬಡ್ಡಿ ದರಕ್ಕೆ ರೆಪೊ ರೇಟ್ ಎನ್ನುತ್ತಾರೆ. ಅದರರ್ಥ- ರೀಪರ್ಚೇಸ್ ಅಗ್ರಿಮೆಂಟ್ ಅಥವಾ ರೀಪರ್ಚೇಸ್ ಆಪ್ಷನ್. ಅರ್ಹ ಷೇರು ಅಥವಾ ಭದ್ರತೆಯನ್ನು ಆರ್ಬಿಐಗೆ ನಿರ್ದಿಷ್ಟ ಬೆಲೆಯಲ್ಲಿ ನೀಡಿ ಬ್ಯಾಂಕ್ಗಳು ಆರ್ಬಿಐನಿಂದ ಸಾಲ ಪಡೆಯುತ್ತವೆ. ಈ ಬಡ್ಡಿ ದರ ಕಡಿಮೆಯಾದರೆ, ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ನೀಡಿದ ಸಾಲದ ಬಡ್ಡಿ ದರವನ್ನು ಕಡಿಮೆ ಮಾಡುತ್ತವೆ. ಆ ರೀತಿಯಲ್ಲಿ ಗ್ರಾಹಕರಿಗೆ ಲಾಭವಾಗುತ್ತದೆ. ಹಣದುಬ್ಬರ ಹೆಚ್ಚಾದಾಗ ಅದನ್ನು ನಿಯಂತ್ರಿಸಲು, ಆರ್ಬಿಐ ರೆಪೋ ದರವನ್ನು ಪರಿಷ್ಕರಿಸುತ್ತದೆ.
ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೀಡಲಾಗುವ ಮೇಲಾಧಾರ (ಕೊಲ್ಯಾಟರಲ್) ರಹಿತ ಕೃಷಿ ಸಾಲದ ಪ್ರಮಾಣವನ್ನು 1.6 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗೆ ಏರಿಸಲು ಆರ್ಬಿಐ ನಿರ್ಧರಿಸಿದೆ. ಕೃಷಿಗೆ ಅಗತ್ಯವಿರುವ ವಸ್ತುಗಳ ವೆಚ್ಚ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಮೊತ್ತವನ್ನು 2010ರಲ್ಲಿ 1 ಲಕ್ಷಕ್ಕೆ ಮತ್ತು 2019ರಲ್ಲಿ 1.6 ಲಕ್ಷಕ್ಕೆ ಏರಿಸಲಾಗಿತ್ತು.
ಬ್ಯಾಂಕ್ಗಳು ಆರ್ಬಿಐನಲ್ಲಿಡಬೇಕಾದ ಹಣದ ಅನುಪಾತ (ಕ್ಯಾಷ್ ರಿಸರ್ವ್ ರೇಶಿಯೋ- ಸಿಆರ್ಆರ್) ಕಡಿಮೆ ಮಾಡಿದೆ. ಆ ಮೂಲಕ ಸಾಲದಾತರ ಬಳಿ ಹೆಚ್ಚಿನ ಮೊತ್ತ ಉಳಿಯುವಂತೆ ಮಾಡಿ, ನಿಧಾನಗತಿಯಲ್ಲಿರುವ ಆರ್ಥಿಕತೆಗೆ ಚುರುಕು ನೀಡಲು ಪ್ರಯತ್ನಿಸಿದೆ. ಸಿಆರ್ಆರ್ ಇಳಿಕೆಯಿಂದ ಬ್ಯಾಂಕಿಂಗ್ ವ್ಯವಸ್ಥೆಗೆ 1.16 ಲಕ್ಷ ಕೋಟಿ ರೂ. ಲಭ್ಯವಾಗಲಿದ್ದು, ಅಲ್ಪಾವಧಿ ಸಾಲದ ಬಡ್ಡಿ ದರಗಳು ಇಳಿಕೆಯಾಗಬಹುದಲ್ಲದೆ ಬ್ಯಾಂಕ್ ಠೇವಣಿ ದರಗಳ ಮೇಲಿನ ಒತ್ತಡವೂ ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಬ್ಯಾಂಕ್ ಸಾಲದ ಬಡ್ಡಿ ದರ ಕಡಿತ ಮಾಡುವ ಅಗತ್ಯ ಇದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಅಭಿಪ್ರಾಯಪಟ್ಟಿದ್ದರು. ಅವರ ಅಭಿಪ್ರಾಯದ ಬಗ್ಗೆ ಶಕ್ತಿಕಾಂತ ದಾಸ್ ತಲೆಕೆಡಿಸಿಕೊಂಡಿಲ್ಲ. ತಲಾ 3 ವರ್ಷಗಳ 2 ಅವಧಿಗಳಿಗೆ ಗವರ್ನರ್ ಆಗಿದ್ದ ದಾಸ್ ಇದೇ ತಿಂಗಳ 10ರಂದು ನಿವೃತ್ತರಾಗಲಿದ್ದಾರೆ. ತಕ್ಷಣ ಬಡ್ಡಿ ದರ ಇಳಿಕೆ ಅಪಕ್ವ ಮತ್ತು ಆತುರದ ನಿರ್ಧಾರ ಆಗುತ್ತದೆ ಎಂದು ದಾಸ್ ಅಕ್ಟೋಬರ್ನಲ್ಲಿ ಹೇಳಿದ್ದರು.
ಆರ್ಥಿಕತೆ ಬೆಳವಣಿಗೆ ಮುನ್ಸೂಚನೆಯನ್ನೂ ಆರ್ಬಿಐ ಪರಿಷ್ಕರಿಸಿದೆ. 2025ರ ಮಾರ್ಚ್ಗೆ ಅಂತ್ಯವಾಗುವ ವರ್ಷದಲ್ಲಿ ಶೇ. 7.2ರಷ್ಟು ವೃದ್ಧಿ ದಾಖಲಾಗುತ್ತದೆ ಎಂದು ಹೇಳಿದ್ದ ಆರ್ಬಿಐ ಈಗ ಅದನ್ನು ಶೇ. 6.6ಕ್ಕೆ ಇಳಿಸಿದೆ. ಹಣದುಬ್ಬರ ಮುನ್ಸೂಚನೆಯನ್ನು ಆರ್ಬಿಐ ಏರಿಸಿದೆ. 2024-25ರಲ್ಲಿ ಹಣದುಬ್ಬರ ಶೇ. 4.5ರಷ್ಟಿರುತ್ತದೆ ಎಂದಿದ್ದ ಆರ್ಬಿಐ ಈಗ ಅದು ಶೇ. 4.8ರಷ್ಟಾಗಲಿದೆ ಎಂದು ತಿಳಿಸಿದೆ. ಹಣದುಬ್ಬರವು ಆರ್ಬಿಐನ ಶೇ. 4ರ ಟಾರ್ಗೆಟ್ಗಿಂತ ಮೇಲೆಯೇ ಇದ್ದು, ಅಕ್ಟೋಬರ್ನಲ್ಲಿ 14 ತಿಂಗಳ ಗರಿಷ್ಠ ಮಟ್ಟಕ್ಕೆ, ಅಂದರೆ ಶೇ. 6.21ಕ್ಕೆ ಏರಿತ್ತು.