ರೇಣುಕಸ್ವಾಮಿ ಹತ್ಯೆ, ಅತ್ಯಂತ ಹೀನ, ಹೇಯ ಕೃತ್ಯ

B Dayananda
Published on

ಬೆಂಗಳೂರು: ರೇಣುಕಸ್ವಾಮಿ ಕೊಲೆ ಅತ್ಯಂತ ಹೀನ ಮತ್ತು ಹೇಯ ಕೃತ್ಯವಾಗಿದೆ. ಸಮಯ ಮತ್ತು ಕರ್ತವ್ಯಪ್ರಜ್ಞೆಯಿಂದ ಅಧಿಕಾರಿಗಳು ಸಮರ್ಥವಾಗಿ ತನಿಖೆ ನಡೆಸುತ್ತಿದ್ದಾರೆ. ಸ್ವಲ್ಪ ಯಾಮಾರಿದ್ದರೂ ತನಿಖೆ ಬೇರೆಯದೇ ದಿಕ್ಕು ಹಿಡಿಯುತ್ತಿತ್ತು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಬಿ.ದಯಾನಂದ್, ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಇದುವರೆಗೂ 17 ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಮೂಲಕ ಮೃತನ ಕುಟುಂಬಸ್ಥರಿಗೆ ನ್ಯಾಯ ಒದಗಿಸುವ ಕೆಲಸವನ್ನು ಪೊಲೀಸರು ಮಾಡಲಿದ್ದಾರೆ ಎಂದು ಭರವಸೆ ನೀಡಿದರು.

ಪೊಲೀಸರ ಸಮಯಪ್ರಜ್ಞೆಯಿಂದ ಪ್ರಕರಣ ಬೆಳಕಿಗೆ ಬಂದಿದೆ. ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುವ ಮೂಲಕ ತ್ವರಿತವಾಗಿ ಅವಶ್ಯಕ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ವಿಜಯನಗರ ಉಪ ವಿಭಾಗ ಎಸಿಪಿ ಚಂದನ್ ತನಿಖಾಧಿಕಾರಿಯಾಗಿದ್ದು, ಪಶ್ಚಿಮ ವಿಭಾಗ ಡಿಸಿಪಿ ಎಸ್.ಗಿರೀಶ್ ಮೇಲ್ವಿಚಾರಣೆ ನಡೆಸಲಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆಯಿಂದ ವರ್ಗಾವಣೆ ಆಗಿದ್ದ ಗಿರೀಶ್ ನಾಯಕ್ ಸಹ ತನಿಖಾ ತಂಡದಲ್ಲಿ ಇರಲಿದ್ದಾರೆ. ಎಲ್ಲ ಆಯಾಮದಲ್ಲಿ ತನಿಖೆ ನಡೆಯುತ್ತಿದ್ದು,ಒಂದೊಂದು ಆಯಾಮಕ್ಕೂ ಒಬ್ಬೊಬ್ಬ ಇನ್‌ಸ್ಪೆಕ್ಟರ್ ನೇಮಿಸಲಾಗಿದೆ ಎಂದರು.

ಠಾಣೆಯ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಹಾಗೂ ಶಾಮಿಯಾನ ಹಾಕಿರುವುದರ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಯುಕ್ತರು, ‘ಪ್ರತಿಯೊಂದಕ್ಕೂ ಒಂದು ಕಾರಣವಿರುತ್ತದೆ. ಆರೋಪಿಗಳಲ್ಲಿ ಸೆಲೆಬ್ರೆಟಿಗಳಿದ್ದು ಹೆಚ್ಚಿನ ಕುತೂಹಲ ಕಂಡು ಬರುತ್ತಿರುವುದರಿಂದ ತನಿಖೆಯ ಭಾಗವಲ್ಲದ ಅನೇಕ ಉತ್ಪ್ರೇಕ್ಷೆ, ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ತಾಳ್ಮೆಯಿಂದ ಸಹಕರಿಸಿದರೆ ಪ್ರಕರಣ ತಾರ್ಕಿಕ ಅಂತ್ಯ ಕಾಣಲಿದೆ ಎಂದು ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net