

ಮಣಿಪುರ: ಪೂರ್ವಾನುಮತಿಯಿಲ್ಲದೆ ಜಿಲ್ಲೆಗಳು ಮತ್ತು ಸಂಸ್ಥೆಗಳ ಮರುನಾಮಕರಣದ ವಿರುದ್ಧ ಸಲಹೆ ನೀಡುವ ಅಧಿಸೂಚನೆಯನ್ನು ಹೊರಡಿಸಿದೆ. ಅಂತಹ ಕ್ರಮವು ಸಮುದಾಯಗಳ ನಡುವೆ ಸಂಘರ್ಷವನ್ನು ಉಂಟುಮಾಡಬಹುದು ಮತ್ತು ಪ್ರಸ್ತುತ ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಬಣಗೊಳಿಸಬಹುದು ಎಂದು ಮಣಿಪುರ ಸರ್ಕಾರ ಸುತ್ತೋಲೆಯ ಮುಖೇನ ಎಚ್ಚರಿಸಿದೆ.
ನಿರ್ದೇಶನವನ್ನು ಉಲ್ಲಂಘಿಸುವುದು ಕಂಡುಬಂದರೆ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದೆ. ಮೇ 3 ರಂದು ಮಣಿಪುರದಲ್ಲಿ ಸಮುದಾಯಗಳ ನಡುವೆ ಉಂಟಾದ ಘರ್ಷಣೆಯಿಂದ 180ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, ಅನೇಕರು ಗಾಯಗೊಂಡಿದ್ದರು. ಈ ಹಿನ್ನೆಲೆ ಯಾವುದೇ ಅನಧಿಕೃತ ಕ್ರಮಗಳನ್ನು ಕೈಗೊಳ್ಳದಂತೆ ಸರ್ಕಾರ ಎಚ್ಚರಿಸಿದೆ.
ರಾಜ್ಯ ಸರ್ಕಾರದ ಅನುಮೋದನೆ ಇಲ್ಲದೆ ಜಿಲ್ಲೆಗಳು, ಉಪವಿಭಾಗಗಳು, ಸ್ಥಳಗಳು, ಸಂಸ್ಥೆಗಳು ಮತ್ತು ಅಂತಹ ಸಂಸ್ಥೆಗಳ ವಿಳಾಸವನ್ನು ಮರುನಾಮಕರಣ ಮಾಡುವ ಉದ್ದೇಶಪೂರ್ವಕ ಕೃತ್ಯವನ್ನು ಯಾರೂ ಮಾಡಬಾರದು ಅಥವಾ ಮಾಡಲು ಪ್ರಯತ್ನಿಸಬಾರದು ಎಂದು ಮುಖ್ಯ ಕಾರ್ಯದರ್ಶಿ ವಿನೀತ್ ಜೋಶಿ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
ಹಲವು ನಾಗರಿಕ ಸಮಾಜದ ಸಂಘಟನೆಗಳು, ಸಂಸ್ಥೆಗಳು ಮತ್ತು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಮರುನಾಮಕರಣ ಮಾಡುತ್ತಿದ್ದಾರೆ ಅಥವಾ ಮರುನಾಮಕರಣ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದು ವಿಶ್ವಾಸಾರ್ಹ ಮೂಲಗಳಿಂದ ಮಣಿಪುರ ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆ ಎಂದು ತಿಳಿಸಿದೆ,(ಏಜೆನ್ಸೀಸ್).