

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನ ಗಣನೆ ಶುರುವಾಗಿದೆ. ಈಗಾಗಲೇ ದಸರಾಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ದಸರಾ ಮಹೋತ್ಸವದ ನವರಾತ್ರಿ ಆಚರಣೆಯ ಸಿದ್ಧತೆ ಸಂದರ್ಭದಲ್ಲಿ ಚಾಮುಂಡಿ ಬೆಟ್ಟದ ಹೆಸರನ್ನು ಮಹಿಷ ಬೆಟ್ಟ ಎಂದು ಮರು ನಾಮಕರಣ ಮಾಡುವ ಬಗ್ಗೆ ಸುದ್ದಿಯೊಂದು ಸದ್ದು ಮಾಡುತ್ತಿದೆ.
ಮೈಸೂರಿಗೆ ಬರುವ ಪ್ರತಿಯೊಬ್ಬರು ತಪ್ಪದೇ ನಾಡದೇವತೆಯ ಸನ್ನಿಧಿಗೆ ತೆರಳಿ ತಾಯಿಯ ದರ್ಶನ ಮಾಡುತ್ತಾರೆ. ಆದರೆ ಈಗ ಚಾಮುಂಡಿ ಬೆಟ್ಟದ ಹೆಸರನ್ನು ಮಹಿಷ ಬೆಟ್ಟ ಎಂದು ಮರು ನಾಮಕರಣ ಮಾಡು ಬೇಕು, ಮಹಿಷ ದಸರಾ ಮಾಡಬೇಕು ಎಂಬ ಸುದ್ದಿ ಮುನ್ನೆಲೆಗೆ ಬಂದಿದೆ.
ಮಹಿಷ ದಸರಾ ಆಚರಣೆ : 2015ರಲ್ಲಿ ಆರಂಭವಾದ ಮಹಿಷ ದಸರಾ ಆಚರಣೆಗೆ ದಿಢೀರ್ 50 ವರ್ಷದ ಇತಿಹಾಸ ಸೃಷ್ಟಿಯಾಗಿದೆ. ಈ ಬಾರಿ 50ನೇ ವರ್ಷದ ಮಹಿಷ ದಸರಾ ಆಚರಣೆ ನಡೆಸಲಾಗುತ್ತಿದೆ ಎಂದು ಮಹಿಷ ದಸರಾ ಆಚರಣೆ ಸಮಿತಿಯಿಂದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಎರಡು ದಿನಕ್ಕೂ ಮುಂಚೆ ಮಹಿಷ ದಸರಾ ಆಚರಣೆ ಸಮಿತಿ ಹಾಗೂ ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘ ಅ.13 ರಂದು ಮಹಿಷ ದಸರಾ ಆಚರಿಸಲು ನಿರ್ಧರಿಸಿದೆ. ಮಹಿಷಾಸುರನ ಭಾವಚಿತ್ರವಿರುವ ಆಹ್ವಾನ ಪತ್ರಿಕೆಯಲ್ಲಿ ಚಾಮುಂಡಿಬೆಟ್ಟಕ್ಕೆ ಮಹಿಷ ಬೆಟ್ಟ ಅಂತ ನಮೂದಿಸಲಾಗಿದೆ.
ಮಹಿಷ ದಸರಾ ವಿರೋಧಿಸಿ ಕೋರ್ಟ್ಗೆ ಅರ್ಜಿ: ಮಹಿಷ ದಸರಾ ಆಚರಣೆ ವಿರೋಧಿಸಿ ಮೈಸೂರಿನ 8ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಸ್ನೇಹಮಹಿ ಕೃಷ್ಣ ಎಂಬುವರು ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷರಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ಅಕ್ಟೋಬರ್ 11ಕ್ಕೆ ಅರ್ಜಿ ವಿಚಾರಣೆ ನಿಗದಿಪಡಿಸಿದೆ. ಕಳೆದ ಐದಾರು ವರ್ಷದಿಂದ ವಿರೋಧದ ನಡುವೆಯೂ ಮಹಿಷ ದಸರಾ ಆಚರಣೆ ಸಮಿತಿ, ಮಹಿಷ ದಸರಾ ಆಚರಣೆ ಮಾಡುತ್ತಿದೆ ಎಂದು ವಿರೋಧ ವ್ಯಕವಾಗುತ್ತಿದೆ.
ಚಾಮುಂಡಿ ಬೆಟ್ಟಕ್ಕೆ ಮಹಿಷ ಬೆಟ್ಟ ಎಂದು ನಾಮಕರಣ ಮಾಡುವಂತೆ ತಾಕೀತು : ನಾಡಹಬ್ಬ ಮೈಸೂರು ದಸರಾಗೆ ಚಾಲನೆ ಸಿಗಲಿರುವ ಎರಡು ದಿನ ಮುಂಚೆ ಅಂದರೆ ಅಕ್ಟೋಬರ್ 13 ರಂದು ಮಹಿಷ ದಸರಾ ನಡೆಸಲು ಮಹಿಷಾಸುರ ಮಂಡಳಿ ಕರೆ ಕೊಟ್ಟಿದೆ. ಜತೆಗೆ ಅದರ ಆಹ್ವಾನ ಪತ್ರಿಕೆಯನ್ನೂ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಚಾಮುಂಡಿ ಬೆಟ್ಟಕ್ಕೆ ಮಹಿಷ ಬೆಟ್ಟ ಅಂತಾ ನಮೂದು ಮಾಡಲಾಗಿದೆ. ಹೀಗಾಗಿ ಚಾಮುಂಡಿ ದೇವತೆ ನೆಲೆಸಿರುವ ಚಾಮುಂಡಿ ಬೆಟ್ಟಕ್ಕೆ ಮಹಿಷ ಬೆಟ್ಟ ಎಂದು ಹೆಸರಿಡಲಾಗುತ್ತಾ ಎಂಬ ಚರ್ಚೆ ನಡೆಯುತ್ತಿದೆ.
ಮಹಿಷಾಸುರ ಯಾರು? : ಕಳಿಂಗ ಯುದ್ಧದ ನಂತರ ಅಶೋಕ ಮಹಾರಾಜನು ಬೌದ್ಧ ಧರ್ಮ ಸ್ವೀಕಾರ ಮಾಡಿದ. ನಂತರ ಬೌದ್ಧ ಧರ್ಮ ಪ್ರಚಾರ ಮಾಡಲು ಧರ್ಮ ಪ್ರಚಾರಕರನ್ನು ನೇಮಕ ಮಾಡಿದ. ಈ ಪೈಕಿ ಇಂದಿನ ಮೈಸೂರಿಗೆ ಧರ್ಮ ಪ್ರಚಾರಕನಾಗಿ ದ್ರಾವಿಡ ದೊರೆ ಮಹಿಷ ನೇಮಕಗೊಂಡ. ಹೀಗಾಗಿ ಮೈಸೂರು ನಗರ, ಸಂಸ್ಥಾನದ ಹೆಸರಿಗೂ ಕೂಡಾ ಮಹಿಷನ ಹೆಸರು ಸಂಬಂಧಿಸಿದೆ.
1449ರಲ್ಲಿ ಈ ಪ್ರಾಂತ್ಯಕ್ಕೆ ಮಹಿಷ ಎಂದು ಹೆಸರಿಡಲಾಗಿದೆ ಎಂದು ಕೆಲವರು ವಾದಿಸುತ್ತಾರೆ. ಇನ್ನು ಮಹಿಷಾಸುರ ಮಾನವೀಯ ಕಾಳಜಿ ಉಳ್ಳ ಬೌದ್ಧ ರಾಜ. ಬುಡಕಟ್ಟು ನಿವಾಸಿಗಳ ಜನಪ್ರಿಯ ನಾಯಕ. ಇವನ್ನೆಲ್ಲ ಸಹಿಸದ ಪುರೋಹಿತ ಶಾಹಿ, ಆರ್ಯರು ಆತ ಅಸುರ, ಆತನನ್ನು ಚಾಮುಂಡಿ ಮರ್ಧಿಸಿದಳು ಎಂದು ಕಥೆ ಕಟ್ಟಿದ್ದಾರೆ ಎಂದು ಕೆಲವರು ವಾದಿಸುತ್ತಾರೆ.
ಮತ್ತೊಂದೆಡೆ ದುರ್ಗೆ ಮತ್ತು ಮಹಿಷಾಸುರನ ನಡುವೆ ಒಂಬತ್ತು ದಿನಗಳ ಕಾಲ ಭೀಕರ ಯುದ್ಧ ನಡೆದು ಹತ್ತನೇ ದಿನ ದುರ್ಗಾ ದೇವಿ ಮಹಿಷಾಸುರನನ್ನು ಕೊಂದಳು ಎನ್ನಲಾಗುತ್ತದೆ. ಮಹಿಷಾಸುರನೆಂಬ ರಾಕ್ಷಸ ಭೂ ಲೋಕದಲ್ಲಿ ಬಹಳಷ್ಟು ದೌರ್ಜನ್ಯವೆಸಗುತ್ತಿದ್ದನಂತೆ. ಹೀಗಾಗಿ ದಶಮಿಯ ದಿನದಂದು, ಮಹಿಷಾಸುರನನ್ನು ತಾಯಿ ಕೊಂದಳು ಎನ್ನಲಾಗುತ್ತದೆ. ಸದ್ಯ ಈ ಬಗ್ಗೆ ನೂರಾರು ಕಥೆಗಳಿದ್ದು ಒಬ್ಬಬ್ಬರು ಒಂದೊಂದರ ಪರವಾಗಿ ವಾದ ಮಾಡುತ್ತಿದ್ದಾರೆ.
ಈ ಆಚರಣೆ ವಿರೋಧಿಸಿ ಅ.13 ರಂದು ಬಿಜೆಪಿಯಿಂದ ಚಲೋ ಚಾಮುಂಡಿ ಬೆಟ್ಟ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗೆ 8 ಗಂಟೆಗೆ ಈ ಚಲೋ ನಡೆಯಲಿದೆ ಎನ್ನಲಾಗಿದೆ.