ಪಹಣಿಯಲ್ಲಿ ಸೂಚಿತ ಅರಣ್ಯ ಪದ ತೆಗೆದುಹಾಕಿ

hos karimane
ಕರಿಮನೆ ಗ್ರಾಮದ ರೈತರ ಪಹಣಿಯಲ್ಲಿ ಸೂಚಿತ ಅರಣ್ಯ ಎಂದು ದಾಖಲಾಗಿರುವುದನ್ನು ರದ್ದು ಮಾಡಲು ಆಗ್ರಹಿಸಿ ಕರಿಮನೆ ಗ್ರಾಮಸ್ಥರ ವೇದಿಕೆಯಿಂದ ಎಡಿಸಿ ಸಿದ್ದಲಿಂಗ ರೆಡ್ಡಿಗೆ ಮನವಿ ಸಲ್ಲಿಸಲಾಯಿತು. ರಮೇಶ್ ಹೆಗ್ಡೆ, ರಮೇಶ, ಪರ್ವತಗೌಡ, ಹರೀಶ್, ಅಂಬರೀಷ್, ಸತೀಶ್ ಇದ್ದರು.
Published on

ಹೊಸನಗರ: ಅರಣ್ಯ ಅಧಿಸೂಚನೆ ಹೊರಡಿಸದ ಹಾಗೂ ಮ್ಯಟೇಷನ್ ಆಗದಿದ್ದರೂ ತಾಲೂಕಿನ ಕರಿಮನೆ ಭಾಗದ ರೈತರ ಪಹಣಿಯಲ್ಲಿ ಸೂಚಿತ ಅರಣ್ಯ ಎಂದು ದಾಖಲು ಮಾಡಿರುವುದನ್ನು ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿ ಕರಿಮನೆ ಗ್ರಾಮಸ್ಥರ ವೇದಿಕೆ ಕಾರ್ಯಕರ್ತರು ಎಡಿಸಿ ಸಿದ್ದಲಿಂಗ ರೆಡ್ಡಿಗೆ ಮನವಿ ಸಲ್ಲಿಸಿದರು.

ಗ್ರಾಮದ ಸರ್ವೇ ನಂ. 8, 27, 72, 106, 124, 144, 189ರ ಪಹಣಿಯ ಕಾಲಂ 9ರಲ್ಲಿ ಸೂಚಿತ ಅರಣ್ಯ ಎಂದು ದಾಖಲಾಗಿದೆ. ಆದರೆ ಕಂದಾಯ ಇಲಾಖೆ ದಾಖಲೆಯಲ್ಲಿ ದನದ ಮುಫತ್ತು ಎಂದಿದೆ. ರೈತರು ತಮ್ಮದಲ್ಲದ ತಪ್ಪಿಗೆ ಅನ್ಯಾಯಕ್ಕೆ ಒಳಗಾಗಿದ್ದಾರೆ ಎಂದು ಮನವರಿಕೆ ಮಾಡಿಕೊಟ್ಟರು.

ಕರಿಮನೆ ಗ್ರಾಮದ 250ಕ್ಕೂ ಹೆಚ್ಚು ಕುಟುಂಬಗಳು ಮನೆ ಕಟ್ಟಿಕೊಂಡು, ಸಾಗುವಳಿ ಮಾಡಿಕೊಂಡು ತಲತಲಾಂತರದಿಂದ ಬದುಕಿ ಬಾಳುತ್ತಿದ್ದಾರೆ. ಜಮೀನಿನಲ್ಲಿ ಭತ್ತ, ಅಡಕೆ ತೋಟ, ದೇವಸ್ಥಾನ, ಅಂಗನವಾಡಿ, ಗ್ರಾಪಂ ಕಚೇರಿಗಳಿವೆ. ಆದರೆ ಯಾವುದೇ ಅರಣ್ಯ ಅಧಿಸೂಚನೆ ಇಲ್ಲದೆ, ಮ್ಯುಟೇಷನ್ ಆಗದೆ ಪಹಣಿಯಲ್ಲಿ ಸೂಚಿತ ಅರಣ್ಯ ಎಂದು ದಾಖಲು ಮಾಡಲಾಗಿದೆ ಎಂದು ದೂರಿದರು.

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರಂತೆ ಸೆಕ್ಷನ್ 94(ಎ), 94(ಬಿ), 94(ಸಿ), 94(ಸಿಸಿ) ನಿಯಮಗಳಡಿ ಬಗರ್ ಹುಕುಂ ಸಾಗುವಳಿ, ವಸತಿ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಪೆಂಡಿಂಗ್ ಇಡಲಾಗಿದೆ. ಇದರಿಂದ ಕರಿಮನೆ ಗ್ರಾಮಸ್ಥರು ಜಮೀನು ಮಾಲೀಕತ್ವದಿಂದ ವಂಚಿತರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮದ ಸರ್ವೇ ನಂ. 106ರ ಪಹಣಿಯ ಕಾಲಂ 9ರಲ್ಲಿ ಮೂಲತಃ ದನದ ಮುಫತ್ತು ಎಂದು ದಾಖಲಾಗಿತ್ತು. ನಂತರ ಸೂಚಿತ ಅರಣ್ಯ ಎಂದು ದಾಖಲಾಯಿತು. 2011ರಲ್ಲಿ ಮತ್ತು ದನದ ಮುಫತ್ತು ಎಂದು ಮರುದಾಖಲಾಗಿದೆ. ಮ್ಯುಟೇಷನ್ ಆಗದೆಯೇ ಸೂಚಿತ ಅರಣ್ಯ ಎಂದು ದಾಖಲು ಮಾಡಿರುವುದನ್ನು ಕೂಡಲೇ ರದ್ದುಪಡಿಸಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡ ರಮೇಶ ಹೆಗ್ಡೆ, ಗ್ರಾಮಸ್ಥರ ವೇದಿಕೆ ಅಧ್ಯಕ್ಷ ಎಸ್.ಪಿ.ಪರ್ವತಪ್ಪ ಗೌಡ, ಕಾರ್ಯದರ್ಶಿ ಎಸ್.ಎಂ.ಹರೀಶ್, ಗ್ರಾಪಂ ಉಪಾಧ್ಯಕ್ಷ ರಮೇಶ ಹಲಸಿನಳ್ಳಿ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಸತೀಶ ಪಟೇಲ್, ನಗರ ಸೊಸೈಟಿ ನಿರ್ದೇಶಕ ಸಾದಗಲ್ ಅಂಬರೀಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net