

ಬಾಳೆಹೊನ್ನೂರು: ಭಗವಂತನ ಸೃಷ್ಟಿ ಅದ್ಭುತ. ಅವನು ಕೊಟ್ಟ ಕೊಡುಗೆ ಅಮೂಲ್ಯ. ಎಲ್ಲವನ್ನೂ ಕೊಟ್ಟ ದೇವರನ್ನು ಮರೆಯದೆ ದಿನದಲ್ಲಿ ಎರಡು ನಿಮಿಷ ನೆನಪಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಶ್ರಾವಣ 2ನೇ ಸೋಮವಾರ ಶ್ರೀ ರಂಭಾಪುರಿ ಪೀಠದಲ್ಲಿ ಜರುಗಿದ ಪುರಾಣ ಪ್ರವಚನ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಮನುಷ್ಯನಲ್ಲಿರುವ ಸಿಟ್ಟು ಅವಗುಣಗಳನ್ನು ಹೊರಹಾಕಿದರೆ, ತಾಳ್ಮೆ ಎಂಬುದು ಒಳ್ಳೆಯ ಸಂಗತಿಗಳನ್ನು ಒಳಗೊಂಡಿರುತ್ತದೆ. ಅರ್ಥ ಮಾಡಿಕೊಳ್ಳುವ ಮನಸ್ಸು, ಕೈಜೋಡಿಸುವ ಸ್ನೇಹ, ಕ್ಷಮಿಸುವ ಗುಣ, ಸಮಾಧಾನ ಮಾಡುವ ಒಂದು ಹೃದಯ ಇವುಗಳೇ ಮನುಷ್ಯನ ನಿಜವಾದ ಆಸ್ತಿಗಳು ಎಂದರು.
ಕೆಲಸ ಮಾಡುವುದೊಂದೇ ನಮ್ಮ ಗುರಿಯಾಗಬೇಕು. ಜನ ಹೊಗಳಲಿ ಅಥವಾ ಹೊಗಳದಿರಲಿ, ಯಶಸ್ಸು ಸಿಗಲಿ ಅಥವಾ ಸಿಗದಿರಲಿ ಅದನ್ನು ಲೆಕ್ಕಿಸದೆ ಕಾರ್ಯನಿರ್ವಹಿಸಬೇಕು. ಲಾನುಲಗಳನ್ನು ಕೊಡುವುದು ಭಗವಂತನಿಗೆ ಸೇರಿದ್ದು. ಕಷ್ಟಗಳು ಬರುವುದು ಸುಖಾಗಮನದ ಹೆಗ್ಗುರುತು. ಕಷ್ಟಗಳು ಬರುವುದು ಮುಳುಗಿಸಲಿಕ್ಕಲ್ಲ. ಅವು ತೊಳೆದು ಶುಭ್ರಗೊಳಿಸುವುದಕ್ಕೆ ಎಂಬುದನ್ನು ನೆನಪಿಡಬೇಕಾಗುತ್ತದೆ ಎಂದು ತಿಳಿಸಿದರು.
ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಮಾಡಿದ ಮಾದನಹಿಪ್ಪರಗಿ ಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಜಗದ್ಗುರು ರೇಣುಕಾಚಾರ್ಯರು ಮಾಡಿದ ಧಾರ್ಮಿಕ ಮತ್ತು ಸಾಮಾಜಿಕ ಸತ್ಕ್ರಾಂತಿ ಎಲ್ಲ ಕ್ರಾಂತಿಗಳ ಮೂಲ ಸೆಲೆಯಾಗಿದೆ. ಜನಮನದಲ್ಲಿರುವ ದುಷ್ಟ ಪ್ರವೃತ್ತಿಗಳನ್ನು ದೂರ ಮಾಡಿ ಸಾತ್ವಿಕ ಶಕ್ತಿಯನ್ನು ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಗಂಗಾಧರ ಹಿರೇಮಠ ಅವರಿಂದ ಪ್ರಾರ್ಥನೆೆ ಜರುಗಿತು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು. 6 ಜನ ವೀರಮಹೇಶ್ವರ ವಟುಗಳಿಗೆ ಶಿವದೀಕ್ಷಾ ಅಯ್ಯಚಾರ ಜರುಗಿತು.
ಪ್ರಾತಃಕಾಲ ಶ್ರೀಪೀಠದ ಎಲ್ಲ ದೈವಗಳಿಗೆ ಶ್ರಾವಣ ಸೋಮವಾರದ ವಿಶೇಷ ಅಲಂಕಾರ ಮಾಡಲಾಗಿತ್ತು. ಲೋಕ ಕಲ್ಯಾಣಾರ್ಥವಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಭಕ್ತ ಸಮೂಹಕ್ಕೆ ಶುಭ ಹಾರೈಸಿದರು. ಗದುಗಿನ ರಾಜು ಮಲ್ಲಾಡದ, ಸೋಲ್ಲಾಪುರ ಜಿಲ್ಲೆ ಅಕ್ಕಲಕೋಟೆಯ ಸುಧೀರ ಭಾರತಿ ದಂಪತಿ, ಬ್ಯಾಡಗಿಯ ರವೀಂದ್ರ ಸುನಂದಾ ದಂಪತಿ, ಅಮ್ಮಿನಬಾವಿ ಸದ್ಭಕ್ತರು ಹಾಗೂ ಶಿವಮೊಗ್ಗ ಜಿಲ್ಲೆಯ ಭಕ್ತರು ಮಹಾಪೂಜೆಯಲ್ಲಿ ಪಾಲ್ಗೊಂಡಿದ್ದರು.