ಐಎಂಎ ಸಂತ್ರಸ್ತರಿಗೆ ರಂಜಾನ್‌ಗೂ ಮುನ್ನ ಪರಿಹಾರ

WhatsApp Image 2025-02-24 at 5.13.20 PM
Published on

ಬೆಂಗಳೂರು: ಐಎಂಎ (ಐ-ಮಾನಿಟರಿ ಅಡ್ವೈಸರಿ) ಬಹುಕೋಟಿ ವಂಚನೆ ಪ್ರಕರಣದ ಠೇವಣಿದಾರರಿಗೆ ರಂಜಾನ್ ಹಬ್ಬಕ್ಕೂ ಮುನ್ನ ನಿಗದಿತ ಪರಿಹಾರ ಹಣವನ್ನು ನೀಡುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದರು.

ಐಎಂಎ ಹಗರಣದಲ್ಲಿ ಜಪ್ತಿಯಾದ ಸ್ಥಿರಾಸ್ತಿ/ಚರಾಸ್ತಿಗಳ ವಿವರ ಮತ್ತು 7 ವರ್ಷದಲ್ಲಿ ಎಷ್ಟು ಜನರಿಗೆ ಎಷ್ಟು ಪ್ರಮಾಣದಲ್ಲಿ ಹಣ ಹಿಂತಿರುಗಿಸಲಾಗಿದೆ ಎಂಬುದರ ಕುರಿತು ಸೋಮವಾರ ವಿಕಾಸಸೌಧ ಕಂದಾಯ ಸಚಿವರ ನೇತೃತ್ವದಲ್ಲಿ ಸಭೆ ನಡೆಯಿತು. ಸಚಿವ ಜಮೀರ್ ಅಹ್ಮದ್, ಶಾಸಕರಾದ ರಿಜ್ವಾನ್ ಅರ್ಷದ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಭಾಗವಹಿಸಿದ್ದರು. ಸಭೆಯ ಬಳಿಕ ಮಾತನಾಡಿದ ಕೃಷ್ಣ ಬೈರೇಗೌಡ, ರಂಜಾನ್ ಹಬ್ಬಕ್ಕೂ 10 ದಿನ ಮೊದಲೇ ಐಎಂಎ ನಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋದವರಿಗೆ ಹೂಡಿಕೆಯ ಅನುಪಾತದ ಆಧಾರದಲ್ಲಿ ಪರಿಹಾರ ನೀಡಲು ಕ್ರಮವಹಿಸಲಾಗುವುದು ಎಂದರು.

ಹಣ ದ್ವಿಗುಣ ಆಸೆಯಿಂದ 1 ಲಕ್ಷಕ್ಕೂ ಅಧಿಕ ಠೇವಣಿದಾರರು 3213.58 ಕೋಟಿ ರೂ. ಐಎಂಎ ಕಂಪನಿಯಲ್ಲಿ ಹೂಡಿಕೆ ಮಾಡಿ ಮೋಸಕ್ಕೆ ಹೋಗಿದ್ದರು. ಕಂಪನಿಯ ಒಟ್ಟು ಠೇವಣಿದಾರರ ಸಂಖ್ಯೆ 69,069. ಈ ಪೈಕಿ 1400 ಕೋಟಿ ರೂ.ಗಳನ್ನು ಲಾಭಾಂಶದ ಮಾದರಿಯಲ್ಲಿ ಐಎಂಎ ಕಾಲಕಾಲಕ್ಕೆ ಠೇವಣಿದಾರರಿಗೆ ನೀಡುತ್ತಾ ಬಂದಿದೆ. ಹಗರಣ ಬೆಳಕಿಗೆ ಬಂದ ನಂತರ ವಿಶೇಷ ನ್ಯಾಯಾಲಯದ ಆದೇಶದಂತೆ ಕಂಪನಿ ಖಾತೆಯಲ್ಲಿದ್ದ 19.12 ಕೋಟಿ ರೂ.ಗಳನ್ನು 50,000 ರೂ.ಗಳಂತೆ 6858 ಸಂತ್ರಸ್ತರ ಖಾತೆಗಳಿಗೆ 2022ರ ಏಪ್ರಿಲ್‌ನಲ್ಲಿ ಜಮೆ ಮಾಡಲಾಗಿತ್ತು.

66.66 ಕೋಟಿ ರೂ.ಗಳನ್ನು 53,142 ಜನ ಸಂತ್ರಸ್ತರ ಖಾತೆಗಳಿಗೆ 2023 ನ.8ರಂದು ಜಮೆ ಮಾಡಲಾಗಿತ್ತು. 1.28 ಕೋಟಿ ರೂ.ಗಳನ್ನು 626 ಸಂತ್ರಸ್ತರ ಖಾತೆಗಳಿಗೆ 2024ರ ಮೇ 23ರಲ್ಲಿ ಜಮೆ ಮಾಡಲಾಗಿತ್ತು. 276 ಸಂತ್ರಸ್ತರಿಗೆ 36.14 ಲಕ್ಷ ರೂ.ಗಳನ್ನು 2024ರ ನ.7 ಜಮೆ ಮಾಡಿದ್ದು, ಈವರೆಗೆ 87.43 ಕೋಟಿ ರೂ.ಗಳನ್ನು 60,902 ಜನ ಸಂತ್ರಸ್ತರ ಖಾತೆಗಳಿಗೆ ಜಮೆ ಮಾಡಲಾಗಿದೆ.

ಐಎಂಎ ಕಂಪನಿಗೆ ಸಂಬಂಧಿಸಿದ ಹತ್ತಕ್ಕೂ ಹೆಚ್ಚು ಆಸ್ತಿಗಳನ್ನು ಸರ್ಕಾರ ವಶಕ್ಕೆ ಪಡೆದಿದೆ. ಚರಾಸ್ಥಿಗಳ ಮೌಲ್ಯ 106.92 ಕೋಟಿ ರೂ. ಮತ್ತು ಸ್ಥಿರಾಸ್ತಿಗಳ ಮೌಲ್ಯ 401.92 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದಲ್ಲದೆ, ಕಂಪನಿಗೆ ಸಂಬಂಧಿಸಿದ ವಿವಿಧ ಬ್ಯಾಂಕ್ ಖಾತೆಗಳಿಂದ 2.88 ಕೋಟಿ ರೂ. ನಗದು ಮತ್ತು 11.72 ರೂ. ಹೂಡಿಕೆ ಪತ್ರ, 11.06 ಕೋಟಿ ರೂ. ಸೇರಿದಂತೆ ಒಟ್ಟಾರೆ 534.5 ಕೋಟಿ ರೂ.ಗಳನ್ನು ಸರ್ಕಾರ ಮುಟ್ಟುಗೋಲು ಈಗಾಗಲೇ ಹಾಕಿದೆ ಎಂದರು.

ಆನ್‌ಲೈನ್‌ನಲ್ಲಿ ವರ್ಗಾವಣೆ :

ಸರ್ಕಾರ ಸಂತ್ರಸ್ತರನ್ನು ಗುರುತಿಸಲು ಆನ್‌ಲೈನ್‌ನಲ್ಲಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವ ಅವಕಾಶ ನೀಡಿತ್ತು. ಐಎಂಎ ಜತೆ ಆರ್ಥಿಕ ವ್ಯವಹಾರ ಮಾಡಿದ ಬ್ಯಾಂಕ್ ಖಾತೆ ಚಾಲ್ತಿಯಲ್ಲಿದ್ದರೆ ಅದನ್ನೇ ಅಧಿಕೃತ ಎಂದು ಪರಿಗಣಿಸಲಾಯಿತು. ಒಂದು ವೇಳೆ ಖಾತೆ ನಿಷ್ಕ್ರಿಯವಾಗಿದ್ದರೆ ಠೇವಣಿಪತ್ರ, ಷೇರುಪ್ರಮಾಣ ಪತ್ರದಂತಹ ದಾಖಲಾತಿಗಳನ್ನು ಕೋರಿತ್ತು. ಅರ್ಜಿ ಸಲ್ಲಿಸುವವರ ಮಾಹಿತಿಗಳನ್ನು ಐಎಂಎ ಸಂಸ್ಥೆಯಲ್ಲಿ ಇರುವ ದತ್ತಾಂಶದ ಜತೆಗೆ ಹೊಂದಾಣಿಕೆ ಮಾಡಿ ಹಾಗೂ ಆಧಾರ್, ಇತರ ಮಾಹಿತಿಗಳನ್ನು ಸಮೀಕರಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ. ಫಲಾನುಭವಿ ಮೃತಪಟ್ಟಿದ್ದರೆ ಠೇವಣಿದಾರರು ಸೂಚಿಸಿರುವ ನಾಮನಿರ್ದೇಶಿತ ವ್ಯಕ್ತಿಗೆ ಆ ಹಣ ನೀಡಲು ನಿರ್ಧರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net