

ನವದೆಹಲಿ; ಯೆಸ್ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಅನಿಲ್ ಅಂಬಾನಿ ಮಾಲಿಕತ್ವದ ರಿಲಾಯನ್ಸ್ ಗ್ರೂಪ್ಗೆ ಸೇರಿದ ಹಲವು ಕಂಪನಿಗಳ ಮೇಲೆ ದಾಳಿ ನಡೆಸಿದೆ.
ಇನ್ನೂ ಇದಕ್ಕೆ ಪ್ರತಿಯಾಗಿ ಜಾರಿ ನಿರ್ದೇಶನಾಲಯ (ED) ಇತ್ತೀಚೆಗೆ ತೆಗೆದುಕೊಂಡ ಜಾರಿ ಕ್ರಮಗಳು ಹಣಕಾಸು ಅಥವಾ ಪಾಲುದಾರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ರಿಲಯನ್ಸ್ ಪ್ರತಿಕ್ರಿಯೆ ನೀಡಿದೆ.
ಒಟ್ಟಾರೆಯಾಗಿ 50 ಕಂಪನಿಗಳ ಮೇಲೆ ಇಡಿ ರೇಡ್ ಮಾಡಿರುವುದಾಗಿ ತಿಳಿದುಬಂದಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಯಾದ ಪಿಎಂಎಲ್ಎ ಆ್ಯಕ್ಟ್ ಸೆಕ್ಷನ್ 17 ಅಡಿಯಲ್ಲಿ ಈ ದಾಳಿ ನಡೆಸಲಾಗಿದೆ.
ಈ ಕ್ರಮಗಳು ವ್ಯವಹಾರ ಕಾರ್ಯಾಚರಣೆಗಳು, ಆರ್ಥಿಕ ಕಾರ್ಯಕ್ಷಮತೆ, ಷೇರುದಾರರು, ಉದ್ಯೋಗಿಗಳು ಅಥವಾ ರಿಲಯನ್ಸ್ ಪವರ್‌ನ ಯಾವುದೇ ಇತರ ಪಾಲುದಾರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕಂಪನಿ ಹೇಳಿದೆ. ರಿಲಯನ್ಸ್ ಪವರ್ ಪ್ರತ್ಯೇಕ ಮತ್ತು ಸ್ವತಂತ್ರವಾದ ಘಟಕವಾಗಿದ್ದು, ತನಿಖೆಯ ಕೇಂದ್ರಬಿಂದುವಾಗಿರುವ ವರದಿಯ ಪ್ರಕಾರ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ (RCOM) ಅಥವಾ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (RHFL) ನೊಂದಿಗೆ ಯಾವುದೇ ವ್ಯವಹಾರ ಅಥವಾ ಆರ್ಥಿಕ ಸಂಪರ್ಕವನ್ನು ಹೊಂದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
(ಏಜೆನ್ಸೀಸ್)
ಬ್ಯಾಂಕುಗಳು, ಷೇರುದಾರರು, ಹೂಡಿಕೆದಾರರು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳನ್ನು ವಂಚಿಸುವ ಮೂಲಕ ಸಾರ್ವಜನಿಕ ಹಣವನ್ನು ಬೇರೆಡೆಗೆ ವಂಚಿಸಲು ಯೋಜಿಸಲಾದ ಯೋಜನೆಯನ್ನು ಪ್ರಾಥಮಿಕ ತನಿಖೆಗಳು ಬಹಿರಂಗಪಡಿಸಿವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ 2017 ಮತ್ತು 2019 ರ ನಡುವೆ ಯೆಸ್ ಬ್ಯಾಂಕಿನಿಂದ ಸುಮಾರು ರೂ.3000 ಕೋಟಿಗಳಷ್ಟು ಅಕ್ರಮ ಸಾಲ ವರ್ಗಾವಣೆಯಾಗಿದೆ ಎಂದು ತಿಳಿದುಬಂದಿದೆ ಎಂದು ಮತ್ತೊಬ್ಬ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಅನಿಲ್ ಅಂಬಾನಿ ಕಂಪನಿಗಳು ಬ್ಯಾಂಕ್‌ಗಳಿಂದ ಸಾಲ ಪಡೆದು ಹಣ ದುರುಪಯೋಗಪಡಿಸಿಕೊಂಡಿವೆ ಅಂತಾ ತನಿಖೆಗಳು ಹೇಳಿವೆ. ಕೋಟಿ ಕೋಟಿ ಸಾಲ ಪಡೆದು ತಮ್ಮ ಇತರೆ ಕಂಪನಿಗಳಿಗೆ ಕಾನೂನು ಬಾಹೀರವಾಗಿ ವರ್ಗಾವಣೆ ಮಾಡಲಾಗಿದೆ. ಆ ಮೂಲಕ ಸಾಮಾನ್ಯ ಜನರನ್ನ, ಹೂಡಿಕೆದಾರರನ್ನ ಮತ್ತು ಸರ್ಕಾರಿ ಸಂಸ್ಥೆಗಳನ್ನು ವಂಚಿಸಲಾಗಿದೆ ಎಂದು ಇಡಿ ಹೇಳಿದೆ.
ಯೆಸ್ ಬ್ಯಾಂಕ್ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (RHFL) ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್ (RCFL) ಗೆ ನೀಡಿದ ಎರಡು ಪ್ರತ್ಯೇಕ ಸಾಲಗಳಿಗೆ ಸಂಬಂಧಿಸಿದಂತೆ, ಸೆಪ್ಟೆಂಬರ್ 19, 2022 ರಂದು ಕೇಂದ್ರೀಯ ತನಿಖಾ ದಳ (CBI) ದಾಖಲಿಸಿದ ಎರಡು ಪ್ರಕರಣಗಳನ್ನು ಹಣಕಾಸು ಅಪರಾಧ ತನಿಖಾ ಸಂಸ್ಥೆ ವಹಿಸಿಕೊಂಡಿದೆ.