

ಬೆಂಗಳೂರು: ನಿನ್ನೆ (ಜೂ.11) ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣವೊಂದರಲ್ಲಿ ಬಂಧಿತರಾಗಿದ್ದು, ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇನ್ನು ದರ್ಶನ್ ಜತೆಗೆ ಅವರ ಆಪ್ತ ಸ್ನೇಹಿತೆ ನಟಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 13 ಆರೋಪಿಗಳನ್ನು ಅನ್ನಪೂರ್ಣೆಶ್ವರಿ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಸಂಪಾದಕೀಯ: ಅಭಿವೃದ್ಧಿಯೇ ಮುಖ್ಯವಾಗಲಿ
ನಟಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ರೇಣುಕಾಸ್ವಾಮಿಯ ಹತ್ಯೆ ಪ್ರಕರಣದಲ್ಲಿ ದರ್ಶನ್ರನ್ನು ಬಂಧಿಸಲಾಯಿತು. ಈ ಕೇಸ್ನಲ್ಲಿ ದರ್ಶನ್ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದ್ದು, ದರ್ಶನ್ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳಲ್ಲಿ ಒಬ್ಬರು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಸದ್ಯ ನಟನನ್ನು ಪೊಲೀಸರು ಅರೆಸ್ಟ್ ಮಾಡಿ, ವಿಚಾರಣೆಗೆ ಒಳಪಡಿಸಿದ್ದಾರೆ.
ಸದ್ಯ ನಟ ದರ್ಶನ್ ಬಂಧನದ ಬೆನ್ನಲ್ಲೇ ಅವರು ಅಭಿನಯದ ಬಹುನಿರೀಕ್ಷಿತ 'ಡೆವಿಲ್' ಸಿನಿಮಾದ ರಿಲೀಸ್ ಡೇಟ್ನಲ್ಲಿ ಇದೀಗ ಭಾರೀ ಬದಲಾವಣೆಯಾಗುವುದು ಬಹುತೇಕ ಖಚಿತವಾಗಿದೆ. ಈ ಹಿಂದೆಯೇ ಹೇಳಿದಂತೆ ಚಿತ್ರವನ್ನು ಇದೇ ವರ್ಷದ ಡಿಸೆಂಬರ್ನಲ್ಲಿ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿತ್ತು. ಈ ಕಾರಣದಿಂದಲೇ ಚಿತ್ರೀಕರಣದ ಕೆಲಸಗಳು ಕೂಡ ಭರದಿಂದ ಸಾಗುತ್ತಿತ್ತು. ಆದ್ರೆ, ನಟನ ಬಂಧನ ಈಗ ಸಿನಿಮಾದ ಕೆಲಸಗಳಿಗೆ ದೊಡ್ಡ ಬ್ರೇಕ್ ತಂದೊಡ್ಡಿದೆ.
'ಡೆವಿಲ್' ಜತೆಗೆ ಇನ್ನೂ ಮೂರು ಹೊಸ ಚಿತ್ರಗಳಲ್ಲಿ ದರ್ಶನ್ ಅಭಿನಯಿಸುವುದು ಖಚಿತವಾಗಿತ್ತು. ಆದರೆ, ಸದ್ಯದ ಮಟ್ಟಿಗೆ ಈ ಎಲ್ಲಾ ದೊಡ್ಡ ಯೋಜನೆಗಳು ಇದೀಗ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.